Namma Metro: ಮೆಟ್ರೋ ಪ್ರಯಾಣ ದರ ಏರಿಕೆಗೆ ರಾಜ್ಯ ಸರ್ಕಾರದ ಉಚಿತ ಕೊಡುಗೆಗಳೇ ಕಾರಣ ಎಂದ ಸಂಸದ
ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಬೆನ್ನಲ್ಲೇ ರಾಜ್ಯ ಸರ್ಕಾರ ಪ್ರಯಾನ ದರ ಏರಿಕೆಗೆ ನಾವು ಕಾರಣವಲ್ಲ, ಕೇಂದ್ರ ಸರ್ಕಾರ ಕಾರಣ ಎನ್ನುವ ಸಬೂಬು ಕೊಡುತ್ತಿದೆ. ಇದೀಗ ದರ ಏರಿಕೆ ವಿಚಾರ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಆರೋಪ ಪ್ರತ್ಯಾರೋಪ ನಡೆಯುತ್ತಿದ್ದು, ಈಗ ಬಿಜೆಪಿ ಸಂಸದ ಪಿ.ಸಿ ಮೋಹನ್ ರಾಜ್ಯ ಸರ್ಕಾರಕ್ಕೆ ತಿರುಗೇಟು ಕೊಟ್ಟಿದ್ದಾರೆ.
ಮೆಟ್ರೋ ದರ ಏರಿಕೆಗೆ ರಾಜ್ಯ ಸರ್ಕಾರ ಕೊಟ್ಟಿರುವ ಉಚಿತ ಭಾಗ್ಯಗಳೇ ಕಾರಣ ಎಂದು ಹೇಳಿದ್ದಾರೆ. ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿದ್ದೇ ರಾಜ್ಯ ಸರ್ಕಾರ ಎಂದು ಆರೋಪಿಸಿದ್ದಾರೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಅವರ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದು ಮೆಟ್ರೋ ದರ ಏರಿಕೆಗೆ ಕಾರಣವೇನು ಎಂದು ವಿವರಿಸಿದ್ದಾರೆ.

ಪಿಸಿ ಮೋಹನ್ ಹೇಳಿದ್ದೇನು?
ಮೆಟ್ರೋ ಪ್ರಯಾಣ ದರ ಏರಿಕೆ ಮಾಡದಂತೆ ನಾನು ಮೊದಲಿನಿಂದಲೂ ವಾದಿಸುತ್ತಿದ್ದೇನೆ. ಉಚಿತ ಕೊಡುಗೆಗಳಿಂದ ಹಣದ ಕೊರತೆಯಿಂದಾಗಿ ಬಿಎಂಆರ್‌ಸಿಎಲ್‌ನ ₹9,919 ಕೋಟಿ ಹಂತ 2 ರ ವಿನಂತಿಯನ್ನು ಮುಂದೂಡಿಕೆ ಮಾಡಿದ್ದರಿಂದ ಇದೀಗ ರಾಜ್ಯ ಸರ್ಕಾರವು ಹೆಚ್ಚಳವನ್ನು ಪ್ರಸ್ತಾಪಿಸಿತ್ತು. 51% ಪಾಲನ್ನು ಹೊಂದಿರುವ ರಾಜ್ಯ ಸರ್ಕಾರ ಬಿಎಂಆರ್‌ಸಿಎಲ್ ಮೇಲೆ ಹಿಡಿತ ಹೊಂದಿದೆ. ಈಗಲೂ ಜವಾಬ್ದಾರಿಯನ್ನು ತೆಗೆದುಕೊಂಡು ಪ್ರಯಾಣದರ ಹೆಚ್ಚಳವನ್ನು ಮರುಪರಿಶೀಲಿಸುವಂತೆ ನಾನು ಒತ್ತಾಯಿಸುತ್ತೇನೆಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ಟ್ವೀಟ್ ಮಾಡಿದ್ದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ನಮ್ಮ ಮೆಟ್ರೋ ಪ್ರಯಾಣದರ ಏರಿಕೆ ಮಾಡಿದ್ದು ರಾಜ್ಯ ಸರ್ಕಾರವಲ್ಲ, ಕೇಂದ್ರ ಸರ್ಕಾರ ಎಂದು ಹೇಳಿದ್ದರು. ಸುದೀರ್ಘ ಟ್ವೀಟ್ ಹಂಚಿಕೊಂಡಿದ್ದ ಅವರು, ಕೇಂದ್ರ ಸರ್ಕಾರದ ಅಧಿನದಲ್ಲೇ ಪ್ರಯಾಣ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರಯಾಣ ದರ ಏರಿಕೆಗೆ ಕೇಂದ್ರ ಸರ್ಕಾರವೇ ಮುಖ್ಯ ಕಾರಣ, ಪಿಸಿ ಮೋಹನ್ ಅವರ ಹೇಳಿಕೆ ರಾಜಕೀಯ ಪ್ರೇರಿತ ಎಂದು ಹೇಳಿದ್ದರು.
ಮೊದಲು 45% ಪ್ರಯಾಣ ದರ ಏರಿಕೆಯನ್ನು ಪಿಸಿ ಮೋಹನ್ ಅವರೇ ಶ್ಲಾಘಿಸಿದ್ದರು. ಮೋದಿ ಸರ್ಕಾರ ಪಾರದರ್ಶಕ ಮತ್ತು ಉತ್ತಮ ದರವನ್ನು ಜಾರಿ ಮಾಡುತ್ತಿದೆ ಎಂದಿದ್ದರು. ಆದರೆ ಈಗ ಅವರೇ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮೇಲೆ ಪ್ರಯಾಣ ದರ ಏರಿಕೆಯ ಗೂಬೆ ಕೂರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಈ ವಿಚಾರದಲ್ಲಿ ರಾಜಕೀಯ ಮಾಡುವುದನ್ನು ಬಿಟ್ಟು ಪ್ರಯಾಣ ದರ ಏರಿಕೆಗೆ ಬಿಜೆಪಿ ಹೊಣೆ ಹೊರಬೇಕು ಮತ್ತು ಇದಕ್ಕೆ ಪರಿಹಾರ ಹುಡುಕುವ ಕೆಲಸ ಮಾಡಬೇಕು. ಪಿಸಿ ಮೋಹನ್ ರೀತಿಯ ಸಂಸದರು, ಪ್ರಮುಖ ನಾಯಕರು ತಾವು ಮೊದಲು ನೀಡಿರುವ ಹೇಳಿಕೆಗಳನ್ನು ನೆನಪಿಸಿಕೊಳ್ಳಬೇಕು, ಪರಸ್ಪರ ಆರೋಪ ಮಾಡುವ ಬದಲು ಜನರ ಸಮಸ್ಯೆಗಳಿಗೆ ಪರಿಹಾರ ಹುಡುಕಬೇಕು ಎಂದು ಹೇಳಿದ್ದಾರೆ.












Click it and Unblock the Notifications