Nagathihalli Chandrashekara: ಬೆಂಗಳೂರು ಪೀಣ್ಯ ಮೇಲ್ಸೇತುವೆ ಬಂದ್‌ಗೆ 'ನಾಗತಿಹಳ್ಳಿ ಚಂದ್ರಶೇಖರ್' ಭಾರೀ ಬೇಸರ
ಬೆಂಗಳೂರು, ಮಾರ್ಚ್ 16: ಸತತ ಎರಡು ವರ್ಷಗಳ ಕಾಲ ಸುರಕ್ಷತಾ ಕಾಮಗಾರಿ ಕೆಲಸ ಮಾಡಿದರೂ ಬೆಂಗಳೂರಿನ ಪ್ರಮುಖ ಮೇಲ್ಸೇತುವೆ ಮೇಲೆ ವಾಹನಗಳ ಸಂಚಾರವನ್ನು ದಿಢೀರ್ ನಿಷೇಧಿಸಲಾಗಿದೆ. ಭಾನುವಾರ ಬೆಳಗ್ಗೆ ಬೆಂಗಳೂರಿನಿಂದ ತುಮಕೂರು ಕಡೆ ಹೊರಟ ವಾಹನ ಸವಾರರಿಗೆ NHAI ಶಾಕ್ ನೀಡಿದೆ. ಪೀಣ್ಯ ಮೇಲ್ಸೇತುವೆ ಬಂದ್ ಮಾಡಿದ್ದಕ್ಕೆ ನಿರ್ದೇಶಕರು, ಬರಹಗಾರರಾದ ನಾಗತಿಹಳ್ಳಿ ಚಂದ್ರಶೇಖರ್ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಯಾವ ಮುನ್ಸೂಚನೆ ಕೊಡದೆ ಇಂದು ಭಾನುವಾರ ಮುಂಜಾನೆ ಪೀಣ್ಯ ಫ್ಲೈಓವರ್ ಬಂದ್ ಮಾಡಲಾಗಿದೆ. ಇದರಿಂದ ಪ್ರಯಾಣಿಕರಿಗೆ ನರಕ ದರ್ಶನವಾಗಿದೆ. ಅಂಬುಲೆನ್ಸ್ ಗಳು ತ್ವರಿತವಾಗಿ ಆಸ್ಪತ್ರೆ ತಲುಪಲಾಗದೇ ಪರದಾಡಿವೆ. ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ನಿರ್ಮಾಣವಾಗಿದೆ. ಮೇಲ್ಸೇತುವೆ ಬಂದ್ ನಿರ್ಧಾರದಿಂದ ಸಾರ್ವಜನಿಕರ ಸಮಯಕ್ಕೆ ಬೆಲೆಯೇ ಇಲ್ಲದಂತಾಗಿದೆ ಎಂದು ಅವರು ಅಸಮಾಧಾನ ಹೊರ ಹಾಕಿದ್ದಾರೆ.

ಪೀಣ್ಯ ಮೇಲ್ಸೆತುವೆ ಬಂದ್ ಮಾಡಿದ ಹಿನ್ನೆಲೆಯಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಅವರು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಮೇಲ್ಸೇತುವೆ ಬಂದ ಆಗಿದ್ದರಿಂದ ಉಂಟಾದ ಸಂಚಾರ ದಟ್ಟಣೆ, ಅದರಲ್ಲಿ ಸಿಲುಕಿ ಆಂಬುಲೆನ್ಸ್ ಕಾಣುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮುನ್ಸೂಚನೆ ನೀಡಿದೇ ಹೀಗೆ ಬಂದ್ ಮಾಡಿದರೆ ಸಾರ್ವಜನಿಕರಿಗೆ ಎಷ್ಟೆಲ್ಲ ತೊಂದರೆ ಆಗುತ್ತದೆ ಎಂದು ಅಧಿಕಾರಿಗಳ ವಿರುದ್ಧ ಗರಂ ಆದರು.
ತುಮಕೂರು ರಸ್ತೆ ಪ್ರಯಾಣಿಕರೇ ಗಮನಿಸಿ
ಬೆಂಗಳೂರಿನಿಂದ ತುಮಕೂರು ಮಾರ್ಗವಾಗಿ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಿಗೆ ಈ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಪೀಣ್ಯ ಬಳಿಕ ಈ ಉದ್ದದ ಮೇಲ್ಸೇತುವೆ ನಿರ್ಮಿಸಲಾಗಿದೆ. ನಿತ್ಯ ಸಾಗುವ ಸಾವಿರಾರು ವಾಹನಗಳಿಗೆ ಈ ಮೇಲ್ಸೇತುವೆ ಸಿಗ್ನಲ್ ಮುಕ್ತ ಸಂಚಾರ ಸೇವೆ ನೀಡುತ್ತದೆ. ಅದನ್ನು ಇಂದು ಭಾನುವಾರ (ಮಾರ್ಚ್ 16) ದಿಢೀರ್ ಮುಚ್ಚಲಾಗಿದೆ.
ಭಾರೀ ಹಾಗೂ ಲಘು ಸೇರಿ ಎಲ್ಲ ವಿಧದ ವಾಹನಗಳು ಪೀಣ್ಯ ಮೇಲ್ಸೇತುವೆ ಕೆಳಗಿನ ರಸ್ತೆಯಲ್ಲಿ ಚಲಿಸಿವೆ. ರಸ್ತೆ ಉದ್ದಕ್ಕೆ ಟ್ರಾಫಿಕ್ ಜಾಮ್ ಕಂಡು ಬಂದಿದೆ. ಆಂಬುಲೆನ್ಸ್ ಸೇರಿ ವಾಹನಗಳು ಸರದಿ ಸಾಲಿನಲ್ಲಿ ನಿಲ್ಲಬೇಕಾಯಿತು. ವಾಹನ ಸವಾರರು, ಪ್ರಯಾಣಿಕರು ಎಷ್ಟೋ ಹೊತ್ತು ರಸ್ತೆಗಳಲ್ಲೇ ಕಳೆಯಬೇಕಾಯಿತು.

