Bengaluru-Mysuru Highway: ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಸಣ್ಣ ತಪ್ಪು ಮಾಡುವ ಮುನ್ನ ಇರಲಿ ಎಚ್ಚರ!
ಬೆಂಗಳೂರು, ಮೇ. 17: ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳಿಗೆ ಕಡಿವಾಣ ಹಾಕಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ನಿರ್ಧರಿಸಿದ್ದು, ಹೈವೆಯಲ್ಲಿ 60 ಕೃತಕ ಬುದ್ಧಿಮತ್ತೆ ಚಾಲಿತ ಟ್ರಾಫಿಕ್ ಜಾರಿ ಕ್ಯಾಮೆರಾಗಳನ್ನು ಅಳವಡಿಸಲು ಪ್ರಾರಂಭಿಸಿದೆ. ಇದರ ಬೆನ್ನಲ್ಲೇ ಪೊಲೀಸ್ ಕ್ಯಾಮೆರಾಗಳು ತಮ್ಮ ಕೆಲಸ ಮಾಡುತ್ತಿವೆ.
ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ನಮ್ಮ ಪೊಲೀಸ್ ಕ್ಯಾಮೆರಾಗಳು ತಮ್ಮ ಕೆಲಸ ಮಾಡುತ್ತಿವೆ. ಇದೆ ಕಾರಣಕ್ಕೆ ಕೇವಲ 15 ದಿನದಲ್ಲಿ ಸುಮಾರು 12 ಸಾವಿರಕ್ಕೂ ಹೆಚ್ಚು ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ವರದಿಯಾಗಿವೆ. ಈ ಬಗ್ಗೆ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಟ್ವಿಟರ್ ಹ್ಯಾಂಡಲ್‌ನಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.

15 ದಿನದಲ್ಲಿ 12 ಸಾವಿರಕ್ಕೂ ಹೆಚ್ಚು ಪ್ರಕರಣ
ಸಂಚಾರ ನಿಯಮ ಉಲ್ಲಂಘನೆಗಳ ಪ್ರಕರಣಗಳ ಬಗ್ಗೆ ಕರ್ನಾಟಕ ರಾಜ್ಯ ಪೊಲೀಸರು ಮಾಹಿತಿ ಹಮಚಿಕೊಂಡಿದ್ದಾರೆ. "ಬೆಂಗಳೂರು- ಮೈಸೂರು ಹೈವೇನಲ್ಲಿ ನಮ್ಮ ಪೊಲೀಸ್ ಕ್ಯಾಮೆರಾಗಳು ತಮ್ಮ ಕೆಲಸ ಮಾಡುತ್ತಿವೆ. ಕೇವಲ 15 ದಿನದಲ್ಲಿ 12192 ಸಂಚಾರ ನಿಯಮ ಉಲ್ಲಂಘನೆಗಳನ್ನು ಸೆರೆ ಹಿಡಿದಿವೆ" ಎಂದಿದ್ದಾರೆ.
ಮುಂದುವರಿದು, "ಸಂಚಾರ ನಿಯಮ ಉಲ್ಲಂಘನೆಯಿಂದ ಅಪಘಾತವಾದರೆ ಅದನ್ನು ಕುಟುಂಬದವರು ಸಹಿಸಿಕೊಳ್ಳಲು ಸಾಧ್ಯವೇ... ಒಮ್ಮೆ ಯೋಚಿಸಿ. ಯಾವಾಗಲೂ ಸಂಚಾರ ನಿಯಮ ಪಾಲಿಸಿ, ಸುರಕ್ಷಿತವಾಗಿ ಚಲಿಸಿ" ಎಂದು ಕರ್ನಾಟಕ ರಾಜ್ಯ ಪೊಲೀಸರು ವಾಹನ ಸವಾರರಿಗೆ ಎಚ್ಚರಿಕೆ ನೀಡಿದ್ದಾರೆ.
60 ಎಐ ಚಾಲಿತ ಟ್ರಾಫಿಕ್ ಕ್ಯಾಮೆರಾ
ಬೆಂಗಳೂರು-ಮೈಸೂರು ಪ್ರವೇಶ ನಿಯಂತ್ರಿತ ಹೆದ್ದಾರಿಯಲ್ಲಿ ವೇಗವಾಗಿ ಚಾಲನೆ ಮಾಡುವ ಘಟನೆಗಳು ಮತ್ತೆ ಮತ್ತೆ ಹೆಚ್ಚುತ್ತಿರುವ ಕಾರಣ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಬೆಂಗಳೂರು - ನಿಡಘಟ್ಟ ಮತ್ತು ನಿಡಘಟ್ಟ - ಮೈಸೂರು ಹೆದ್ದಾರಿಯ ಎರಡೂ ಆಯಕಟ್ಟಿನ ಸ್ಥಳಗಳಲ್ಲಿ 60 ಕೃತಕ ಬುದ್ಧಿಮತ್ತೆ ಚಾಲಿತ ಟ್ರಾಫಿಕ್ ಜಾರಿ ಕ್ಯಾಮೆರಾಗಳನ್ನು ಅಳವಡಿಸಲು ಪ್ರಾರಂಭಿಸಿದೆ.

