Namma Metro: ನಮ್ಮ ಮೆಟ್ರೋ ಸಂಪೂರ್ಣ ನೇರಳೆ ಮಾರ್ಗದಲ್ಲಿ ರೈಲು ಸಂಚಾರಕ್ಕೆ ಮುಹೂರ್ತ ಫಿಕ್ಸ್
ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಚಲ್ಲಘಟ್ಟದಿಂದ ವೈಟ್‌ಫೀಲ್ಡ್ ವರೆಗೆ ಸಂಪೂರ್ಣ ರೈಲು ಓಡಾಟಕ್ಕೆ ಮುಹೂರ್ತ ನಿಗದಿಯಾಗಿದೆ. ಸಂಪೂರ್ಣ ಮಾರ್ಗ ಉದ್ಘಾಟನೆಗೆ ವಿಳಂಬವಾದ ಕಾರಣ ಜನಾಕ್ರೋಶ ವ್ಯಕ್ತವಾಗಿದ್ದು, ಈಗ ಉದ್ಘಾಟನಾ ಕಾರ್ಯಕ್ರಮ ಇಲ್ಲದೆಯೇ ರೈಲು ಸಂಚಾರ ಆರಂಭಿಸಲು ಕೇಂದ್ರ ಸರ್ಕಾರ ಹೇಳಿದೆ.
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಕರ್ನಾಟಕ ಸರ್ಕಾರದ ಕಾರ್ಯದರ್ಶಿಗೆ ಪತ್ರ ಬರೆದಿದ್ದು ನಾಳೆಯಿಂದಲೇ (ಅಕ್ಟೋಬರ್ 9) ರೈಲು ಸಂಚಾರ ಆರಂಭಿಸಲು ಸೂಚನೆ ನೀಡಿದೆ. ಯಾವುದೇ ಅಧಿಕೃತ ಉದ್ಘಾಟನಾ ಸಮಾರಂಭದ ಅಗತ್ಯವಿಲ್ಲದೇ, ಪ್ರಯಾಣಿಕರ ಅನುಕೂಲದ ದೃಷ್ಟಿಯಿಂದ ಸಂಚಾರ ಆರಂಭಿಸಬಹುದು ಎಂದು ಕೇಂದ್ರ ಸಚಿವಾಲಯ ತಿಳಿಸಿದ್ದು, ನಾಳೆಯಿಂದ ಚಲ್ಲಘಟ್ಟ - ಕೆಂಗೇರಿ, ಬೈಯಪ್ಪನಹಳ್ಳಿ - ಕೆಆರ್ ಪುರ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭ ಖಚಿತವಾಗಿದೆ.

ಸೆಪ್ಟೆಂಬರ್ 21ರಂದು ನೇರಳೆ ಮಾರ್ಗದಲ್ಲಿ ಆರ್ ಪುರ - ಬೈಯಪ್ಪನಹಳ್ಳಿ ನಡುವಿನ 2-ಕಿಮೀ ಮಾರ್ಗದ ಸುರಕ್ಷತಾ ಪರಿಶೀಲನೆ ಮಾಡಿದ್ದ ಸಿಎಂಆರ್‌ಎಸ್ ಮೆಟ್ರೋ ಸಂಚಾರಕ್ಕೆ ಅನುಮತಿ ನೀಡಿತ್ತು. ನಂತರ ಸೆಪ್ಟೆಂಬರ್ 29ರಂದು ಕೆಂಗೇರಿ - ಚಲ್ಲಘಟ್ಟ ಮಾರ್ಗದಲ್ಲಿ ಸುರಕ್ಷತಾ ತಪಾಸಣೆ ಮಾಡಿ ರೈಲು ಸಂಚಾರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿತ್ತು.
ಅಕ್ಟೋಬರ್ 7ರಂದು ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭಿಸಲಾಗುತ್ತದೆ ಎಂದು ಹೇಳಿದ್ದರೂ ನಂತರ ಮುಂದೂಡಲಾಗಿತ್ತು, ಜನ ಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದರು ಉದ್ಘಾಟನೆಗಾಗಿ ರಾಜಕೀಯ ನಾಯಕರ ಡೇಟ್‌ಗೆ ಕಾಯಲಾಗುತ್ತಿದೆ ಎಂದು ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಜನಾಕ್ರೋಶಕ್ಕೆ ಮಣಿದ ಕೇಂದ್ರ ಮತ್ತು ರಾಜ್ಯ ಸರ್ಕಾರ ಉದ್ಘಾಟನಾ ಕಾರ್ಯಕ್ರಮ ಇಲ್ಲದೇ ಮೆಟ್ರೊ ಸಂಚಾರಕ್ಕೆ ಅನುಮತಿ ನೀಡಿದೆ.
ಉದ್ಯೋಗಿಗಳಿಗೆ ಭಾರಿ ಅನುಕೂಲ
44 ಕಿಮೀ ಉದ್ದದ ನೇರಳೆ ಮಾರ್ಗ ಸಂಪೂರ್ಣವಾಗಿ ಸಂಚಾರಕ್ಕೆ ಮುಕ್ತವಾಗಲಿದ್ದು, ನಮ್ಮ ಮೆಟ್ರೋದ ಅತಿ ಉದ್ದದ ಮೆಟ್ರೋ ಮಾರ್ಗ ಎನಿಸಿಕೊಳ್ಳಲಿದೆ. ಐಟಿ ಉದ್ಯೋಗಿಗಳಿಗೆ ಇದರಿಂದ ಭಾರಿ ಅನುಕೂಲವಾಗಲಿದ್ದು ಈ ಭಾಗದಲ್ಲಿ ಟ್ರಾಫಿಕ್ ದಟ್ಟಣೆ ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಲು ಈ ಮೆಟ್ರೋ ಮಾರ್ಗ ಸಹಕಾರಿಯಾಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.
ಚಲ್ಲಘಟ್ಟದಿಂದ ಕಾಡುಗೋಡಿ (ವೈಟ್‌ಫೀಲ್ಡ್) ವರೆಗೆ ಸಂಪೂರ್ಣವಾಗಿ ಮೆಟ್ರೋ ಸಂಚಾರ ಆರಂಭವಾದ ನಂತರ ಪ್ರತಿ ದಿನದ ಪ್ರಯಾಣಿಕರ ಸಂಖ್ಯೆಯಲ್ಲಿ 75000 ದಿಂದ 1 ಲಕ್ಷ ದಷ್ಟು ಹೆಚ್ಚಾಗುತ್ತದೆ ಎಂದು ಬಿಎಂಆರ್ ಸಿಎಲ್ ಅಂದಾಜು ಮಾಡಿದೆ.












Click it and Unblock the Notifications