Namma Metro: 'ನಮ್ಮ ಮೆಟ್ರೋದಲ್ಲಿ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಪಾಸ್ ನೀಡಬೇಕಷ್ಟೇ'
Namma Metro: ರಾಜ್ಯ ರಾಜಧಾನಿ ಬೆಂಗಳೂರು ಜೀವನಾಡಿ ಸಾರಿಗೆಗಳಲ್ಲಿ ನಮ್ಮ ಮೆಟ್ರೋ ಕೂಡ ಒಂದಾಗಿದೆ. ಪ್ರತಿನಿತ್ಯ ಸಾವಿರಾರು ಮಂದಿ ಇದರಲ್ಲಿ ಪ್ರಯಾಣ ಮಾಡುತ್ತಾರೆ. ಟ್ರಾಫಿಕ್ ಜಾಮ್‌ನಿಂದ ತಪ್ಪಿಸಿಕೊಳ್ಳಲು ಹಾಗೂ ಸಮಯ ಉಳಿತಾಯ ಮಾಡಲು ನಗರದ ಬಹುತೇಕ ಮಂದಿ ಮೆಟ್ರೋವನ್ನೇ ಅವಲಂಬನೆ ಮಾಡಿದ್ದಾರೆ. ಪ್ರಯಾಣ ದರ ದುಪ್ಪಟ್ಟಾಗಿದ್ದು, ಇದರ ವಿರುದ್ಧ ಎಎಪಿ ಸಮರ ಸಾರಿದೆ. ವಿದ್ಯಾರ್ಥಿಗಳಿಗೆ ರಿಯಾಯಿತಿ ದರದ ಪಾಸ್‌ಗಳನ್ನು ನೀಡಬೇಕೆಂದು ಒತ್ತಾಯಿಸಿದೆ.
ಹೌದು.. ನಗರದ ಬಹುತೇಕ ಮಂದಿ ಮೆಟ್ರೋವನ್ನು ಅವಲಂಬನೆ ಮಾಡಿದ್ದಾರೆ. ಆದರೆ, ಪ್ರಯಾಣ ದರ ಏರಿಕೆ ಮಾಡಿದ ಕಾರಣ ವಿದ್ಯಾರ್ಥಿಗಳಿಗೆ ಹೊರೆ ಆದಂತಾಗಿದೆ. ಈಗಾಗಲೇ ಈ ಕುರಿತು ಸಂಸದ ತೇಜಸ್ವಿ ಸೂರ್ಯ ಅವರು ಮಾತನಾಡಿ, ದರ ಇಳಿಸುವಂತೆ ಪ್ರಸ್ತಾಪ ಮಾಡುತ್ತಲಿದ್ದಾರೆ. ಆದರೂ ಅದೇ ದರ ಮುಂದುವರೆದಿದ್ದು, ಇದಕ್ಕೆ ಇದೀಗ ವ್ಯಾಪಕ ಆಕ್ರೋಶಗಳು ವ್ಯಕ್ತವಾಗಿವೆ.

ರಿಯಾಯಿತಿ ದರದಲ್ಲಿ ಪಾಸ್ ಕೊಡಿ: ಸದ್ಯ ಇದೀಗ ಆಮ್ ಆದ್ಮಿ ಪಕ್ಷವು ಈ ಬಗ್ಗೆ ಸಮರ ಸಾರಿದ್ದು, ನಮ್ಮ ಮೆಟ್ರೋದಲ್ಲಿ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದ ಪಾಸ್‌ಗಳನ್ನು ನೀಡಬೇಕೆಂದು ಒತ್ತಾಯಿಸಿದೆ. ಬುಧವಾರ ಅರಮನೆ ರಸ್ತೆಯ ಸಮೀಪ ಇರುವ ಆರ್‌ಸಿ ಕಾಲೇಜಿನ ಬಳಿ ಬೃಹತ್ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿದೆ. ನಮ್ಮ ಮೆಟ್ರೋದಲ್ಲಿ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಪಾಸ್ ನೀಡಬೇಕೆಂದು ಆಗ್ರಹಿಸಿ ಆಮ್ ಆದ್ಮಿ ಪಕ್ಷದ ಯುವ ಘಟಕದ ಸದಸ್ಯರು ವಿದ್ಯಾರ್ಥಿಗಳಿಂದ ಸಹಿಸಂಗಣ ಅಭಿಯಾನವಕ್ಕೆ ಚಾಲನೆ ನೀಡಿದ್ದು, ಸುಮಾರು 600 ಸಹಿ ಸಂಗ್ರಹ ಮಾಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಅಭಿಯಾನದ ಆರಂಭವನ್ನು ನಗರದ ಆರ್.ಸಿ.ಕಾಲೇಜಿನ ಬಳಿ ನಡೆಸಲಾಯಿತು. ಈ ವೇಳೆ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ಲೋಹಿತ್ ಹನುಮಾಪುರ ಸುದ್ದಿಗಾರರೊಂದಿಗೆ ಮಾತನಾಡಿ "ಅತ್ಯಂತ ದುಬಾರಿ ವೆಚ್ಚದ ನಮ್ಮ ಮೆಟ್ರೋದಿಂದಾಗಿ ವಿದ್ಯಾರ್ಥಿ ಸಮೂಹ ಸಂಪೂರ್ಣ ಮೆಟ್ರೋ ಅನುಕೂಲವನ್ನು ಪಡೆದುಕೊಳ್ಳಲು ಸಾಧ್ಯ ಆಗುತ್ತಿಲ್ಲ," ಎಂದು ಅಸಮಾಧಾನ ಹೊರಹಾಕಿದರು.
