ಕೆಂಪೇಗೌಡ ಬಡಾವಣೆ; ಸೈಟು ಕೊಂಡ ಜನರಿಗೆ ಹೊಸ ಸಂಕಷ್ಟ
ಬೆಂಗಳೂರು, ಮಾರ್ಚ್ 17: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಸೈಟು ಕೊಂಡ ಜನರಿಗೆ ಹೊಸ ಸಂಕಷ್ಟ ಎದುರಾಗಿದೆ. ಬಿಡಿಎ ತೀರ್ಮಾನದಿಂದ ಬಡಾವಣೆಯಲ್ಲಿ ಮನೆ ನಿರ್ಮಾಣ ವಿಳಂಬವಾಗಲಿದೆ ಎಂದು ಅಂದಾಜಿಸಲಾಗಿದೆ. 2022ರಿಂದಲೂ ಬಿಡಿಎ ಬಡಾವಣೆಯಲ್ಲಿ ಸೈಟು ಪಡೆದ ಜನರಿಗೆ ಸರಿಯಾದ ಮೂಲ ಸೌಕರ್ಯಗಳನ್ನು ಒದಗಿಸಿಲ್ಲ ಎಂದು ಆರೋಪಿಸಲಾಗುತ್ತಿದೆ.
ಬಿಡಿಎ ನಾಡಪ್ರಭು ಕೆಂಪೇಗೌಡ ಬಡಾವಣೆಯ 6 ಬ್ಲಾಕ್‌ಗಳಲ್ಲಿ ವಿವಿಧ ಅಳತೆಯ ಒಳ ರಸ್ತೆಗಳ ಅಭಿವೃದ್ಧಿಗೆ 159.92 ಕೋಟಿ ರೂ. ಟೆಂಡರ್ ಕರೆದಿದೆ. ಆದರೆ ಈ ಟೆಂಡರ್ ಅನ್ನು ಒಂದೇ ಕಂಪನಿಗೆ ನೀಡಿದೆ. ಅಲ್ಲದೆ ಕಾಮಗಾರಿ ಪೂರ್ಣಗೊಳಿಸಲು 2 ವರ್ಷದ ಗಡುವು ನೀಡಲಾಗಿದೆ.

ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಾಣ ಮಾಡಿರುವ ಬಿಡಿಎ ರಸ್ತೆ, ವಿದ್ಯುತ್, ಒಳಚರಂಡಿ ಸೇರಿ ಮೌಲ ಸೌಕರ್ಯ ಅಭಿವೃದ್ಧಿಗೊಳಿಸಲಿಲ್ಲ ಎಂದು ಆರೋಪಿಸಲಾಗುತ್ತಿದೆ. ಇದರಿಂದಾಗಿ ಬಡಾವಣೆಯಲ್ಲಿ ನಿವೇಶನ ಪಡೆದ ಜನರು ಮನೆ ಕಟ್ಟಿಕೊಳ್ಳಲು ತೊಂದರೆಯಾಗುತ್ತಿದೆ. ಈಗ ಒಳ ರಸ್ತೆಗಳ ನಿರ್ಮಾಣ ಇನ್ನೂ ತಡವಾದರೆ ಸೈಟು ಪಡೆದ ಜನರಿಗೆ ಹೊಸ ಸಂಕಷ್ಟ ಎದುರಾಗಲಿದೆ.
ಮೂಲ ಸೌಕರ್ಯಗಳನ್ನು ಕಲ್ಪಿಸಿ: ಬಿಡಿಎ 2024ರ ಮಾರ್ಚ್‌ನಲ್ಲಿ ನಾಡಪ್ರಭು ಕೆಂಪೇಗೌಡ ಬಡಾವಣೆಯ 5, 6 ಮತ್ತು 7ನೇ ಬ್ಲಾಕ್‌ಗಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮೂರು ಟೆಂಡರ್ ಮಾಡಿತ್ತು. ಕಾಮಗಾರಿ ಪೂರ್ಣಗೊಳಿಸಲು 3 ತಿಂಗಳ ಗಡುವು ಕೊಟ್ಟಿತ್ತು.
