ಕನ್ನಡ ಮಾತನಾಡದ SBI ಬ್ಯಾಂಕ್ ಮ್ಯಾನೇಜರ್: ಸಂಸದ ಮಹತ್ವದ ಹೇಳಿಕೆ
ಬೆಂಗಳೂರು, ಮೇ 21: ಬೆಂಗಳೂರಿಗೆ ಬಂದು ಐಟಿ ಕಂಪನಿಗಳಲ್ಲಿ ಕೆಲಸ ಮಾಡುವ ಕೆಲ ಉದ್ಯೋಗಿಗಳು ಕನ್ನಡ ಬಗ್ಗೆ ಅಸಡ್ಡೆ ತೋರಿದ್ದನ್ನು ನಾವೆಲ್ಲರೂ ನೋಡಿದ್ದೇವೆ. ಇತ್ತೀಚೆಗೆ ಆಟೋ ಹತ್ತಿದ ನಾರ್ಥಿ ಪ್ರಯಾಣಿಕ ಕನ್ನಡ ಮಾತನಾಡಲ್ಲ ಎಂದು ಕನ್ನಡಿಗ ಚಾಲಕನಿಗೆ ಆವಾಜ್ ಹಾಕಿದ್ದ ಮಾಸುವ ಮುನ್ನವೇ ಎಸ್‌ಬಿಐ ಬ್ಯಾಂಕ್ ಲೇಡಿ ಮ್ಯಾನೇಜರ್ ಕನ್ನಡ ಮಾತನಾಡುವುದೇ ಇಲ್ಲ ಎಂದು ದುರಹಂಕಾರ ಪ್ರದರ್ಶಿಸಿದ್ದಾರೆ. ಇದನ್ನು ಖಂಡಿಸಿರುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಕೇಂದ್ರ ಸರ್ಕಾರ ವರ್ಗಾವಣೆ ನೀತಿ ಪರಿಶೀಲಿಸಿದೆ. ಎಸ್‌ಬಿಐ ಬ್ಯಾಂಕ್ ಆರ್‌ಬಿಐ ಮಾರ್ಗಸೂಚಿ ಪಾಲಿಸುವಂತೆ ಒತ್ತಾಯಿಸಿದ್ದಾರೆ.
ಚಂದಾಪುರದಲ್ಲಿರುವ ಎಸ್‌ಬಿಐ ಬ್ಯಾಂಕ್ ಮಹಿಳಾ ವ್ಯವಸ್ಥಾಪಕಿ, ''ಇದು ಇಂಡಿಯಾ ನಾನು ಕನ್ನಡ ಮಾತನಾಡುವುದೇ ಇಲ್ಲ. ಸ್ಥಳೀಯ ಭಾಷೆ, ಆರ್‌ಬಿಐ ಮಾರ್ಗಸೂಚಿ ಪಾಲನೆ ಅದೆಲ್ಲ ಇಲ್ಲ'' ಎಂದು ಮನ ಬಂದಂತೆ ಗ್ರಾಹಕರ ಜೊತೆ ರೇಗಾಡಿದ್ದರು. ಇದರ ವಿಡಿಯೋ ವೈರಲ್ ಆಗುತ್ತಿದ್ದಂತೆ ಕನ್ನಡಿಗರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇದರ ಬೆನ್ನಲ್ಲೆ ಆಕೆ ಕ್ಷಮೆ ಕೇಳಿದ್ದಾಳೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಪೋಸ್ಟ್ ಮಾಡಿರುವ ತೇಜಸ್ವಿ ಸೂರ್ಯ ಅವರು ಲೇಡಿ ಮ್ಯಾನೇಜರ್ ನಡೆ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.