"ಬೆಂಗಳೂರಿನ ಸಂಚಾರ ದಟ್ಟಣೆಗಳಿಂದ ಸಮಯಕ್ಕೆ ಸರಿಯಾಗಿ ತಲುಪಲಾಗದೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟವು ಸಹ ಕುಸಿಯುತ್ತಿದೆ. ಈ ಕೂಡಲೇ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಪಾಸ್‌ಗಳನ್ನು ವಿತರಣೆ ಮಾಡಬೇಕು. ಇದಕ್ಕಾಗಿ ಸರ್ಕಾರವನ್ನು ಒತ್ತಾಯಿಸಲು ನಾವು ಲಕ್ಷಾಂತರ ವಿದ್ಯಾರ್ಥಿ ಸಮೂಹಗಳಿಂದ ಸಹಿ ಸಂಗ್ರಹಣ ಅಭಿಯಾನವನ್ನು ನಡೆಸುತ್ತಿದ್ದೇವೆ. ಆಗಲಾದರೂ ಸರ್ಕಾರಗಳು ಎಚ್ಚೆತ್ತುಕೊಳ್ಳಬೇಕು" ಎಂದು ಒತ್ತಾಯಿಸಿದರು.
ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಿ: ಯುವ ಘಟಕದ ಉಪಾಧ್ಯಕ್ಷ ಉಮೇಶ್ ಗೌಡ ಮಾತನಾಡಿ "ನಾವು ಸತತವಾಗಿ ಬೆಂಗಳೂರಿನ ಎಲ್ಲಾ ಶಾಲಾ ಕಾಲೇಜುಗಳ ಬಳಿ ತೆರಳಿ ಸರ್ಕಾರದ ಮೇಲೆ ಒತ್ತಡ ತರಲು ಸಹಿ ಸಂಗ್ರಹಣೆಯನ್ನ ಮಾಡುತ್ತಿದ್ದೇವೆ. ವಿದ್ಯಾರ್ಥಿ ಸಮೂಹ ಈ ಅಭಿಯಾನಕ್ಕೆ ಸಂಪೂರ್ಣ ಬೆಂಬಲವನ್ನು ಈಗಾಗಲೇ ಸೂಚಿಸುತ್ತಿದ್ದಾರೆ. ಎಲ್ಲರೂ ತಮ್ಮ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣಗಳ ಖಾತೆಗಳ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಪಕ್ಷಾತೀತವಾಗಿ ಎಲ್ಲಾ ನಾಯಕರು ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತೆ ಕ್ರಮ ಜರುಗಿಸಬೇಕು," ಎಂದು ಆಗ್ರಹಿಸಿದರು.
ಕಳೆದ ವರ್ಷದ ಫೆಬ್ರವರಿಯಲ್ಲಿ ಮೆಟ್ರೋ ದರ ಏರಿಕೆಯಾದ ಬಳಿಕ ವಿದ್ಯಾರ್ಥಿಗಳಿಂದ ರಿಯಾಯಿತಿ ಪಾಸ್‌ಗಾಗಿ ಬೇಡಿಕೆ ಹೆಚ್ಚಾಗಿದೆ. ಪ್ರಸ್ತುತ 15 ಕಿಲೋ ಮೀಟರ್‌ಗಿಂತ ಹೆಚ್ಚು ಪ್ರಯಾಣಿಸುವ ವಿದ್ಯಾರ್ಥಿಗಳು ತಿಂಗಳಿಗೆ ಟಿಕೆಟ್‌ಗಾಗಿ 3,360-4,320 ರೂಪಾಯಿವರೆಗೆ ತೆಗೆದಯುಕೊಳ್ಳುತ್ತಿದ್ದಾರೆ. ಇದೀಗ ಸದ್ಯದ ನಿಯಮದಂತೆ ಸ್ಮಾರ್ಟ್ ಕಾರ್ಡ್ ಬಳಕೆ ಮಾಡುವವರಿಗೆ ಪೀಕ್ ಅವರ್‌ನಲ್ಲಿ ಶೇಕಡ 5 ಮತ್ತು ಉಳಿದ ಸಮಯದಲ್ಲಿ ಶೇಕಡ 10ರಷ್ಟು ಮಾತ್ರ ರಿಯಾಯಿತಿ ಸಿಗುತ್ತಿದೆ. ಆದರೆ, ವಿದ್ಯಾರ್ಥಿಗಳಿಗೆ ಪ್ರತ್ಯೇಕವಾದ ಯಾವುದೇ ವಿಶೇಷ ರಿಯಾಯಿತಿಗಳನ್ನು ನಮ್ಮ ಮೆಟ್ರೋ ಇದುವರೆಗೆ ಘೋಣೆ ಮಾಡಿಲ್ಲ. ಆದ್ದರಿಂದ, ಇದೀಗ ಎಎಪಿ ಸಮರ ಸಾರಿದ್ದು, ವಿದ್ಯಾರ್ಥಿಗಳಿಗೆ ರಿಯಾಯಿತಿ ಪಾಸ್ ನೀಡುವಂತೆ ಒತ್ತಾಯಿಸಿದೆ.












Click it and Unblock the Notifications