Namma Metro: 3ನೇ ಹಂತದ ಯೋಜನೆಗೆ 'ಡಬಲ್ ಡೆಕ್ಕರ್' ಪ್ರಸ್ತಾವನೆಯೇ ಅಡ್ಡಿ!, ಮುಂದೇನು?
ಬೆಂಗಳೂರು, ಆಗಸ್ಟ್ 02: ಬೆಂಗಳೂರು ಮೆಟ್ರೋ ರೈಲು ನಿಗಮ (BMRCL)ವು ನಮ್ಮ ಮೆಟ್ರೋ ಮೂರನೇ ಹಂತ ಯೋಜನೆ ಆರಂಭಿಸಲು ಉತ್ಸುಕದಲ್ಲಿದೆ. ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಬಹುಕೋಟಿ ವೆಚ್ಚದ ಈ ಯೋಜನೆಗೆ ಅನುಮೋದನೆ ನೀಡಿದೆ. ಆದರೆ ಸಂಪುಟ ಅನುಮೋದನೆ ನೀಡುವ ಮೊದಲೇ BMRCL ಗೆ ಮತ್ತೊಂದು ತಲೆನೋವು ಶುರುವಾಗಿದೆ.
ಮೂರು ಎಲಿವೆಟೆಡ್ ಕಾರಿಡಾರ್‌ಗಳಲ್ಲಿ ಸರಿಸುಮಾರು 80 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ನಮ್ಮ ಮೆಟ್ರೋ ಮೂರನೇ ಹಂತದ ಯೋಜನೆಗೆ ಪ್ಲಾನ್ ಮಾಡಲಾಗಿದೆ. ಯೋಜನೆ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿತ್ತು. ಸುಮಾರು ರೂ.15000 ಕೋಟಿಯ ಯೋಜನೆಗೆ ಮತ್ತೊಂದು ಸವಾಲು ಎದುರಾಗಿದೆ.

ಬೆಂಗಳೂರು ನಮ್ಮ ಮೆಟ್ರೋ ರೈಲು ನಿಗಮವು (BMRCL) ಯೋಜನೆ ಆರಂಭಿಸಲು ಸಂಪುಟ ಅಂತಿಮ ಅನುಮೋದನೆಗೆ ಕಾಯುತ್ತಿದೆ. ಇತ್ತೀಚೆಗೆ ರಾಜ್ಯ ಸರ್ಕಾರ ಮುಂದಿನ ಎಲ್ಲ ನೂತನ ಮೆಟ್ರೋ ಮಾರ್ಗಗಳು ಡಬಲ್ ಡೆಕ್ಕರ್ ಮಾದರಿಯಲ್ಲಿ ನಿರ್ಮಿಸಬೇಕು ಎಂದು ಸೂಚಿಸಿದೆ.
ಹೊಸ ಪ್ರಸ್ತಾವನೆ, ಉದ್ದೇಶಿತ ಯೋಜನೆಗಳಿಗೆ ಅಡ್ಡಿ?
ಸರ್ಕಾರದ ಈ ಸೂಚನೆಯು ಈಗಾಗಲೇ ವರ್ಷಗಳ ಕಾಲ ಅಧ್ಯಯನ ಮಾಡಿ, ಜಾಗ ಗುರುತಿಸಿ, ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಿ, ಅಡೆತಡೆ ನಿವಾರಿಸಿ ಅನುಮೋದನೆ ಪಡೆಯಲಾಗಿದೆ. ಇನ್ನೇನು ಯೋಜನೆ ಆರಂಭವಾಗಬೇಕು ಎಂದಾಗಿ, ಈ ಡಬಲ್ ಡೆಕ್ಕರ್ ಮಾದರಿ ಮೆಟ್ರೋ ಮಾರ್ಗ ನಿರ್ಮಾಣದ ನಿರ್ಧಾರ (ಹೊಸ ಪ್ರಸ್ತಾವನೆ) ಬಿಎಂಆರ್‌ಸಿಎಲ್‌ಗೆ ಅಡ್ಡಿ ಆಗಲಿದೆ ಎಂಬುದು ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
ಯೋಜನೆಗೆ ಅಂತಿಮ ಒಪ್ಪಿಗೆ ನಿರೀಕ್ಷೆಯಲ್ಲಿದ್ದ ಅಧಿಕಾರಿಗಳು
ಈಗಾಗಲೇ ನಮ್ಮ ಮೆಟ್ರೋ 3ನೇ ಹಂತದ ಯೋಜನೆಗೆ ಸಾರ್ವಜನಿಕ ಹೂಡಿಕೆ ಮಂಡಳಿ ಒಪ್ಪಿಗೆ ನೀಡಿತ್ತು. ತದನಂತರವೇ ಹಣಕಾಸು ಸಚಿವಾಲಯವು ಅನುಮೋದನೆ ನೀಡಿತ್ತು. ಇದರ ಬೆನ್ನಲ್ಲೆ ಇನ್ನೇನು ಕೇಂದ್ರ ಸಂಪುಟದಿಂದ ಒಪ್ಪಿಗೆ ಸಿಗುತ್ತದೆ. ತಕ್ಷಣವೇ ಯೋಜನೆ ಆರಂಭಿಸಿದರಾಯಿತು ಎಂದುಕೊಂಡಿದ್ದ ಬಿಎಂಆರ್‌ಸಿಎಲ್‌ಗೆ ರಾಜ್ಯ ಸರ್ಕಾರದ ಡಬಲ್ ಡೆಕ್ಕರ್ ಮಾದರಿಯಲ್ಲಿ ಮೆಟ್ರೋ ಮಾರ್ಗ ನಿರ್ಮಾಣ ಪ್ರಸ್ತಾವ ಸವಾಲು ಒಡ್ಡಿದೆ.

