ರಾಜ್ಯದಲ್ಲಿ ಶಾಲಾ ಶಿಕ್ಷಕರ ಕೊರತೆಯಿದೆ, ಆದ್ರೆ
ಬೆಂಗಳೂರು, ಏ. 21: ರಾಜ್ಯದಲ್ಲೇನೋ ಶಾಲಾ ಶಿಕ್ಷಕರ ಕೊರತೆಯಿದೆ ಬಹಳವಾಗಿದೆ. ಹಾಗಂತ ನಮ್ಮ ಸರಕಾರ, ಸಂಬಂಧಪಟ್ಟ ಸಚಿವರು ಕೈಕಟ್ಟಿಕೊಂಡು ಕುಳಿತಿದ್ದಾರೆ ಅಂತಲ್ಲ. In fact, ಸಮಯ ಸಿಕ್ಕಾಗಲಲ್ಲೇ ನಮ್ಮ ಶಿಕ್ಷಣ ಸಚಿವರು ಹೇಳುತ್ತಲೇ ಇರುತ್ತಾರೆ. ಹಾಗೆಲ್ಲಾ ಸಚಿವರು ಹೇಳಿದಂತೆ ನೇಮಕಾತಿಗಳು ಆಗಿಬಿಟ್ಟಿದ್ದರೆ ವಿದ್ಯಾರ್ಥಿಗೊಬ್ಬರು ಶಿಕ್ಷಕರು ರಾಜ್ಯದಲ್ಲಿ ತಾಂಡವವಾಡುತ್ತಿದ್ದರು.
ಆದರೆ ಪಾಪ ನಮ್ಮ ಸಚಿವರು ಸದಾಶಯದೊಂದಿಗೆ ಈ ಬಾರಿ ಖಂಡಿತ ನೇಮಕಾತಿ ನಡೆಯಲಿದೆ ಅಂದಿರುತ್ತಾರೆ. ಆದರೆ ಅದು ಯಾವಾಗ ಕಾರ್ಯರೂಪಕ್ಕೆ ಬಂದಿರುತ್ತದೋ ಆ ಶಾರದೆಯೇ ಹೇಳಬೇಕು. (11 ಸಾವಿರ ಪ್ರಾಥಮಿಕ ಶಾಲಾಶಿಕ್ಷರಿಗೆ ಉದ್ಯೋಗಭಾಗ್ಯ)

ಈ ಮಧ್ಯೆ, ಪ್ರಾಥಮಿಕ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು ಮತ್ತದೇ ಧಾಟಿಯಲ್ಲಿ ಹೇಳಿದ್ದಾರೆ. ಲೋಕಸಭೆ ಚುನಾವಣೆ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಪ್ರಾಥಮಿಕ ಮತ್ತು ಪ್ರೌಢಶಾಲೆ ಸೇರಿದಂತೆ ರಾಜ್ಯದಲ್ಲಿ ಒಟ್ಟು 11,400 ಮಂದಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವುದು ಖಚಿತ ಎಂದು ಮಾನ್ಯ ಸಚಿವರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಹಾಗಾಗಿ ನೇಮಕಾತಿ ಪ್ರಕ್ರಿಯೆಗೆ ಅವಕಾಶವಿಲ್ಲ. ಈ ಪ್ರಕ್ರಿಯೆ ಮುಗಿದ ನಂತರ ಕೂಡಲೇ ಶಿಕ್ಷಕರನ್ನು ನೇಮಕ ಮಾಡಲಾಗುವುದು ಎಂದಿದ್ದಾರೆ. ಅದೇನು ಪತ್ರಕರ್ತರು ಕೇಳಿದರು ಅಂತ ಕಾಟಾಚಾರಕ್ಕೆ ಹೇಳಿದರೋ ಅಥವಾ ಈ ಬಾರಿಯಾದರೂ ನಿಜಕ್ಕೂ ನೇಮಕಾತಿ ಆಗುತ್ತದೋ ಎಂದು ಚಾತಕಪಕ್ಷಿಯಂತೆ ಕಾದು ಕುಳಿತಿರುವ ಅರ್ಹ ಅಭ್ಯರ್ಥಿಗಳು ಕೇಳತೊಡಗಿದ್ದಾರೆ.
ಈ ಬಾರಿ ಜೂನ್ ಮೊದಲ ವಾರದಲ್ಲಿ ಶಾಲಾ ಮಕ್ಕಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಪಠ್ಯಪುಸ್ತಕ ಮತ್ತು ಸಮವಸ್ತ್ರ ಪೂರೈಸಲಾಗುವುದು. ಇದುವರೆಗೆ ಶಾಲೆ ಆರಂಭವಾಗಿ ಎರಡು-ಮೂರು ತಿಂಗಳಾದರೂ ಮಕ್ಕಳಿಗೆ ಸಕಾಲದಲ್ಲಿ ಪುಸ್ತಕ ಮತ್ತು ಸಮವಸ್ತ್ರ ಸಿಗುತ್ತಿರಲಿಲ್ಲ. ಆದರೆ, ಈ ಬಾರಿ ಎಲ್ಲ ವ್ಯವಸ್ಥೆಯಾಗಿದ್ದು, ಜೂನ್ ಮೊದಲ ವಾರದಲ್ಲೇ ಮಕ್ಕಳಿಗೆ ಪುಸ್ತಕ ಬಟ್ಟೆ ಸಿಗಲಿದೆ ಎಂದೂ ಹೇಳಿದ್ದಾರೆ. ಈ ವಿಚಾರದಲ್ಲೂ ಪತ್ರಕರ್ತರು ಕೊಂ ಕು ತೆಗೆಯುವುದು ಬೇಡವೆಂದು 'ಶಾಲೆ ಆರಂಭವಾಗಿ ಎರಡ್ಮೂರು ತಿಂಗಳಾದರೂ ಪುಸ್ತಕ ಮತ್ತು ಸಮವಸ್ತ್ರ ವಿತರಣೆಯಾಗುತ್ತಿಲ್ಲ' ಎಂದು ಅವರೇ ವಿಷಾದಿಸಿದ್ದಾರೆ!
ಜುಲೈ ಮತ್ತು ಆಗಸ್ಟ್‌ನಲ್ಲಿ ಸರ್ಕಾರಿ ನೌಕರರ ವರ್ಗಾವಣೆ ನಡೆಯಲಿದೆ. ಸಾಮಾನ್ಯವಾಗಿ ಏಪ್ರಿಲ್, ಮೇ ತಿಂಗಳಲ್ಲಿ ವರ್ಗಾವಣೆ ನಡೆಯಬೇಕಿತ್ತು. ಆದರೆ, ಲೋಕಸಭೆ ಚುನಾವಣೆ ಮತ್ತು ನೀತಿ ಸಂಹಿತೆ ಅಡ್ಡ ಬಂದಿರುವ ಹಿನ್ನೆಲೆಯಲ್ಲಿ ಜುಲೈ, ಆಗಸ್ಟ್ ನಲ್ಲಿ ಸರ್ಕಾರಿ ನೌಕರರ ವರ್ಗಾವಣೆ ನಡೆಯಲಿದೆ ಎಂದು ಅವರು ಹೇಳಿದ್ದಾರೆ.












Click it and Unblock the Notifications