ದಸರಾ ಹಬ್ಬ: KSRTC ನಿಗಮದಿಂದ 2,300ಕ್ಕೂ ಅಧಿಕ ವಿಶೇಷ ಬಸ್ ಕಾರ್ಯಾಚರಣೆ: ನಿಲ್ದಾಣಗಳು ವಿವರ
ಬೆಂಗಳೂರು, ಸೆಪ್ಟಂಬರ್ 21: ಈ ವರ್ಷದ ಮೈಸೂರು ದಸರಾ-2025 ಮಹೋತ್ಸವ ಹಾಗೂ ದಸರಾ ರಜೆಗಳನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಪ್ರಯಾಣಿಕರ ಸಂಚಾರ ಸೇವೆಗೆಂದು ವಿಶೇಷ ಬಸ್‌ಗಳ ಕಾರ್ಯಾಚರಣೆ ನಡೆಸಲಿದೆ. ಇಲ್ಲಿ ವೇಗದೂತ, ರಾಜಹಂಸ, ಸ್ವೀಪರ್, ಐರಾವತ, ಐರಾವತ ಕ್ಲಬ್ ಕ್ಲಾಸ್ (ಮಲ್ಟಿ ಆಕ್ಸಲ್), ಅಂಬಾರಿ ಕ್ಲಬ್ ಕ್ಲಾಸ್, ಪಲ್ಲಕ್ಕಿ ಸ್ವೀಪರ್ ಹಾಗೂ ಅಶ್ವಮೇಧ ಬಸ್‌ಗಳು ಸಂಚರಿಸಲಿವೆ.
KSRTC ಒಟ್ಟು 2,300ಕ್ಕೂ ಹೆಚ್ಚು ವಿಶೇಷ ಬಸ್‌ಗಳನ್ನು ಬಿಡುಗಡೆ ಮಾಡಿದೆ. ದಸರಾ ರಜೆಗಳ ಸಂದರ್ಭದಲ್ಲಿ ಈ ಬಸ್‌ಗಳು ಸೆಪ್ಟಂಬರ್ 26, 27 ಮತ್ತು 30ರಂದು ಬೆಂಗಳೂರಿನ ಕೆಂಪೇಗೌಡ, ಮೈಸೂರು ರಸ್ತೆ ಹಾಗೂ ಶಾಂತಿನಗರ ಬಸ್ ನಿಲ್ದಾಣಗಳಿಂದ ರಾಜ್ಯದ ಹಾಗೂ ಅಂತಾರಾಜ್ಯದ ಹಲವು ಭಾಗಗಳಿಗೆ ಸಂಚಾರ ನಡೆಸಲಿವೆ. ಅಕ್ಟೋಬರ್ 2 ಮತ್ತು 5ರಂದು ರಾಜ್ಯದ ವಿವಿಧ ಭಾಗಗಳಿಂದ ಬೆಂಗಳೂರಿಗೆ ವಾಪಸ್ಸಾಗಲಿವೆ ಎಂದು ನಿಗಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದಸರಾ ಬಸ್‌ಗಳ ಸಂಚಾರ ಮಾರ್ಗ
ಈ KSRTC ವಿಶೇಷ ಬಸ್‌ಗಳು ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು, ಶಿವಮೊಗ್ಗ, ಮಡಿಕೇರಿ, ಮಂಗಳೂರು, ದಾವಣಗೆರೆ, ಗೋಕರ್ಣ, ಕೊಲ್ಲೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಕಾರವಾರ, ಬಳ್ಳಾರಿ, ಹೊಸಪೇಟೆ, ಕಲಬುರಗಿ, ರಾಯಚೂರು ಮುಂತಾದ ಸ್ಥಳಗಳಿಗೆ ಸೇವೆ ನೀಡಲಿವೆ. ಅಷ್ಟು ಮಾತ್ರವಲ್ಲದೇ ಹೈದರಾಬಾದ್, ಚೆನ್ನೈ, ಊಟಿ, ಕೊಡೈಕೆನಾಲ್, ಸೇಲಂ, ತಿರುಚಿರಾಪಳ್ಳಿ, ಪುದುಕೋಟೆ, ಪಣಜಿ, ಶಿರಡಿ, ಪೂಣೆ, ಏರ್ನಾಕುಲಂ, ಪಾಲಕ್ಕಾಡ್ ಮುಂತಾದ ಅಂತರರಾಜ್ಯ ತಾಣಗಳಿಗೂ ಸಂಚಾರ ನಡೆಸಲಿವೆ.
ಮೈಸೂರು: 610 ವಿಶೇಷ ಬಸ್‌ಗಳ ಸಂಚಾರ
ಮೈಸೂರಿನ ದಸರಾ ಹಬ್ಬಕ್ಕೆ ವಿವಿಧ ಭಾಗಗಳಿಂದ ಆಗಮಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರಿನ ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮಾತ್ರ 260 ಹೆಚ್ಚುವರಿ ಬಸ್‌ಗಳು ಸಂಚಾರ ಮಾಡಲಿವೆ. ಮೈಸೂರಿನ ಸುತ್ತಮುತ್ತಲಿನ ಪ್ರವಾಸಿ, ಧಾರ್ಮಿಕ ಹಾಗೂ ಪ್ರೇಕ್ಷಣೀಯ ತಾಣಗಳಿಗೆ ಇನ್ನೂ 350 ಹೆಚ್ಚುವರಿ ಬಸ್‌ಗಳು ಸೇವೆ ನೀಡಲಿವೆ. ಮೈಸೂರಿಗೆ ಸಿಮೀತವಾಗಿ ಒಟ್ಟು 610 ವಿಶೇಷ ಬಸ್‌ಗಳು ಓಡಾಲಿವೆ.
