Namma Metro: ಮೆಟ್ರೋ ಮಾರ್ಗಗಳ ವಿಳಂಬ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಆಗ್ರಹವೇನು?
ಬೆಂಗಳೂರು, ಅಕ್ಟೋಬರ್ 05: ರಾಜ್ಯ ಸರ್ಕಾರ ಬೆಂಗಳೂರು ನಮ್ಮ ಮೆಟ್ರೋ ಯೋಜನೆಗಳಲ್ಲಿ ಕೆಲವು ಮಾರ್ಗಗಳ ತೆರೆಯುವಲ್ಲಿ ವಿಳಂಬವಾಗುತ್ತಿದೆ. ಆದ್ದರಿಂದ ಕೂಡಲೇ ಬೆಂಗಳೂರು ಮೆಟ್ರೋ ರೈಲು ನಿಗಮ ಜೊತೆಗೆ ಮಾತುಕತೆ ನಡೆಸಿ ಉದ್ದೇಶಿತ ಮಾರ್ಗಗಳನ್ನು ತೆರೆಯುವಂತೆ ಸಂಸದ ತೇಜಸ್ವಿ ಸೂರ್ಯ ಒತ್ತಾಯಿಸಿದರು.
ಬುಧವಾರ ನಮ್ಮ ಮೆಟ್ರೋ 'ಹಳದಿ ಮಾರ್ಗ' ದಲ್ಲಿ ಪರಿಶೀಲನೆ ನಡೆಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್‌ವಿ ರಸ್ತೆ- ಬೊಮ್ಮಸಂದ್ರವರೆಗಿನ ಹಳದ ಮಾರ್ಗವು ಯೋಜನೆ ವಿಳಂಬವಾಗುತ್ತಿದೆ. 2024ರ ಫೆಬ್ರುವರಿಯಲ್ಲಿ ಯೋಜನೆ ಸಾರ್ವಜನಿಕರಿಗೆ ಮುಕ್ತಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಸಂಬಂಧಿಸಿದ ಅಧಿಕಾರಿಗಳ ಜೊತೆಗೆ ಚರ್ಚೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

ಈ ಹಳದಿ ಮಾರ್ಗ 2017ರಲ್ಲಿ ಆರಂಭವಾಗಿದ್ದು, ಉದ್ದೇಶದಂತೆ 2021ರಲ್ಲಿ ಪೂರ್ಣಗೊಂಡು ವಾಣಿಜ್ಯ ಕಾರ್ಯಾಚರಣೆಗೆ ಮುಕ್ತವಾಗಬೇಕಿತ್ತು. ಆದರೆ ಕೊರೊನಾ, ಭೂಸ್ವಾಧಿನ ಸಮಸ್ಯೆ, ಜಯದೇವ ಮೇಲ್ಸೇತುವೆ ಸೇರಿದಂತೆ ಪ್ರಮುಖ ಕಾರಣಗಳಿಂದ ನಿಗದಿತ ಸಮಯಕ್ಕೆ ಯೋಜನೆ ಪೂರ್ಣವಾಗಿಲ್ಲ. ಸದ್ಯ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮುಂದಿನ ವರ್ಷ 2024 ಫೆಬ್ರುವರಿ ವೇಳೆಗೆ ಯೋಜನೆ ಪೂರ್ಣಗೊಳಿಸುವುದಾಗಿ ತಿಳಿಸಿದ್ದಾರೆ ಎಂದು ಅವರು ವಿವರಿಸಿದರು.
ಸಂಬಂಧಿಸಿದ ಸಂಸ್ಥೆ ಜತೆ ಚರ್ಚಿಸಿ ಕ್ರಮ ಕೈಗೊಳ್ಳಿ
ಮೆಟ್ರೋ ರೈಲು ಮಾರ್ಗ ಸಂಚಾರ ಮುಕ್ತ ವಿಳಂಬವಾಗುವುದು ಇದೇ ಮೊದಲೇನಲ್ಲ. ಈ ಸಂಬಂಧ ಜನರಿಗೆ ಬಿಎಂಆರ್‌ಸಿಎಲ್ ಸರಿಯಾದ ಸಮಯಕ್ಕೆ ಯೋಜನೆ ಜಾರಿ ಬಗ್ಗೆ ನಂಬಿಕೆಯೇ ಹೊರಟು ಹೋಗಿದೆ. ಆದ್ದರಿಂದ ರಾಜ್ಯ ಸರ್ಕಾರ ಸಮಸ್ಯೆಗಳ ಮೇಲೆ ಗಮನಹರಿಸಿ ಮೆಟ್ರೋ ಅಧಿಕಾರಿಗಳು, ಬೆಸ್ಕಾಂ, ಪಾಲಿಕೆ ಸಂಬಂಧಿಸಿದವರ ಜತೆ ಚರ್ಚಿಸಿ ಅಗತ್ಯ ಕ್ರಮ ಕೈಗೊಂಡು ಸಾರ್ವಜನಿಕರು, ಮೆಟ್ರೋ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಅವರು ಆಗ್ರಹಿಸಿದರು.
ಇದರೊಂದಿಗೆ ನೇರಳೆ ಮಾರ್ಗ ಕುರಿತು ಮಾತನಾಡಿದ ಅವರು, ಈ ಮಾರ್ಗವು ಸಹ ರಾಜಕೀಯ ಕಾರಣಗಳಿಗಾಗಿ ಬೈಯಪ್ಪನಹಳ್ಳಿ-ಕೆಆರ್ ಪುರ ವ್ಯಾಪ್ತಿ ಸಾರ್ವಜನಿಕರಿಗೆ ವಿಳಂಬವಾಗುತ್ತಿದೆ ಎಂದು ಸರ್ಕಾರವನ್ನು ದೂರಿದರು.