ಯೋಜನೆಗೆ ಒಂದು ವೇಳೆ ಅನುಮೋದನೆ ದೊರೆತರೂ ನಮ್ಮ ಮೆಟ್ರೋ 3ನೇ ಹಂತ ಕಾಮಗಾರಿ ಆರಂಭವಾಗುವುದು ಅನುಮಾನ ಎನ್ನಲಾಗಿದೆ. ಏಕೆಂದರೆ ಯೋಜನೆ ಪ್ಲಾನ್ ಮತ್ತೊಮ್ಮೆ ಸಿದ್ದಪಡಿಸಿ, ಅಂದಾಜು ವೆಚ್ಚ ಪರಿಷ್ಕರಿಸಿ, ಇವೆಲ್ಲವುಗಳನ್ನು ಮತ್ತೆ ಚರ್ಚಿಸಿ ಸಂಬಂಧಿಸಿದ ಇಲಾಖೆಗಳಿಂದ ಮತ್ತೆ ಅನುಮೋದನೆ ಪಡೆಯುವ ಅನಿವಾರ್ಯತೆಯು ಎದುರಾಗಬೇಕು.
ಹೀಗಾದರೆ ಮತ್ತಷ್ಟು ವರ್ಷಗಳ ಕಾಲ ಮೂರು ಕಾರಿಡಾರ್‌ನಲ್ಲಿ ನಿರ್ಮಾಣವಾಗಬೇಕಿದ್ದ ಹಾಗೂ ನಮ್ಮ ಮೆಟ್ರೋ ಪ್ರಮುಖ ಯೋಜನೆ ವಿಳಂಬವಾಗುವ ಸಾಧ್ಯತೆ ಇದೆ.
ನಮ್ಮ ಮೆಟ್ರೋ 3ನೇ ಹಂತದ ಯೋಜನೆ
* ಮೊದಲ ಕಾರಿಡಾರ್: ಜೆ.ಪಿ ನಗರ ನಾಲ್ಕನೇ ಹಂತದಿಂದ ಕೆಂಪಾಪುರ ವರೆಗೆ ಮಾರ್ಗ (32.15 ಕಿ.ಮೀ.) ಯೋಜನೆ.
* ಹೆಬ್ಬಾಳ-ಸರ್ಜಾಪುರವರೆಗೆ ಮಾರ್ಗ (37 ಕಿ.ಮೀ.) ಯೋಜನೆ.
* ಎರಡನೇ ಕಾರಿಡಾರ್: ಹೊಸಹಳ್ಳಿ-ಮಾಗಡಿರಸ್ತೆ ಕಡುಬಗೆರೆ ನಿಲ್ದಾಣವರೆಗಿನ ಮಾರ್ಗ ಯೋಜನೆ.












Click it and Unblock the Notifications