ಟೂರ್ ಪ್ಯಾಕೇಜ್ ಸೇವೆ ಸಹ ಲಭ್ಯ
ಪ್ರಯಾಣಿಕರ ಅನುಕೂಲಕ್ಕಾಗಿ ಮೈಸೂರಿನಿಂದ ಪ್ರಾರಂಭವಾಗುವ ವಿಶೇಷ ಒಂದು ದಿನದ ಪ್ಯಾಕೇಜ್ ಟೂರ್‌ಗಳನ್ನು ಕೂಡ KSRTC ವ್ಯವಸ್ಥೆ ಮಾಡಿದೆ. ಅದರಲ್ಲಿ "ಗಿರಿದರ್ಶಿನಿ' ಪ್ರವಾಸ ಪ್ಯಾಕೇಜ್ ಇದೆ. ಇದರಲ್ಲಿ ಬಂಡೀಪುರ, ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಂಗ ಬೆಟ್ಟ, ನಂಜನಗೂಡು, ಚಾಮುಂಡಿ ಬೆಟ್ಟಕ್ಕೆ (ದರ: ವಯಸ್ಕ-₹450 / ಮಕ್ಕಳು-₹300) ಹೋಗಿಬರಬಹುದು.

ಅದೇ ರಿತಿ "ಜಲದರ್ಶಿನಿ' ಗೋಲ್ಡನ್ ಟೆಂಪಲ್ (ಬೈಲಕುಪ್ಪೆ), ದುಬಾರೆ, ರಾಜಾಸೀಟ್, ಹಾರಂಗಿ, ಕೆ.ಆರ್.ಎಸ್.ಗೆ (ದರ: ವಯಸ್ಕ-₹500 / ಮಕ್ಕಳು-₹350), ಮತ್ತು "ದೇವದರ್ಶಿನಿ' ಪ್ಯಾಕೇಜ್‌ನಡಿ ನಂಜನಗೂಡು, ಬ್ಲಫ್, ಮುಡುಕುತೊರೆ, ತಲಕಾಡು, ಸೋಮನಾಥಪುರ, ಶ್ರೀರಂಗಪಟ್ಟಣ (ದರ: ವಯಸ್ಕ-₹330/ಮಕ್ಕಳು-₹225)ಗೆ ಹೋಗಿ ಬರಲು ಅನುಕೂಲವಾಗುವಂತೆ ಮೈಸೂರು ಘಟಕದಿಂದ ಏಕ ದಿನದ ಟೂರ್ ಪ್ಯಾಕೇಜ್ ಘೋಷಣೆ ಆಗಿದ್ದು, ಸೆಪ್ಟೆಂಬರ್ 27ರಿಂದ ಅಕ್ಟೋಬರ್ 7ರವರೆಗೆ ಈ ಸೇವೆ ಸಿಗಲಿದೆ.
ಇತರ ಬಸ್ ಸೇವೆಗಳ ಪಟ್ಟಿ ಹೀಗಿದೆ
* ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ "ಫ್ಲೈ ಬಸ್' (FlyBus) ಸೌಲಭ್ಯ ಒದಗಿಸಲಾಗುತ್ತಿದೆ.
* ಮೈಸೂರು ನಗರ ಹಾಗೂ ಗ್ರಾಮಾಂತರ ಬಸ್ ನಿಲ್ದಾಣಗಳಲ್ಲಿ ವಿಶೇಷ "ಮಾಹಿತಿ ಕೇಂದ್ರಗಳು' ಕಾರ್ಯ ನಿರ್ವಹಿಸಲಿವೆ.
* ಮುಂಗಡ ಟಿಕೆಟ್ ಕಾಯ್ದಿರಿಸುವವರಿಗೆ ಶೇಕಡಾ 5ರಷ್ಟು ರಿಯಾಯಿತಿ ಮತ್ತು ಎರಡು ಬದಿ ಟಿಕೆಟ್ ಕಾಯ್ದಿರಿಸಿದರೆ ಶೇಕಡಾ 10ರಷ್ಟು ರಿಯಾಯಿತಿ ಸಿಗಲಿದೆ.
* ಆನ್‌ಲೈನ್ ಇ-ಟಿಕೆಟ್‌ಗಳನ್ನು [www.ksrtc.karnataka.gov.in] (http://www.ksrtc.karnataka.gov.in) ವೆಬ್‌ಸೈಟ್ ಹಾಗೂ ಮೊಬೈಲ್ ಆಪ್ ಮೂಲಕ ಬುಕ್ ಮಾಡಬಹುದು.
* ಬಸ್‌ಗಳಲ್ಲಿ ಆಸನ ಕಾಯ್ದಿರಿಸಿದವರು ತಮ್ಮ "ಪಿಕ್-ಅಪ್ ಪಾಯಿಂಟ್'ಗಳನ್ನು ಗಮನಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.
* ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಗೋವಾ, ತಮಿಳುನಾಡು, ಮಹಾರಾಷ್ಟ್ರ ಹಾಗೂ ಪುದುಚೇರಿ ರಾಜ್ಯಗಳ ವಿವಿಧ ಕೌಂಟರ್‌ಗಳಲ್ಲಿ ಗಣಕೀಕೃತ ಮುಂಗಡ ಟಿಕೆಟ್ ಕಾಯ್ದಿರಿಸುವ ಸೌಲಭ್ಯ ಇದೆ.












Click it and Unblock the Notifications