ನಾಗೇಂದ್ರ, ಸತೀಸ್ ಸೈಲ್ ಅಧಿವೇಶನಕ್ಕೆ ಹೋಗಬಹುದು!
ಬೆಂಗಳೂರು, ನ. 27 : ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಶಾಸಕರಲ್ಲಿ ಇಬ್ಬರಿಗೆ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಭಾಗವಹಿಸಲು ಸಿಬಿಐ ವಿಶೇಷ ನ್ಯಾಯಾಲಯ ಷರತ್ತು ಬದ್ಧ ಅನುಮತಿ ನೀಡಿದೆ. ಕಾರವಾರ ಕ್ಷೇತ್ರದ ಶಾಸಕ ಸತೀಶ್ ಸೈಲ್ ಮತ್ತು ಕೂಡ್ಲಿಗಿ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಅವರು ಅಧಿವೇಶನದಲ್ಲಿ ಭಾಗವಹಿಸಬಹುದು.
ಅಧಿವೇಶನದಲ್ಲಿ ಭಾಗವಹಿಸಲು ಅವಕಾಶ ನೀಡುವಂತೆ ಕೋರಿ ಶಾಸಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮಂಗಳವಾರ ನಡೆಸಿದ ನ್ಯಾಯಮೂರ್ತಿ ಶ್ರೀಶಾನಂದ ಅವರು, ಇಬ್ಬರು ಶಾಸಕರಿಗೆ ಅಧಿವೇಶನದಲ್ಲಿ ಭಾಗವಹಿಸಲು ಅವಕಾಶ ನೀಡಿದರು. ಒಟ್ಟು ನಾಲ್ವರು ಶಾಸಕರನ್ನು ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಬಂಧಿಸಲಾಗಿತ್ತು.(ಶಾಸಕ ಸತೀಶ್ ಗೆ ತಾತ್ಕಾಲಿಕ ಬೇಲ್, ನಾಗೇಂದ್ರಗೆ ಜೈಲ್)

ಇಬ್ಬರು ಶಾಸಕರಿಗೂ ತಲಾ ಮೂವರು ಪೊಲೀಸರ ಭದ್ರತೆ ಕಲ್ಪಿಸಬೇಕು. ನಾಗೇಂದ್ರ ತಮ್ಮ ಖಾಸಗಿ ಕಾರು ಕೆ.ಎ-34, ಎನ್-2992 ಸಂಖ್ಯೆಯ ಇನ್ನೋವಾ ಕಾರನ್ನೇ ಬಳಸಬೇಕು. ಯಾವುದೇ ಕಾರಣಕ್ಕೂ ಮಾಧ್ಯಮದವರು ಸೇರಿದಂತೆ ಖಾಸಗಿ ವ್ಯಕ್ತಿಗಳ ಜೊತೆ ಮಾಡನಾಡುವಂತಿಲ್ಲ. ಸ್ಥಿರ ದೂರವಾಣಿ ಹಾಗೂ ಮೊಬೈಲ್ ಬಳಸುವಂತಿಲ್ಲ ಎಂದು ನ್ಯಾಯಾಲಯ ಷರತ್ತು ವಿಧಿಸಿದೆ.
ಸತೀಶ್ ಸೈಲ್ ಮತ್ತು ಬಿ.ನಾಗೇಂದ್ರ ಅವರು ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಸತಿ ಗೃಹದಲ್ಲೇ ವಾಸ್ತವ್ಯ ಹೂಡಬೇಕು. ಪ್ರತಿದಿನ ಅಲ್ಲಿಂದಲೇ ಅಧಿವೇಶನಕ್ಕೆ ತೆರಳಬೇಕು ಎಂದು ಆದೇಶ ನೀಡಲಾಗಿದ್ದು, ಅಧಿವೇಶನ ಮುಗಿದ ಬಳಿಕ ಪರಪ್ಪನ ಅಗ್ರಹಾರ ಜೈಲಿಗೆ ಬಂದು ಸೇರಬೇಕು ಎಂದು ಸೂಚನೆ ನೀಡಲಾಗಿದೆ.
ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಕಂಪ್ಲಿ ಶಾಸಕ ಸುರೇಶ್ ಬಾಬು, ಕೂಡ್ಲಿಗಿ ಶಾಸಕ ನಾಗೇಂದ್ರ, ವಿಜಯನಗರ ಶಾಸಕ ಆನಂದ್ ಸಿಂಗ್ ಮತ್ತು ಕಾರವಾರ ಶಾಸಕ ಸತೀಶ್ ಸೈಲ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ಆದರೆ, ಅಧಿವೇಶನದಲ್ಲಿ ಭಾಗವಹಿಸಲು ಅನುಮತಿ ಕೋರಿ ನಾಗೇಂದ್ರ ಮತ್ತು ಸತೀಶ್ ಸೈಲ್ ಮಾತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.












Click it and Unblock the Notifications