Bengaluru Road: ನಾಗರಬಾವಿ ಬ್ರಿಡ್ಜ್-ಸುಮನಹಳ್ಳಿ ರಸ್ತೆ ಅಸ್ತವ್ಯಸ್ಥ: ವಾಹನ ಸವಾರರ ಪರದಾಟ- ಪ್ರತಿಭಟನೆ ಎಚ್ಚರಿಕೆ!
ಬೆಂಗಳೂರು ಏಪ್ರಿಲ್ 11: ಬೆಂಗಳೂರಿನ ನಾಗರಬಾವಿ ಬ್ರಿಡ್ಜ್-ಸುಮನಹಳ್ಳಿ ರಸ್ತೆ ತೀರಾ ಹದಗೆಟ್ಟಿದ್ದು ವಾಹನ ಸವಾರರು ಪರದಾಡುವಂತಾಗಿದೆ. ಇದರಿಂದಾಗಿ ರಸ್ತೆ ಸರಿಪಡಿಸದೇ ಇದ್ದಲಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಲಾಗಿದೆ.
ಕಳೆದ ನಾಲ್ಕು ತಿಂಗಳ ಹಿಂದೆ ಪೈಪ್ ಹಾಕಲು ಎರಡು ಕಿ.ಮೀ.ಸರ್ವಿಸ್ ರಸ್ತೆ ಅಗೆಯಲಾಗಿತ್ತು. ಅದಾದ ಬಳಿಕ ಜೆಲ್ಲಿಕಲ್ಲು ಹಾಕಿ ಹಾಗೇ ಬಿಡಲಾಗಿದೆ. ಹೀಗಾಗಿ ಬೈಕ ಸವಾರರು ಪ್ರಾಣವನ್ನು ಅಂಗೈಯಲ್ಲಿ ಹಿಡಿದುಕೊಂಡು ರಸ್ತೆಗಿಳಿಯುವ ಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಸರಿ ಮಾಡದೆ ಗುತ್ತಿಗೆದಾರರು ಜೆಲ್ಲಿ ಹಾಕಿ ಹಾಗೇ ಬಿಟ್ಟಿದ್ದಾರೆ. ಇದು ಸಾರ್ವಜನಿಕರ ಕೋಪಕ್ಕೆ ಗುರಿಯಾಗಿದೆ.

ನಾಗರಬಾವಿ 2ನೇ ಹಂತದಲ್ಲಿರುವ ನಾಗರಬಾವಿ ಬ್ರಿಡ್ಜ್‌ನಿಂದ ಸುಮ್ಮನಹಳ್ಳಿ ಕಡೆಗೆ ಹೋಗುವ ಸುಮಾರು 2 ಕಿ.ಮೀ ರಸ್ತೆ ಸರ್ವೀಸ್ ರಸ್ತೆ ಅವ್ಯವಸ್ಥೆಯಿಂದ ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಸುಮನಹಳ್ಳಿ ಕಡೆಯಿಂದ ನಾಗರಬಾವಿ ಬ್ರಿಡ್ಜ್ ಕಡೆಗೆ ಸಾಗುವ ರಿಂಗ್ ರಸ್ತೆಗೆ ಹೊಂದಿಕೊಂಡಿರುವ ಸರ್ವೀಸ್ ರಸ್ತೆಯಲ್ಲಿ ಪೈಪ್‌ಲೈನ್ ಅಳವಡಿಸಲು ಕಳೆದ ನಾಲ್ಕು ತಿಂಗಳ ಹಿಂದೆ ಭೂಮಿ ಅಗೆಯಲಾಗಿತ್ತು. ನಂತರ ಕಾಮಗಾರಿ ಮುಗಿದ ಬಳಿಕ ಆಗೆದ ಗುಂಡಿಯನ್ನು ಮಣ್ಣಿನಿಂದ ಮುಚ್ಚಿ, ಡಾಂಬರೀಕರಣ ಮಾಡಬೇಕಾದವರು ಜೆಲ್ಲಿ ಕಲ್ಲು ಹಾಕಿ ರಸ್ತೆಯನ್ನೇ ಮರೆತುಬಿಟ್ಟಿದ್ದಾರೆ.
ಇದರಿಂದ ನಿತ್ಯವೂ ಬೈಕ್ ಸವಾರರು ಬಿದ್ದು ಗಾಯ ಮಾಡಿಕೊಳ್ಳುತ್ತಿದ್ದರೂ ಕೇಳುವವರೇ ಇಲ್ಲವಾಗಿದೆ. ಸುಮನಹಳ್ಳಿ ಮೇಲ್ಸೇತುವೆ ಮಾರ್ಗವು ಮೈಸೂರು ರಸ್ತೆಗೆ(ನಾಯಂಡಳ್ಳಿ) ಸಂಪರ್ಕ ಕಲ್ಪಿಸುವ ವರ್ತುಲ ರಸ್ತೆಯಾಗಿದೆ. ಪ್ರತಿ ದಿನವೂ ಸಾವಿರಾರು ಸಂಖ್ಯೆಯಲ್ಲಿ ಸರಕು ಸಾಗಣೆ ವಾಹನಗಳು (ಹೆವೀ ವೆಹಿಕಲ್) ಸಂಚರಿಸುತ್ತವೆ. ಇದೇ ರಸ್ತೆಯಲ್ಲಿ ಮಕ್ಕಳನ್ನು ದ್ವಿಚಕ್ರದಲ್ಲಿ ಶಾಲೆ ಕರೆದುಕೊಂಡು ಹೋಗುವ ಪೋಷಕರ ಸಂಖ್ಯೆಯೂ ಕಡಿಮೆಯಿಲ್ಲ. ನಮ್ಮೂರತಿಂಡಿ ಹೋಟೆಲ್ ಸಮೀಪದಿಂದ ಚಿಮ್‌ವರೆಗೆ ಸುಮಾರು ಒಂದೂವರೆ ಕಿ.ಮೀ ಸರ್ವಿಸ್ ರಸ್ತೆಯನ್ನು ಅಗೆದು ಜೆಲ್ಲಿಕಲ್ಲಿನಿಂದ ಮುಚ್ಚಿದ್ದು ಡಾಂಬರೀಕರಣವಾಗಿಲ್ಲ.