ಆದರೆ ಈ ಕಾಮಗಾರಿ ಇನ್ನೂ ಸಹ ಪೂರ್ಣಗೊಂಡಿಲ್ಲ. ಇಂತಹ ಸಂದರ್ಭದಲ್ಲಿಯೇ 6 ಬ್ಲಾಕ್‌ಗಳ ಒಳ ರಸ್ತೆ ನಿರ್ಮಾಣ ಮಾಡಲು ಒಂದೇ ಕಂಪನಿಗೆ ಟೆಂಡರ್ ನೀಡಿ, ಎರಡು ವರ್ಷದ ಗಡುವು ಕೊಟ್ಟಿರುವುದಕ್ಕೆ ಬಡಾವಣೆಯಲ್ಲಿ ಸೈಟು ಪಡೆದ ಜನರು ಬಿಡಿಎ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೈಟು ಪಡೆದವರ ಮಾಹಿತಿ ಪ್ರಕಾರ 6 ಬ್ಲಾಕ್‌ಗಳಲ್ಲಿ ಕುಡಿಯುವ ನೀರು, ಒಳಚರಂಡಿ ಮತ್ತು ವಿದ್ಯುತ್ ಕಾಮಗಾರಿಗಳು ಮುಗಿದಿಲ್ಲ. ಈ ಕಾಮಗಾರಿ ಮುಗಿದ ಬಳಿಕ ರಸ್ತೆ ಕಾಮಗಾರಿ ಕೈಗೊಳ್ಳಲಾಗುತ್ತದೆ. ಒಂದೇ ಕಂಪನಿಗೆ ಎಲ್ಲಾ ಕಾಮಗಾರಿ ನೀಡಿದರೆ ಎಲ್ಲಾ ಕಾಮಗಾರಿ ವಿಳಂಬವಾಗುವುದಿಲ್ಲವೇ? ಎಂದು ಜನರು ಬಿಡಿಎಯನ್ನು ಪ್ರಶ್ನೆ ಮಾಡಿದ್ದಾರೆ.
ಬಿಡಿಎ ಒಳ ರಸ್ತೆ ನಿರ್ಮಾಣದ ಟೆಂಡರ್ ಅನ್ನು ಒಂದೇ ಕಂಪನಿಗೆ ನೀಡಿ ತನ್ನ ಕೆಲಸ ಸುಲಭ ಮಾಡಿಕೊಂಡಿದೆ. ಆದರೆ ಕಾಮಗಾರಿ ವಿಳಂಬವಾದರೆ ಸಂಕಷ್ಟಕ್ಕೆ ಸಿಲುಕುವುದು ಸೈಟು ಕೊಂಡಿರುವ ಜನರು. 2022ರಿಂದಲೂ ಮೂಲ ಸೌಲಭ್ಯ ಒದಗಿಸಲು ಬಿಡಿಎ ಗಮನಹರಿಸುತ್ತಿಲ್ಲ ಎಂದು ಸೈಟು ಪಡೆದ ಜನರು ಆರೋಪ ಮಾಡುತ್ತಿದ್ದಾರೆ.
ಆದರೆ ಬಿಡಿಎ ಟೆಂಡರ್ ನೀಡಿರುವ ತೀರ್ಮಾನವನ್ನು ಸಮರ್ಥಿಸಿಕೊಂಡಿದೆ. ಒಂದೇ ಕಂಪನಿಗೆ ಗುತ್ತಿಗೆ ನೀಡಲಾಗಿದ್ದು, ಕಂಪನಿ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲಿದೆ. ಜನರಿಗೆ ಯಾವುದೇ ಆತಂಕ ಬೇಡ. ಸೈಟು ಪಡೆದ ಜನರು ಸುಲಭವಾಗಿ ಮನೆ ನಿರ್ಮಾಣ ಮಾಡಬಹುದು ಎಂದು ಭರವಸೆ ಕೊಟ್ಟಿದೆ.
ಬಿಡಿಎ ಡಾ. ಶಿವರಾಮ ಕಾರಂತ ಬಡಾವಣೆಯಲ್ಲಿ ಪ್ರತಿಯೊಂದು ಬ್ಲಾಕ್‌ನ ಒಂದೊಂದು ಕಾಮಗಾರಿಯನ್ನು ಒಂದೊಂದು ಕಂಪನಿಗೆ ಗುತ್ತಿಗೆ ನೀಡಿತ್ತು. ಬಹು ಏಜೆನ್ಸಿ ತಂತ್ರ ಕೆಲಸ ಮಾಡಿತ್ತು. ವೇಗವಾಗಿ ಬಡಾವಣೆಗೆ ಮೂಲ ಸೌಕರ್ಯಗಳು ಸಿಕ್ಕಿದ್ದವು. ಆದರೆ ಈ ಬಡಾವಣೆಯಲ್ಲಿ ಏಕ ಕಂಪನಿ ನಿಯಮ ಏಕೆ ಬಂತು? ಎಂದು ಜನರು ಪ್ರಶ್ನಿಸಿದ್ದಾರೆ.












Click it and Unblock the Notifications