Namma Metro: ನಾಗಸಂದ್ರ-ಮಾದಾವರ ಮಾರ್ಗ, ಉದ್ಘಾಟನೆಗೆ ಸರ್ಕಾರಕ್ಕೆ ಪತ್ರ
ಬೆಂಗಳೂರು, ಅಕ್ಟೋಬರ್ 10: ಉದ್ಯಾನ ನಗರಿ ಬೆಂಗಳೂರಿನ ನಮ್ಮ ಮೆಟ್ರೋದ ವಿಸ್ತರಿತ ಮಾರ್ಗವೊಂದು ರೈಲು ಸಂಚಾರಕ್ಕೆ ಮುಕ್ತವಾಗಲಿದೆ. ತುಮಕೂರು ರಸ್ತೆಯ ಮಾರ್ಗ ಇದಾಗಿದ್ದು, ಈಗಾಗಲೇ ಮೆಟ್ರೋ ರೈಲು ಸುರಕ್ಷತಾ ಆಯುಕ್ತರು ರೈಲುಗಳ ವಾಣಿಜ್ಯ ಸಂಚಾರಕ್ಕೆ ಒಪ್ಪಿಗೆ ನೀಡಿದ್ದಾರೆ. ಬಿಎಂಆರ್‌ಸಿಎಲ್ ಉದ್ಘಾಟನಾ ದಿನಾಂಕ ನಿಗದಿ ಮಾಡಬೇಕು ಎಂದು ಸರ್ಕಾರಕ್ಕೆ ಪತ್ರವನ್ನು ಬರೆದಿದೆ.
ಈಗಾಗಲೇ ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ರೇಷ್ಮೆ ಸಂಸ್ಥೆ ಮತ್ತು ನಾಗಸಂದ್ರ ನಡುವೆ ಮೆಟ್ರೋ ರೈಲು ಸಂಚಾರ ನಡೆಸುತ್ತಿದೆ. ಬಿಎಂಆರ್‌ಸಿಎಲ್ ಈ ಮಾರ್ಗದ ವಿಸ್ತರಿತ ಯೋಜನೆಯಾದ ನಾಗಸಂದ್ರ-ಮಾದಾವರ ನಡುವಿನ ಕಾಮಗಾರಿ ಪೂರ್ಣಗೊಳಿಸಿದೆ. ಪ್ರಾಯೋಗಿಕ ಸಂಚಾರವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಈಗ ವಿಸ್ತರಿತ ಮಾರ್ಗದ 3.7 ಕಿಲೋಮೀಟರ್ ಮಾರ್ಗ ಸಂಚಾರಕ್ಕೆ ಸಿದ್ಧವಾಗಿದೆ. ರಾಜ್ಯ ಸರ್ಕಾರ ಉದ್ಘಾಟನಾ ದಿನಾಂಕವನ್ನು ನಿಗದಿಗೊಳಿಸಬೇಕಿದೆ. ಈ ಮಾರ್ಗದಲ್ಲಿ ಮೂರು ನಿಲ್ದಾಣಗಳಿವೆ. ನಮ್ಮ ಮೆಟ್ರೋ ರೈಲುಗಳ ಸಂಚಾರ ಆರಂಭವಾದರೆ ತುಮಕೂರು ರಸ್ತೆಯಿಂದ ಬೆಂಗಳೂರು ನಗರಕ್ಕೆ ಆಗಮಿಸುವ ವಾಹನ ಸವಾರರಿಗೆ ಅನುಕೂಲವಾಗಲಿದೆ.
ಬಿಎಂಆರ್‌ಸಿಎಲ್ ಪತ್ರ: ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ. ಮಹೇಶ್ವರ ರಾವ್ ನಾಗಸಂದ್ರ-ಮಾದಾವರ ನಡುವೆ ನಮ್ಮ ಮೆಟ್ರೋ ಸಂಚಾರ ಆರಂಭಕ್ಕೆ ದಿನಾಂಕ ನಿಗದಿ ಮಾಡುವಂತೆ ನಗರಾಭಿವೃದ್ಧಿ ಇಲಾಖೆಗೆ ಪತ್ರವನ್ನು ಬರೆದಿದ್ದಾರೆ. ಇಲಾಖೆ ಪತ್ರ ಬಂದಿರುವುದನ್ನು ಖಚಿತಪಡಿಸಿದ್ದು, ಅದನ್ನು ಉಪ ಮುಖ್ಯಮಂತ್ರಿ, ಬೆಂಗಳೂರು ನಗರಾಭಿವೃದ್ಧಿ ಖಾತೆ ಸಚಿವ ಡಿ. ಕೆ. ಶಿವಕುಮಾರ್‌ಗೆ ಕಳಿಸಲಾಗಿದೆ.