ಈ ರಸ್ತೆಯಲ್ಲಿ ಹೆವೀ ವಹಿಕಲ್‌ಗಳು ಸಂಚರಿಸುವಾಗ ಬೈಕ್ ಸವಾರರು, ಅನಿವಾರ್ಯವಾಗಿ ರಸ್ತೆಯ ಇಕ್ಕೆಲುಗಳಲ್ಲಿ ಹೋಗಿ ಸಂಚರಿಸಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ದ್ವಿಚಕ್ರ ವಾಹನಗಳು ವರ್ತುಲ ರಸ್ತೆಯ ತುದಿಗೆ ಸಾಗುತ್ತಿದ್ದಂತೆ ಜೆಲ್ಲಿ ಕಲ್ಲಿನ ಮೇಲೆ ಬಿದ್ದು ಗಾಯ ಮಾಡಿಕೊಂಡ ಅನೇಕ ಉದಾಹರಣೆಗಳು ಇವೆ. ಸ್ಥಳೀಯರು ಈ ಬಗ್ಗೆ ಸುಮನಹಳ್ಳಿ ಮೇಲ್ಸೇತುವೆ ಉಸ್ತುವಾರಿ ಹೊತ್ತಿರುವ ಬಿಡಿಎಗೆ ಈ ಬಗ್ಗೆ ಹಲವು ಬಾರಿ ಮನವಿ ಮಾಡಿಕೊಂಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಇಷ್ಟೇ ಅಲ್ಲ, ನಮ್ಮೂರ ತಿಂಡಿ ಹೋಟೆಲ್‌ನಿಂದ ನಾಗರಬಾವಿ ಬ್ರಿಡ್ಜ್ ಕಡೆಗೆ ಸಾಗುವ ರಸ್ತೆಯ ಎಡ ಬದಿಯ 800 ಮೀಟರ್ ಸರ್ವೀಸ್ ರಸ್ತೆಯ ಹಣೆಬರಹವು ಇದೇ ಆಗಿದೆ. ಇಲ್ಲೂ ಕೂಡ ಪೈಪ್‌ಲೈನ್‌ಗೆಮದು ಆಗೆದಿದ್ದು, ಸರಿಯಾಗಿ ಮುಚ್ಚಿಲ್ಲ. ಜೆಲ್ಲಿ ಹಾಕಿದ್ದು ಬಿಟ್ಟರೆ ಡಾಂಬರೀಕರಣ ಮಾಡಿಲ್ಲ. ಸೇತುವೆ ಮತ್ತು ಅಕ್ಕಪಕ್ಕದ ಸರ್ವಿಸ್ ರಸ್ತೆ ನಿರ್ವಹಣೆ ಬಿಡಿಎ ವ್ಯಾಪ್ತಿಗೆ ಬರುತ್ತದೆಯಾದರೂ, ಸುರಸ್ತಿಗೆ ಕ್ರಮಕೈಗೊಳ್ಳದ ಬಿಡಿಎ ಅಧಿಕಾರಿಗಳು ಇತ್ತ ತಲೆ ಹಾಕಿಲ್ಲ ಎಂದು ಸ್ಥಳೀಯರಾದ ವೆಂಟರಾಮು ಕಿಡಿಕಾರಿದ್ದಾರೆ.
ಪ್ರತಿಭಟನೆ ಎಚ್ಚರಿಕೆ:
ಸುಮನಹಳ್ಳಿ-ನಾಗರಬಾವಿ-ನಾಯಂಡ ಹಳ್ಳಿ ಹೊರವರ್ತುಲ ರಸ್ತೆ ನಿರ್ವಹಣೆ ಯಾರಾದರೂ ಮಾಡಲಿ. ಬಿಡಿಎ ಅಥವಾ ಬಿಬಿಎಂಪಿ ಯಾರೇ ನಿರ್ವಹಣೆ ಮಾಡಲಿ ಆದರೆ ಮೊದಲು ರಸ್ತೆ ಅವ್ಯವಸ್ಥೆಯನ್ನು ಸರಿಪಡಿಸಬೇಕು. ಚುನಾವಣೆಯ ನೆಪವೊಡ್ಡಿ, ಕೈಚೆಲ್ಲಿದರೆ ಸುಮ್ಮನೆ ಕುಳಿತು ಕೊಳ್ಳಲು ಆಗುವುದಿಲ್ಲ. ಆದಷ್ಟು ಬೇಗ ರಸ್ತೆ ಸರಿಪಡಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ಮಾಡುವುದಾಗಿ ಸ್ಥಳೀಯ ಮುಖಂಡ ಚಂದ್ರಶೇಖರ್ ಗೌಡ ಅವರು ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications