Namma Metro: ನಾಗಸಂದ್ರ-ಮಾದವರ ಮೆಟ್ರೋ ಮಾರ್ಗ ತಕ್ಷಣ ಉದ್ಘಾಟಿಸಿ, ಸಂಸದರ ಪತ್ರ
ಬೆಂಗಳೂರು, ಅಕ್ಟೋಬರ್ 16: ಬೆಂಗಳೂರು ನಗರದ ನಮ್ಮ ಮೆಟ್ರೋದ ವಿಸ್ತರಿತ ಮಾರ್ಗ ರೈಲು ಸಂಚಾರಕ್ಕೆ ಸಿದ್ಧವಾಗಿದೆ. ರೈಲ್ವೆ ಸುರಕ್ಷತಾ ಆಯುಕ್ತರು ನಾಗಸಂದ್ರ-ಮಾದಾವರ ನಡುವೆ ರೈಲು ಓಡಿಸಲು ಅಕ್ಟೋಬರ್ 4ರಂದು ಒಪ್ಪಿಗೆ ನೀಡಿದ್ದಾರೆ. ತುಮಕೂರು ರಸ್ತೆಯಲ್ಲಿ ಬರುವ ಮೆಟ್ರೋ ಮಾರ್ಗ ಇದಾಗಿದ್ದು, ಮೆಟ್ರೋ ರೈಲು ವಾಣಿಜ್ಯ ಸಂಚಾರ ಆರಂಭವಾಗಲು ಕರ್ನಾಟಕ ಸರ್ಕಾರ ಇನ್ನೂ ದಿನಾಂಕ ನಿಗದಿ ಮಾಡಬೇಕಿದೆ. ಈ ಮಾರ್ಗದಲ್ಲಿ ಮೂರು ನಿಲ್ದಾಣಗಳಿವೆ.
ಬಿಎಂಆರ್‌ಸಿಎಲ್ ಈ ಮಾರ್ಗದಲ್ಲಿ ಮೆಟ್ರೋ ರೈಲು ಸೇವೆ ಆರಂಭಿಸಲು ತಯಾರಾಗಿದೆ. ಈ ಕುರಿತು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ. ಮಹೇಶ್ವರ ರಾವ್ ನಮ್ಮ ಮೆಟ್ರೋ ಸಂಚಾರ ಆರಂಭಕ್ಕೆ ದಿನಾಂಕ ನಿಗದಿ ಮಾಡುವಂತೆ ನಗರಾಭಿವೃದ್ಧಿ ಇಲಾಖೆಗೆ ಪತ್ರವನ್ನು ಬರೆದಿದ್ದಾರೆ.

ಇಲಾಖೆ ಈ ಪತ್ರವನ್ನು ಉಪ ಮುಖ್ಯಮಂತ್ರಿ, ಬೆಂಗಳೂರು ನಗರಾಭಿವೃದ್ಧಿ ಖಾತೆ ಸಚಿವ ಡಿ. ಕೆ. ಶಿವಕುಮಾರ್‌ಗೆ ಕಳಿಸಿದೆ. ಸದ್ಯ ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ರೇಷ್ಮೆ ಸಂಸ್ಥೆ ಮತ್ತು ನಾಗಸಂದ್ರ ನಡುವೆ ಮೆಟ್ರೋ ರೈಲು ಸಂಚಾರ ನಡೆಸುತ್ತಿದೆ. ಈ ಮಾರ್ಗ ಉದ್ಘಾಟನೆಯಾದರೆ ಮೂರು ನಿಲ್ದಾಣಗಳು ಸೇರ್ಪಡೆಗೊಳ್ಳಲಿದ್ದು, ರೈಲುಗಳು ನಾಗಸಂದ್ರ-ಮಾದಾವರ ನಡುವೆ ಸಂಚಾರ ನಡೆಸಲಿವೆ.
ತೇಜಸ್ವಿ ಸೂರ್ಯ ಪತ್ರ: ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ ನಾಗಸಂದ್ರ-ಮಾದಾವರ ನಡುವೆ ನಮ್ಮ ಮೆಟ್ರೋ ರೈಲು ಸೇವೆ ತಕ್ಷಣ ಆರಂಭಿಸಬೇಕು ಎಂದು ಕೇಂದ್ರ ಸಚಿವರು, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್‌ಗೆ ಪತ್ರವನ್ನು ಬರೆದು ಆಗ್ರಹಿಸಿದ್ದಾರೆ. ಮಾರ್ಗ ಉದ್ಘಾಟನೆಯ ಅಗತ್ಯತೆ ಬಗ್ಗೆ ಪತ್ರದಲ್ಲಿ ವಿವರಣೆ ನೀಡಿದ್ದಾರೆ.