ರಾಜ್ಯ ಸರ್ಕಾರ ನಾಗಸಂದ್ರ-ಮಾದಾವರ ನಡುವೆ ನಮ್ಮ ಮೆಟ್ರೋ ರೈಲು ಸಂಚಾರದ ದಿನಾಂಕವನ್ನು ಅಂತಿಮಗೊಳಿಸಲಿದೆ. ಇದಕ್ಕೆ ಮೊದಲು ಕೇಂದ್ರ ಸಚಿವರ ದಿನಾಂಕದ ಲಭ್ಯತೆ ಕುರಿತು ಸಹ ಕೇಳಲಿದೆ. ಅಕ್ಟೋಬರ್ ಅಂತ್ಯದೊಳಗೆ ನಾಗಸಂದ್ರ-ಮಾದಾವರ ನಡುವೆ ನಮ್ಮ ಮೆಟ್ರೋ ಸಂಚಾರ ಆರಂಭವಾಗುವುದು ಖಚಿತವಾಗಿದೆ.
ನಮ್ಮ ಮೆಟ್ರೋ ಹಸಿರು ಮಾರ್ಗದ ವಿಸ್ತರಿತ ಯೋಜನೆ ನಾಗಸಂದ್ರ-ಮಾದಾವರ ನಡುವೆ ಮೂರು ನಿಲ್ದಾಣವಿದೆ. ಮಂಜುನಾಥ ನಗರ, ಚಿಕ್ಕಬಿದರಕಲ್ಲು (ಜಿಂದಾಲ್ ನಗರ), ಮಾದವರ (ಬಿಐಇಸಿ) ಮೂರು ನಿಲ್ದಾಣಗಳು ಹೊಸದಾಗಿ ಹಸಿರು ಮಾರ್ಗಕ್ಕೆ ಸೇರಲಿವೆ.
ವಿಸ್ತರಿತ ರೈಲು ಮಾರ್ಗದಲ್ಲಿ ಬಿಎಂಆರ್‌ಸಿಎಲ್ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಿ ಆಗಸ್ಟ್ 12 ರಿಂದ 17ರ ತನಕ ಸಿಗ್ನಲಿಂಗ್ ಸೇರಿದಂತೆ ವಿವಿಧ ಪರೀಕ್ಷೆ, ರೈಲುಗಳ ಪ್ರಾಯೋಗಿಕ ಸಂಚಾರವನ್ನು ನಡೆಸಿತ್ತು. ಅಕ್ಟೋಬರ್ 3ರಂದು ಮಾದಾವರ-ನಾಗಸಂದ್ರ ನಿಲ್ದಾಣಗಳ ನಡುವೆ ರೈಲ್ವೆ ಸುರಕ್ಷತಾ ಆಯುಕ್ತರು ಪರಿಶೀಲನೆ ನಡೆಸಿದ್ದರು. ಬಳಿಕ ಅಕ್ಟೋಬರ್ 4ರಂದು ಸದರಿ ಮಾರ್ಗದ ವಾಣಿಜ್ಯ ಸೇವೆಗೆ ಅನುಮತಿ ನೀಡಿದ್ದರು.
2017ರಲ್ಲಿ ಬಿಎಂಆರ್‌ಸಿಎಲ್ ಈ ವಿಸ್ತರಿತ ಮಾರ್ಗದ ಕಾಮಗಾರಿ ಕೈಗೊಂಡಿತ್ತು. ಕೇವಲ 3 ಕಿ. ಮೀ. ಮಾರ್ಗ ಇದಾಗಿದ್ದರೂ ಇದನ್ನು ಪೂರ್ಣಗೊಳಿಸಲು ಇಷ್ಟು ವರ್ಷ ಬೇಕಾಗಿದೆ. ಬಿಎಂಆರ್‌ಸಿಎಲ್ ಕೈಗೊಂಡ ಕಾಮಗಾರಿಗಳಲ್ಲಿ ಅತಿ ವಿಳಂಬವಾದ ಕಾಮಗಾರಿ ಇದಾಗಿದೆ. ಈ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭವಾದರೆ ನಗರದಲ್ಲಿ ನಮ್ಮ ಮೆಟ್ರೋ ಜಾಲ 76.95 ಕಿ. ಮೀ.ಗೆ ವಿಸ್ತರಣೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ ಸರ್ಕಾರ ತುಮಕೂರು ನಗರಕ್ಕೆ ಮೆಟ್ರೋ ಸಂಪರ್ಕವನ್ನು ಕಲ್ಪಿಸುವ ಚಿಂತನೆಯಲ್ಲಿದೆ. ಆದ್ದರಿಂದ ನಾಗಸಂದ್ರ-ಮಾದವರ ನಡುವಿನ ಮಾರ್ಗದ ರೈಲು ಆರಂಭ ಮಹತ್ವವನ್ನು ಪಡೆದಿದೆ. ಈ ವಿಸ್ತರಿತ ಮಾರ್ಗ ಸಂಚಾರಕ್ಕೆ ಮುಕ್ತವಾದರೆ ತುಮಕೂರಿಗೆ ಮೆಟ್ರೋ ಸಂಪರ್ಕ ಕಲ್ಪಿಸಲು ಇನ್ನೂ 52.41 ಕಿ. ಮೀ. ಮಾರ್ಗವನ್ನು ನಿರ್ಮಿಸಬೇಕು.












Click it and Unblock the Notifications