ಗ್ರಾಹಕ ಸ್ನೇಹಿಯಾಗಿ ಕೆಲಸ ಮಾಡಿ
ಎಸ್‌ಬಿಐ ಮಹಿಳಾ ವ್ಯವಸ್ಥಾಪಕಿಯಾದ ನೀವು ಇರುವುದು ಕರ್ನಾಟಕದಲ್ಲಿ .ಬ್ಯಾಂಕಿಂಗ್ ವಲಯದಲ್ಲಿ ಗ್ರಾಹಕ ಸ್ನೇಹಿಯಾಗಿ ಕೆಲಸ ಮಾಡಬೇಕು. ಸಾರ್ವಜನಿಕರಿಗೆ ಗೊತ್ತಿರುವ ಭಾಷೆಯಲ್ಲಿ ಸಂವಹನ ನಡೆಸುವುದು ಮುಖ್ಯ. ಈ ರೀತಿ ಹಿಂದಿಯೊಂದನ್ನೇ ಮಾತನಾಡುತ್ತೇನೆ ಎಂದು ಹೇಳುವುದು ಸರಿಯಲ್ಲ.
ಸ್ಥಳೀಯರಿಗೆ ಆದ್ಯತೆ ನೀಡುವಂತೆ ಮನವಿ
ಸಂಸತ್ತಿನ ಒಳಗೆ ಮತ್ತು ಹೊರಗೆ ಬ್ಯಾಂಕಿಂಗ್ ಕಾರ್ಯಾಚರಣೆಗಳಲ್ಲಿ ಸ್ಥಳೀಯ ಸಿಬ್ಬಂದಿ ಅಥವಾ ಸ್ಥಳೀಯ ಭಾಷೆಯನ್ನು ತಿಳಿದಿರುವ ಸಿಬ್ಬಂದಿಯನ್ನು ಕಡ್ಡಾಯವಾಗಿ ನೇಮಿಸುವಂತೆ ಹಿಂದಿನಿಂದಲೂ ಮನವಿ ಮಾಡಿಕೊಂಡು ಬರಲಾಗುತ್ತಿದೆ. ಕೆಲವೇ ವಾರಗಳ ಹಿಂದೆ, ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆ ನಡೆಯಿತು. ಅಲ್ಲಿ ಈ ಕುರಿತು ಪ್ರಸ್ತಾಪಿಸಲಾಗಿತ್ತು. ಸ್ಥಳೀಯ ಭಾಷೆ ಗೊತ್ತಿರುವವನ್ನು ಅಗತ್ಯತೆ ನೋಡಿಕೊಂಡು ಕಡ್ಡಾಯಗೊಳಿಸಬೇಕು. ಕಚೇರಿ ಅಧಿಸೂಚನೆ, ಮಾರ್ಗಸೂಚಿ ಪಾಲಿಸುವಂತಾಗಬೇಕು ಎಂದು ಕೋರಿದ್ದೆ, ಇಲಾಖೆಯಿಂದ ಸಕಾರಾತ್ಮಕ ಭರವಸೆ ದೊರೆತಿತ್ತು ಎಂದರು.
This behaviour by @TheOfficialSBI Branch Manager is simply not acceptable.
— Tejasvi Surya (@Tejasvi_Surya) May 21, 2025
If you are doing customer interface work in Karnataka, especially in a sector like banking , it is important to communicate to customers in the language they know. Being adamant like this is simply not… pic.twitter.com/VPB8i5eTvB
ಮಹಿಳಾ ವ್ಯವಸ್ಥಾಪಕಿ ವಿರುದ್ಧ ಕ್ರಮಕ್ಕೆ ಸಂಸದ ಆಗ್ರಹ
ಇಂತಹ ಕಚೇರಿಗಳಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕು ಎಂಬ ನೀತಿ ಸಮರ್ಪಕವಾಗಿ ಜಾರಿ ಆದಂತೆ ಕಾಣುತ್ತಿಲ್ಲ. ಸ್ಥಳೀಯ ಭಾಷೆಯ ಅಗತ್ಯವನ್ನು ಕಡ್ಡಾಯಗೊಳಿಸುವ DFS ನೀತಿಯನ್ನು ತಕ್ಷಣ ಜಾರಿಗೆ ತರುವಂತೆ ಅವರು ಎಸ್‌ಬಿಐ ಬ್ಯಾಂಕ್‌ಗೆ ಒತ್ತಾಯಿಸಿದ್ದಾರೆ. ಅಲ್ಲದೇ ಹೀಗೆ ದರ್ಪದಿಂದ ವರ್ತಿಸಿದ ಆ ಮಹಿಳಾ ವ್ಯವಸ್ಥಾಪಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತೇಜಸ್ವಿ ಸೂರ್ಯ ಅವರು ಒತ್ತಾಯಿಸಿದ್ದಾರೆ.