ಪ್ರತಿ ಬುಧವಾರ ಪೀಣ್ಯ ಮೇಲ್ಸೇತುವೆ ಬಂದ್
ಪೀಣ್ಯ ಮೇಲ್ಸೇತುವೆಯಲ್ಲಿ ಎರಡು ವರ್ಷ ಸುರಕ್ಷತಾ ಕಾಮಗಾರಿ, ಕೇಬಲ್ ಇತರ ದುರಸ್ಥಿಯ ಕೆಲಸವನ್ನು ಅಧಿಕಾರಿಗಳು ನಡೆಸಿದ್ದರು. ಆದರೂ ಸಹಿತ ಮತ್ತೆ ಸಂಚಾರ ಅಡಚಣೆ ಉಂಟಾಗುತ್ತಿದೆ. ಇದೀಗ ಮತ್ತೆ ತುರ್ತು ನಿರ್ವಹಣಾ ಕಾರ್ಯ ಕೈಗೊಳ್ಳುವ ಹಿನ್ನೆಲೆಯಲ್ಲಿ ಪ್ರತಿ ಬುಧವಾರ ಈ ಮೇಲ್ಸೇತುವೆ ಮೇಲೆ ಸಂಚಾರ ಬಂದ್ ಮಾಡಲಾಗುವುದು ಎಂದು ಇತ್ತೀಚೆಗಷ್ಟೇ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ತಿಳಿಸಿತ್ತು. ಈ ಬಗ್ಗೆ ಖಚಿತಪಡಿಸಿದ್ದ ಬೆಂಗಳೂರು ನಗರ ಸಂಚಾರ ಪೊಲೀಸರು, ಅಡಚಣೆಗೆ ಸಾರ್ವಜನಿಕರ ಸಹಕಾರ ಕೋರಿದ್ದರು..
ಯಾವ ಮುನ್ಸೂಚನೆ ಕೊಡದೆ ಇಂದು ಭಾನುವಾರ ಮುಂಜಾನೆ ಪೀಣ್ಯ ಫ್ಲೈಓವರ್ ಬಂದ್ ಮಾಡಿ ಪ್ರಯಾಣಿಕರಿಗೆ ನರಕ ದರ್ಶನ. ಅಂಬುಲೆನ್ಸ್ ಗಳ ಪರದಾಟ. ಗಂಟೆಗಟ್ಟಲೆ ಟ್ರಾಫಿಕ್ ಜಾಮ್. ಸಾರ್ವಜನಿಕರ ಸಮಯಕ್ಕೆ ಬೆಲೆಯೇ ಇಲ್ಲ. pic.twitter.com/pvecnLwRiz
— Nagathihalli Chandrashekara (@NomadChandru) March 16, 2025
ಹಾಗಾದರೆ ಪ್ರತಿ ಬುಧವಾರ ಬದಲಾಗಿ ಇದೇನಿದು ಭಾನುವಾರ ದಿಢೀರ್ ವಾಹನಗಳಿಗೆ ನಿಷೇಧಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಸ್ಪಷ್ಟನೆ ನೀಡಬೇಕಿದೆ. ಮುನ್ಸೂಚನೆ ನೀಡದೇ ಬಂದ್ ಮಾಡಿದ್ದರಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆ ಉಂಟಾಯಿತು..












Click it and Unblock the Notifications