ಫೆಬ್ರುವರಿಯಲ್ಲಿ, 3.6 ಕೋಟಿ ವೆಚ್ಚದಲ್ಲಿ ಹೆದ್ದಾರಿಯ ಆರು ಸ್ಥಳಗಳಲ್ಲಿ AI ಆಧಾರಿತ ಸ್ವಯಂಚಾಲಿತ ನಂಬರ್ ಪ್ಲೇಟ್ ರೆಕಗ್ನಿಷನ್ (ANPR) ಕ್ಯಾಮೆರಾಗಳನ್ನು ನಿಯೋಜಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅನುಮೋದನೆ ನೀಡಿತ್ತು. ಹರಿಯಾಣದ ಗುರುಗ್ರಾಮ್ ಮೂಲದ ಟೆಕ್ಸಿಡೆಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಹಾಕಿದ್ದ ಈ ಕ್ಯಾಮೆರಾಗಳು ರಾಷ್ಟ್ರೀಯ ಹೆದ್ದಾರಿ 275 ರ ಬೆಂಗಳೂರು - ಮೈಸೂರು ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿವೆ.
ಕ್ಯಾಮೆರಾಗಳು ಕಾರ್ಯಾರಂಭ ಮಾಡಿದ ನಂತರ, ವಾಹನದ ಫೋಟೋಗಳು ಮತ್ತು ನಂಬರ್ ಪ್ಲೇಟ್‌ಗಳು ಸ್ವಯಂಚಾಲಿತವಾಗಿ ಸಂಚಾರ ನಿಯಮ ಉಲ್ಲಂಘನೆಯನ್ನು ಸೆರೆ ಹಿಡಿಯುತ್ತವೆ. ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಲು ಅಧಿಕಾರಿಗಳಿಗೆ ಸಹಾಯ ಮಾಡುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು ಟ್ರಾಫಿಕ್ ಪೊಲೀಸರು ನಗರದಲ್ಲಿ ಅಪಘಾತಕ್ಕೀಡಾದ ಪ್ರದೇಶಗಳಲ್ಲಿ ಅತಿವೇಗದಲ್ಲಿ ಹೋಗುವ ವಾಹನಗಳನ್ನು ಮೇಲ್ವಿಚಾರಣೆ ಮಾಡಲು 25 ಕೃತಕ ಬುದ್ಧಿಮತ್ತೆ ಚಾಲಿತ ಹೈ-ರೆಸಲ್ಯೂಶನ್ ಸ್ಪೀಡ್ ಟ್ರ್ಯಾಪ್ ಎನ್‌ಫೋರ್ಸ್‌ಮೆಂಟ್ ಕ್ಯಾಮೆರಾಗಳನ್ನು ಹಾಕಲು ಯೋಜಿಸುತ್ತಿದ್ದಾರೆ. ಪೊಲೀಸರು ಈಗಾಗಲೇ ಎಂಟು AI ಚಾಲಿತ ಸ್ಪೀಡ್ ಟ್ರ್ಯಾಪ್ ಕ್ಯಾಮೆರಾಗಳನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ಏರ್‌ಪೋರ್ಟ್ ರಸ್ತೆಯಲ್ಲಿ ಅಳವಡಿಸಿದ್ದಾರೆ.












Click it and Unblock the Notifications