ಈ ಕುರಿತು ಡಿ. ಕೆ. ಶಿವಕುಮಾರ್ ಮತ್ತು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಖಾತೆ ಸಚಿವ ಮನೋಹರ್ ಲಾಲ್ ಕಟ್ಟರ್‌ಗೆ ತೇಜಸ್ವಿ ಸೂರ್ಯ ಪತ್ರವನ್ನು ಬರೆದಿದ್ದಾರೆ. ರೈಲ್ವೆ ಸುರಕ್ಷತಾ ಆಯುಕ್ತರಿಂದ ಬಿಎಂಆರ್‌ಸಿಎಲ್ ನಮ್ಮ ಮೆಟ್ರೋ ನಾಗಸಂದ್ರ-ಮಾದಾವರ ಮಾರ್ಗದಲ್ಲಿ ಮೆಟ್ರೋ ರೈಲು ಓಡಿಸಲು ಒಪ್ಪಿಗೆಯನ್ನು ಪಡೆದಿದೆ ಎಂದು ಹೇಳಿದ್ದಾರೆ.
3.14 ಕಿ. ಮೀ. ಮಾರ್ಗದಲ್ಲಿ ಮಂಜುನಾಥ ನಗರ, ಚಿಕ್ಕಬಿದರಕಲ್ಲು (ಜಿಂದಾಲ್ ನಗರ), ಮಾದವರ (ಬಿಐಇಸಿ) ಮೂರು ನಿಲ್ದಾಣಗಳಿವೆ. ಇದರಿಂದಾಗಿ ನಮ್ಮ ಮೆಟ್ರೋ ಜಾಲ 77 ಕಿ. ಮೀ.ಗೆ ವಿಸ್ತರಣೆಯಾಗಲಿದೆ, ಅಲ್ಲದೇ ತುಮಕೂರು ರಸ್ತೆಯಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಲಿದೆ ಎಂದು ಸಂಸದರು ಪತ್ರದಲ್ಲಿ ವಿವರಿಸಿದ್ದಾರೆ.
ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಜನರಿಗೆ ಅನುಕೂಲವಾಗುವಂತೆ ಆದಷ್ಟು ಬೇಗ ನಾಗಸಂದ್ರ-ಮಾದಾವರ ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲುಗಳನ್ನು ಓಡಿಸಲು ಒಪ್ಪಿಗೆಯನ್ನು ನೀಡಬೇಕು ಎಂದು ಪತ್ರದಲ್ಲಿ ಸಂಸದರು ಆಗ್ರಹಿಸಿದ್ದಾರೆ.
ನಮ್ಮ ಮೆಟ್ರೋ ಮಾರ್ಗ ರೈಲುಗಳ ಸಂಚಾರಕ್ಕೆ ಸಿದ್ಧವಾಗಿದೆ. ರಾಜ್ಯ ಸರ್ಕಾರ ಉದ್ಘಾಟನಾ ದಿನಾಂಕವನ್ನು ನಿಗದಿಗೊಳಿಸಬೇಕಿದೆ. ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭವಾದರೆ ತುಮಕೂರು ರಸ್ತೆಯಿಂದ ಬೆಂಗಳೂರು ನಗರಕ್ಕೆ ಆಗಮಿಸುವ ಜನರಿಗೆ ಅನುಕೂಲವಾಗಲಿದೆ, ರಸ್ತೆಯಲ್ಲಿ ವಾಹನ ದಟ್ಟಣೆಯೂ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಬಿಎಂಆರ್‌ಸಿಎಲ್ ಈ ಮಾರ್ಗದಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಿ ಆಗಸ್ಟ್ 12 ರಿಂದ 17ರ ತನಕ ಸಿಗ್ನಲಿಂಗ್ ಸೇರಿದಂತೆ ವಿವಿಧ ಪರೀಕ್ಷೆ, ರೈಲುಗಳ ಪ್ರಾಯೋಗಿಕ ಸಂಚಾರವನ್ನು ಯಶಸ್ವಿಯಾಗಿ ನಡೆಸಿತ್ತು. ಬಳಿಕ ರೈಲ್ವೆ ಸುರಕ್ಷತಾ ಆಯುಕ್ತರನ್ನು ಮಾರ್ಗದ ಪರಿಶೀಲನೆಗಾಗಿ ಆಹ್ವಾನಿಸಿತ್ತು.
ಅಕ್ಟೋಬರ್ 3ರಂದು ಮಾದಾವರ-ನಾಗಸಂದ್ರ ನಿಲ್ದಾಣಗಳ ನಡುವೆ ರೈಲ್ವೆ ಸುರಕ್ಷತಾ ಆಯುಕ್ತರು ಪರಿಶೀಲನೆ ನಡೆಸಿದ್ದರು. ಬಳಿಕ ಅಕ್ಟೋಬರ್ 4ರಂದು ಸದರಿ ಮಾರ್ಗದ ವಾಣಿಜ್ಯ ಸೇವೆಗೆ ಅನುಮತಿ ನೀಡಿದ್ದರು. ಆದರೆ ಮಾರ್ಗದಲ್ಲಿ ರೈಲುಗಳ ಸಂಚಾರಕ್ಕೆ ದಿನಾಂಕ ನಿಗದಿಯನ್ನು ಸರ್ಕಾರ ಮಾಡಬೇಕಿದೆ.












Click it and Unblock the Notifications