Namma metro: 2031ರ ವೇಳೆಗೆ 317 ಕಿ.ಮೀ.ಗಳ ಮೆಟ್ರೋ ಮಾರ್ಗ ನಿರ್ಮಾಣ: ಸಿಎಂ ಮಾಹಿತಿ
ಬೆಂಗಳೂರು, ಅಕ್ಟೋಬರ್, 21: ಬೆಂಗಳೂರು ನಗರದ ಬೆಳವಣಿಗೆಯ ವೇಗಕ್ಕೆ ಅನುಗುಣವಾಗಿ ರಾಜ್ಯ ಸರ್ಕಾರವು 2031ರ ವೇಳೆಗೆ 317 ಕಿ.ಮೀ.ಗಳ ಮೆಟ್ರೋ ಮಾರ್ಗಗಳನ್ನು ನಿರ್ಮಿಸಲು ಸಿಎಂಪಿ ಪ್ಲಾನ್‌ನಲ್ಲಿ ಅನುಮೋದಿಸಿದೆ. 257 ಕಿ.ಮೀ.ಗಳ ಮಾರ್ಗವು ಕಾರ್ಯಾಚರಣೆ, ನಿರ್ಮಾಣ ಮತ್ತು ಯೋಜನೆ ಹಂತದಲ್ಲಿದ್ದು, ಇನ್ನುಳಿದ 60 ಕಿ.ಮೀ.ಗಳ ಮೆಟ್ರೊ ಮಾರ್ಗಗಳ ಕಾರ್ಯಸಾಧ್ಯತೆಯ ಸಮೀಕ್ಷೆಯನ್ನು ಶೀಘ್ರದಲ್ಲೇ ಕೈಗೊಳ್ಳಲಾಗುತ್ತದೆ. ಒಟ್ಟಾರೆ ಬೆಂಗಳೂರು ಜನತೆಗೆ ಸುಗಮ ಸಂಚಾರ ಸೌಲಭ್ಯಗಳನ್ನು ಒದಗಿಸಿಕೊಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಇನ್ನು ಹಂತ 1ರಲ್ಲಿ 14,133 ಕೋಟೋ ರೂಪಾಯಿ ವೆಚ್ಚದಲ್ಲಿ 42.3 ಕಿಲೋ ಮೀಟರ್ ಮೆಟ್ರೋ ನಿರ್ಮಿಸಲಾಗಿದ್ದು, ಈ ಯೋಜನೆಗೆ ರಾಜ್ಯ ಸರ್ಕಾರದಿಂದ 5,630 ಕೋಟಿ ವೆಚ್ಚ ಮಾಡಲಾಗಿದೆ. ಹಂತ-2ಕ್ಕೆ 30,695 ಕೋಟಿ ರೂಪಾಯಿ ವೆಚ್ಚದಲ್ಲಿ 75.06 ಕಿಲೋ ಮೀಟರ್ ಮೆಟ್ರೋ ನಿರ್ಮಿಸಲಾಗಿದ್ದು, ಇದಕ್ಕೆ ರಾಜ್ಯ ಸರ್ಕಾರದಿಂದ 11,583 ಕೋಟಿ ನೀಡಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.

ಹಾಗೆಯೇ ಓಆರ್‌ಆರ್ ಏರ್‌ಪೋರ್ಟ್ 58 ಕಿ.ಮೀ. ಮೆಟ್ರೋವನ್ನು 14,788.01 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಇದಕ್ಕೆ 4,775.36 ಕೋಟಿ ರೂಪಾಯಿ ವೆಚ್ಚವನ್ನು ರಾಜ್ಯ ಸರ್ಕಾರದಿಂದ ಮಾಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಟ್ವೀಟ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ನಮ್ಮ ಮೆಟ್ರೋದಲ್ಲಿ ಪುಂಡಾಟ
ಇತ್ತೀಚೆಗೆ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಪ್ರಯಾಣಿಕರಿಗೆ ಕಿರಿಕಿರಯಾಗುವಂತಹ ಒಂದಿಲ್ಲೊಂದು ಘಟನೆಗಳು ನಡೆಯುತ್ತಲೇ ಇವೆ. ಹಾಗೆಯೇ ಕಳೆದ ಎರಡು ದಿನಗಳ ಹಿಂದೆ ರಾತ್ರಿ 11 ಗಂಟೆಯ ಸುಮಾರಿಗೆ ವಿದ್ಯಾರ್ಥಿಗಳು ಮೆಟ್ರೋದಲ್ಲಿನ ಸರಳುಗಳನ್ನು ಹಿಡಿದು ರೋಲಿಂಗ್ ವ್ಯಾಯಾಮ ಮಾಡಿ ಹುಚ್ಚಾಟ ಮೆರೆದ ಘಟನೆ ಲೈನ್-2ನಲ್ಲಿ ನಡೆದಿತ್ತು.
ಮೀತ್ ಪಟೇಲ್ ಹಾಗೂ ಇತರೆ ಮೂವರು ವಿದ್ಯಾರ್ಥಿಗಳು ಮೆಟ್ರೋದಲ್ಲಿನ ಸರಳುಗಳನ್ನು ಹಿಡಿದು ರೋಲಿಂಗ್ ವ್ಯಾಯಾಮ ಮಾಡಿ ಹುಚ್ಚಾಟ ಮೆರೆದ ವರ್ತನೆಗೆ ಸಹಪ್ರಯಾಣಿಕರು ಕೂಡ ಕಿಡಿಕಾಡಿದ್ದರು. ಇನ್ನು ಉದ್ಧಟತನ ಮೆರೆದ ವಿದ್ಯಾರ್ಥಿಗಳ ವಿಡಿಯೋ ಮಾಡಿದ ಮೆಟ್ರೋ ಸಿಬ್ಬಂದಿಯು ಅದನ್ನು ಸೆಕ್ಯೂರಿಟಿ ಡಿಪಾರ್ಟ್ಮೆಂಟ್‌ಗೆ ತೋರಿಸಿದ್ದರು.
ಇನ್ನು ಈ ವಿಡಿಯೋದಲ್ಲಿ ಉದ್ಧಟತನ ತೋರಿದವರಿಗೆ ಯಲಚೇನಹಳ್ಳಿ ಮೆಟ್ರೋ ನಿಲ್ದಾಣದಲ್ಲಿಯೇ ಡಿಪಾರ್ಟ್ಮೆಂಟ್ & ಹೋಮ್ ಗಾರ್ಡ್ ಸಿಬ್ಬಂದಿ ಬಿಸಿ ಮುಟ್ಟಿಸಿದ್ದಾರೆ. ಬಳಿಕ ಮೆಟ್ರೋ ಪ್ರಾಟರ್ಟಿ ಡ್ಯಾಮೇಜ್ ಮಾಡಿದ ವಿದ್ಯಾರ್ಥಿಗಳಿಗೆ ತಲಾ ₹500 ದಂಡ ವಿಧಿಸಿದ್ದಲ್ಲದೆ, ಇನ್ಮುಂದೆ ಮೆಟ್ರೋದಲ್ಲಿ ಈ ರೀತಿಯ ವರ್ತನೆ ತೋರದಂತೆ ಎಚ್ಚರಿಕೆ ಕೂಡ ನೀಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿತ್ತು.












Click it and Unblock the Notifications