ಕನ್ನಡಿಗರಿಗೆ ಮೇಲಿಂದ ಮೇಲೆ ತೊಂದರೆ
ಅನೇಕ ಗ್ರಾಮೀಣ ಕರ್ನಾಟಕ ಬ್ಯಾಂಕ್‌ಗಳಲ್ಲಿ ಬ್ಯಾಂಕಿಂಗ್ ಸಿಬ್ಬಂದಿ, ಸಾರ್ವಜನಿಕ ಸಂಪರ್ಕ ಹೊಂದಿರುವವರು ಸ್ಥಳೀಯ ಭಾಷೆಯಲ್ಲಿ ಸಂವಹನ ನಡೆಸದಿದ್ದಾಗ ಕನ್ನಡಿಗರು ಅನೇಕ ತೊಂದರೆ ಅನುಭವಿಸಿದ್ದಾರೆ. ಇಂತಹ ಸಮಸ್ಯೆ ಕರ್ನಾಟಕ ಮಾತ್ರವಲ್ಲದೇ ಅನೇಕ ರಾಜ್ಯಗಳಲ್ಲಿ ಆಗಿದೆ. ಬ್ಯಾಂಕ್‌ಗೆ ತೆರಳುವ ಲಕ್ಷಾಂತರ ಗ್ರಾಹಕರು ಭಾಷಾ ಸಮಸ್ಯೆ ಎದುರಿಸುವಂತಾಗಿದೆ. ಬ್ಯಾಂಕ್ ಸಿಬ್ಬಂದಿ ಈ ನಡವಳಿಕೆ ಸರಿಯಲ್ಲ ಎಂದು ಹೇಳಿದ್ದಾರೆ.
ಸಂಸತ್, ಬ್ಯಾಂಕ್ ಸೇರಿದಂತೆ ವಿವಿಧೆಡೆ ಇಂತಹ ಸಮಸ್ಯೆ ಎದುರಿಸಿದ ನಂತರ ನಾವು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವು. ಆ ನಂತರ ಕೇಂದ್ರ ಹಣಕಾಸು ಸೇವೆಗಳ ಇಲಾಖೆಯು ತಮ್ಮ ವರ್ಗಾವಣೆ ನೀತಿಯನ್ನು ಪರಿಶೀಲಿಸಿದೆ. ಗ್ರಾಹರಿಗೆ ಉತ್ತಮ ಸೇವೆ ನೀಡುವುದನ್ನು ಖಚಿತಪಡಿಸಿಕೊಳ್ಳಲು ಬ್ಯಾಂಕುಗಳು ತಮ್ಮ ಭಾಷಾ ಪ್ರದೇಶದ (ಸ್ಥಳೀಯ) ಅಧಿಕಾರಿಗಳಿಗೆ ಅವಕಾಶ ಕಲ್ಪಿಸಲು ನಿರ್ದೇಶಿಸಲಾಗಿದೆ.
ಗ್ರಾಮೀಣ ಸಮುದಾಯಗಳಿಗೆ ಸೇವೆ ಸಲ್ಲಿಸುವವರು, ಸಾರ್ವಜನಿಕ ವಲಯದ ಬ್ಯಾಂಕುಗಳು, ವಿಶೇಷವಾಗಿ ಬ್ಯಾಂಕಿಂಗ್ ವಲಯದಲ್ಲಿ ಅರ್ಥಮಾಡಿಕೊಳ್ಳುವ ಭಾಷೆಯಲ್ಲಿ ಸಂವಹನ ನಡೆಸಬೇಕು. ಸ್ಥಳೀಯ ಭಾಷೆಯಲ್ಲಿ ಸೇವೆ ಸಿಗುವಂತಾಗಬೇಕು. ಆದ್ದರಿಂದ ಎಸ್‌ಬಿಐ ಕೇಂದ್ರ ಸರ್ಕಾರಿ ನಿರ್ದೇಶನ ಪಾಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.












Click it and Unblock the Notifications