CMRS ಅನುಮೋದನೆ ಬಳಿವೂ ವಿಳಂಬ
ನಿತ್ಯ ಈ ಮಾರ್ಗದಲ್ಲಿ ಸುಮಾರು 5 ರಿಂದ 6 ಲಕ್ಷ ಜನರು ಬೆಂಗಳೂರು ಮೆಟ್ರೋವನ್ನು ಬಳಸುತ್ತಿದ್ದಾರೆ. ಬೈಯಪ್ಪನಹಳ್ಳಿ-ಕೆಆರ್ ಪುರ ಸ್ಟ್ರೆಚ್ ತೆರೆದರೆ ಈ ಸಂಖ್ಯೆಯ ಸುಮಾರು 50-60ರಷ್ಟು ಪ್ರಯೋಜನಗಳನ್ನು ಪಡೆಯಲು ಸಹಾಯವಾಗುತ್ತದೆ.
ಮೆಟ್ರೋ ರೈಲು ವಿಶೇಷ ಆಯುಕ್ತರು (CMRS) ಪರಿಶೀಲನೆ ಬಳಿಕ ಅನುಮೋದನೆ ಪಡೆದರೂ ಸಹಿತ ಮಾರ್ಗ ಇನ್ನೂ ಉದ್ಘಾಟನೆ ಆಗಿಲ್ಲ ರಾಜ್ಯ ಕಾಂಗ್ರೆಸ್ ಸರ್ಕಾರ ರಾಹುಲ್ ಗಾಂಧಿಯವರಿಗಾಗಿ ಕಾಯುತ್ತಿದೆ ಎಂದು ಅವರು ಟೀಕಿಸಿದರು. ಶೀಘ್ರವೇ ಈ ಮಾರ್ಗ ಉದ್ಘಾಟಿಸುವಂತೆ ಅವರು ರಾಜ್ಯ ನಾಯಕರಿಗೆ ಒತ್ತಾಯಿಸಿದರು.
ಬೋಗಿ ಒದಗಿಸುವ ಕಂಪನಿಗೆ ಸಮಸ್ಯೆ: ಬಗೆಹರಿಸಲು ಕ್ರಮ
ಬೆಂಗಳೂರಿನ ಹಳದಿ ಮೆಟ್ರೋ ಮಾರ್ಗಕ್ಕೆ ಬೋಗಿ ಒದಗಿಸಲಿರುವ ಚೀನಾ ಮೂಲದ ಕಂಪನಿಗೆ ಕೆಲವು ಅಡೆತಡೆಗಳು ಎದುರಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಸಂಬಂಧ ನಾನು ಆದಷ್ಟು ಶೀಘ್ರವೇ ಡಿಸಿಎಂ ಡಿಕೆ ಶಿವಕುಮಾರ್ ಅವರ ಜೊತೆ ಮಾತುಕತೆ ನಡೆಸುತ್ತೇನ.
ಚೀನಾ ಕಂಪನಿಗೆ ಬೆಂಗಳೂರಿಗೆ ಆಗಮಿಸಿ ಯೋಜನೆ ಕುರಿತು ಮಾಹಿತಿ ತಿಳಿಯಲು, ಪರಿಶೀಲನೆಗೆ ವೀಸಾ ಸಮಸ್ಯೆ ಉಂಟಾಗಿದೆ. ಈ ಸಂಬಂಧ ನಾನು ವಿದೇಶಾಂಗ ಸಚಿವ ಜೈಶಂಕರ್ ಅವರ ಜೊತೆಗೆ ಚರ್ಚಿಸಿ ಈ ಸಮಸ್ಯೆ ಬಗೆಹರಿಸಲಾಗುವುದು ಎಂದು ಅವರು ಭರವಸೆ ನೀಡಿದರು.












Click it and Unblock the Notifications