ದರ್ಶನ್ ಮತ್ತು ಇತರ ಆರೋಪಿಗಳು 4.30ಕ್ಕೆ ಕೋರ್ಟ್‌ಗೆ
ಬೆಂಗಳೂರು, ಜೂನ್ 11; ಕೊಲೆ ಪ್ರಕರಣದ ಆರೋಪದಲ್ಲಿ ಬಂಧಿತರಾಗಿರುವ ದರ್ಶನ್‌ರನ್ನು ಪೊಲೀಸರು ಕೋರ್ಟ್‌ಗೆ ಹಾಜರುಪಡಿಸಲು ತಯಾರಿ ನಡೆಸಿದ್ದಾರೆ. ನ್ಯಾಯಾಲಯದಲ್ಲಿ ಪೊಲೀಸರು ಆರೋಪಿಗಳನ್ನು ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡುವ ನಿರೀಕ್ಷೆ ಇದೆ.
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪದಲ್ಲಿ ಮಂಗಳವಾರ ಬೆಳಗ್ಗೆ ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ನಟ ದರ್ಶನ್, ಅವರ ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ. ಚಿತ್ರದುರ್ಗದ ನಗರದ ಲಕ್ಷ್ಮೀ ವೆಂಕಟೇಶ್ವರ ಬಡಾವಣೆಯ ನಿವಾಸಿ ರೇಣುಕಾಸ್ವಾಮಿಯ ಶವ ಜೂನ್ 9ರ ಬೆಳಗ್ಗೆ ಮೋರಿಯಲ್ಲಿ ಪತ್ತೆಯಾಗಿತ್ತು.

ಈ ಹತ್ಯೆ ಪ್ರಕರಣದ ಸಂಬಂಧ ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ದರ್ಶನ್ ಸೇರಿ 13 ಆರೋಪಿಗಳ ವಿಚಾರಣೆಯನ್ನು ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ನಡೆಸುತ್ತಿದ್ದಾರೆ. ನಟ ದರ್ಶನ್, ಪವಿತ್ರಾ ಗೌಡ ಸೇರಿ 13 ಆರೋಪಿಗಳನ್ನು 4.30ಕ್ಕೆ ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ.
ಠಾಣೆಯಲ್ಲಿಯೇ ವೈದ್ಯಕೀಯ ಪರೀಕ್ಷೆ?: ಭದ್ರತಾ ಕಾರಣಗಳಿಂದಾಗಿ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ವೈದ್ಯರನ್ನು ಕರೆಸಿಕೊಂಡು ಪೊಲೀಸರು ನಟ ದರ್ಶನ್ ವೈದ್ಯಕೀಯ ಪರೀಕ್ಷೆ ನಡೆಸುತ್ತಿದ್ದಾರೆ. ಸಂಜೆ 4.30ಕ್ಕೆ ಬೆಂಗಳೂರು ನಗರದ 24ನೇ ಎಸಿಎಂಎಂ ಕೋರ್ಟ್‌ಗೆ ಆರೋಪಿಗಳನ್ನು ಹಾಜರುಪಡಿಸಲಿದ್ದು, ಅದಕ್ಕಾಗಿ ಕೋರ್ಟ್ ಆವರಣದಲ್ಲಿಯೂ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್, ದರ್ಶನ್ ಪ್ರೇಯಸಿ ಪವಿತ್ರಾ ಗೌಡ, ಪಟ್ಟಣಗೆರೆ ವಿನಯ್, ಕಿರಣ್, ಮಧು, ಲಕ್ಷ್ಮಣ್, ಆನಂದ್, ರಾಘವೇಂದ್ರ ಸೇರಿ 13 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರೇಣುಕಾಸ್ವಾಮಿ ಹತ್ಯೆ ನಡೆದ ಶೆಡ್ ಪಟ್ಟಣಗೆರೆ ವಿನಯ್‌ಗೆ ಸೇರಿದ್ದು, ಶೆಡ್‌ನಲ್ಲಿ ಪೊಲೀಸರು ಬೆಳಗ್ಗೆಯಿಂದ ತಪಾಸಣೆ ನಡೆಸಿ, ಅದನ್ನು ಸೀಜ್ ಮಾಡಿದ್ದಾರೆ.
ದರ್ಶನ್ ಸೂಚನೆಯಂತೆ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಆರೋಪಿಯಾದ ರಾಘವೇಂದ್ರ ಮೂಲಕ ಕರೆಸಿ, ಬೆಂಗಳೂರಿನ ಕಾಮಾಕ್ಷಿಪಾಳ್ಯದ ಶೆಡ್‌ವೊಂದರಲ್ಲಿ ಕೂಡಿ ಹಾಕಲಾಗಿತ್ತು. ಜೂನ್ 8ರಂದು ಹತ್ಯೆ ಮಾಡಿ ಶವವನ್ನು ಮೋರಿಗೆ ಎಸೆಯಲಾಗಿತ್ತು.
ಜೂನ್ 9ರಂದು ಬೆಳಗ್ಗೆ ಸುಮನಹಳ್ಳಿ ಸಮೀಪದ ಅನುಗ್ರಹ ಅಪಾರ್ಟ್‌ಮೆಂಟ್ ಬಳಿಯ ಮೋರಿಯಲ್ಲಿ ಶವ ಎಸೆಯಲಾಗಿತ್ತು. ಜೂನ್ 10ರಂದು ರೇಣುಕಾಸ್ವಾಮಿ ಹತ್ಯೆ ಕುರಿತು ಪೊಲೀಸರು ಕುಟುಂಬದವರಿಗೆ ಮಾಹಿತಿ ನೀಡಲಾಗಿತ್ತು.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೇಣುಕಾಸ್ವಾಮಿ ಶವದ ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದ್ದು, ಶವವನ್ನು ಕೆಲವೇ ಕ್ಷಣದಲ್ಲಿ ಕುಟುಂಬದವರಿಗೆ ಹಸ್ತಾಂತರ ಮಾಡಲಾಗುತ್ತದೆ. ಮತ್ತೊಂದು ಕಡೆ ನ್ಯಾಯಾಲಯಕ್ಕೆ ಆರೋಪಿಗಳನ್ನು ಕರೆದುಕೊಂಡು ಹೋಗಲು ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ.
ದರ್ಶನ್ ಬಂಧನದ ಕುರಿತು ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಡಾ. ಪರಮೇಶ್ವರ, "ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳು ನೀಡಿದ ಮಾಹಿತಿ ಅನ್ವಯ ದರ್ಶನ್ ಬಂಧಿಸಲಾಗಿದೆ. ತನಿಖೆ ನಡೆಯುತ್ತಿದೆ" ಎಂದು ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ದರ್ಶನ್ ಅಭಿಮಾನಿಗಳ ಸಂಘ ಕಟ್ಟಿಕೊಂಡಿರುವ ರಾಘವೇಂದ್ರ ಮೂಲಕ ರೇಣುಕಾಸ್ವಾಮಿಯನ್ನು ಬೆಂಗಳೂರು ನಗರಕ್ಕೆ ಕರೆಸಿಕೊಳ್ಳಲಾಗಿದೆ. ಬಳಿಕ ಕಾಮಾಕ್ಷಿಪಾಳ್ಯದ ಶೆಡ್‌ವೊಂದರಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿದೆ. ಹತ್ಯೆಯಾದ ರೇಣುಕಾಸ್ವಾಮಿ ಮೈ ಮೇಲೆ ಸುಟ್ಟಗಾಯದ ಗುರುತುಗಳು, ಬಲವಾಗಿ ಹಲ್ಲೆ ಮಾಡಿದ ಗಾಯಗಳು ಪತ್ತೆಯಾಗಿವೆ.
ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆದ ಕಾಮಾಕ್ಷಿಪಾಳ್ಯದ ಶೆಡ್‌ನಲ್ಲಿ ವಿಧಿ ವಿಜ್ಞಾನ ಪ್ರಯೋಗಾಲದ ತಂಡ ಸಾಕ್ಷ್ಯಗಳನ್ನು ಸಂಗ್ರಹ ಮಾಡುತ್ತಿದೆ. ಹಲ್ಲೆ ಮಾಡಿ, ಹತ್ಯೆ ಮಾಡಿದ ಬಳಿಕ ಆಟೋ ಅಥವ ಕಾರಿನಲ್ಲಿ ಶವವನ್ನು ಸಾಗಣೆ ಮಾಡಿ ಮೋರಿಗೆ ಎಸೆಯಲಾಗಿದೆ ಎಂಬ ಮಾಹಿತಿ ವಿಚಾರಣೆ ವೇಳೆ ತಿಳಿದುಬಂದಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆಯನ್ನು ಕಾಮಾಕ್ಷಿಪಾಳ್ಯ ಪೊಲೀಸರು ನಡೆಸುತ್ತಿದ್ದು, ಹಿರಿಯ ಅಧಿಕಾರಿಗಳು ತನಿಖೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಸ್ಥಳ ಮಹಜರು, ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು ಮತ್ತೆ ಪೊಲೀಸ್ ವಶಕ್ಕೆ ಪಡೆಯುವ ನಿರೀಕ್ಷೆ ಇದೆ.












Click it and Unblock the Notifications