ಬಿಬಿಎಂಪಿ: ಅತಿಕ್ರಮಣ ಯಾರೇ ಮಾಡಿದ್ದರೂ ತೆರವು ಮಾಡಿ: ಉದ್ಯಮಿ ಮೋಹನ್‌ದಾಸ್ ಪೈ
ಬೆಂಗಳೂರು, ಸೆಪ್ಟಂಬರ್ 21: ''ಕರ್ನಾಟಕದ ಶೇ.20ರಷ್ಟು ಜನರಿರುವ ರಾಜಧಾನಿ ಬೆಂಗಳೂರಿಗೆ ಐದು ಮಹಾನಗರ ಪಾಲಿಕೆ ನಿರ್ಮಿಸಿ ಉತ್ತಮ ಆಡಳಿತ ವ್ಯವಸ್ಥೆ ಕೊಟ್ಟರೆ ನಗರಕ್ಕೆ ಉತ್ತಮ ಮೂಲಸೌಕರ್ಯ ದೊರೆಯುತ್ತದೆ. ಈಗಾಗಲೇ ಘಟಿಸಿದ ಪ್ರವಾಹ ಸಮಸ್ಯೆಗೆ ಐಟಿ ಬಿಟಿ ಕಂಪನಿಗಳು ಕಾರಣವಲ್ಲ'' ಎಂದು ಉದ್ಯಮಿ ಮೋಹನ್ ದಾಸ್ ಪೈ ಹೇಳಿದ್ದಾರೆ.
ಬೆಂಗಳೂರು ಮೂಲಭೂತಸೌಕರ್ಯ, ಐಟಿ ಕಂಪನಿಗಳು, ಪ್ರವಾಹ ಬಗ್ಗೆ ಮಾತನಾಡಿದ ಅವರು, 1.20ಕೋಟಿ ಜನಸಂಖ್ಯೆ ಬೆಂಗಳೂರಿನಲ್ಲಿದೆ. ಇದು ಕರ್ನಾಟಕದ ಒಟ್ಟು ಜನಸಂಖ್ಯೆಯ ಶೇ. 20ರಷ್ಟು ಭಾಗ ಎನ್ನಬಹುದು. ಇಲ್ಲಿ ಆಡಳಿತ ನಿರ್ವಹಣೆಯ ಸಾಮರ್ಥ್ಯ ಕಡಿಮೆ ಇದೆ. ಉತ್ತಮ ಆಡಳಿತ ವ್ಯವಸ್ಥೆ, ನಿರ್ವಹಣೆಯಿಂದ ನಗರದ ಅಭಿವೃದ್ಧಿ ಸಾಧ್ಯ ಎಂದರು.
ಬೆಂಗಳೂರಿನಿಂದ ಅತಿ ಹೆಚ್ಚು ತೆರಿಗೆ ಸರ್ಕಾರಕ್ಕೆ ಸಂದಾಯವಾಗುತ್ತದೆ. ಇಂತಹ ಬೆಂಗಳೂರಿನಲ್ಲಿ ಆಡಳಿತ ನಿರ್ವಹಣೆಯಲ್ಲಿ ಒಬ್ಬರೇ ಮುಖ್ಯ ಆಯುಕ್ತರು, 3-4 ಉಪ ಆಯುಕ್ತರು ಇದ್ದಾರೆ. ಹೀಗಾಗಿ ಇಲ್ಲಿ ಆಡಳಿತ ಸಾಮರ್ಥ್ಯ ಕಡಿಮೆ ಇದೆ. ಸಿಂಗಾಪುರ ದೇಶದಲ್ಲಿ ಕೇವಲ 60ಲಕ್ಷ ಜನಸಂಖ್ಯೆ ಇದೆ. ಅದಕ್ಕೆ ಅಲ್ಲಿ ಒಬ್ಬರು ಮುಖ್ಯಮಂತ್ರಿ, ಆಯುಕ್ತರು, ಆಡಳಿತಾಧಿಕಾರಿಗಳು, ಕಾರ್ಪೋರೇಷನ್‌ಗಳು ಇದೆ. ಹೀಗಾಗಿ ಅಲ್ಲಿ ನಿರ್ವಹಣೆ ಸರಿಯಾಗಿದೆ ಎಂದು ಅವರು ಸಮರ್ಥಿಸಿಕೊಂಡರು.

ಬೆಂಗಳೂರಲ್ಲಿ 5 ಪಾಲಿಕೆ ನಿರ್ಮಾಣಕ್ಕೆ ಶಿಫಾರಸು
ಬೆಂಗಳೂರಲ್ಲಿ ಕೇವಲ ಒಂದೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಇದೆ. ರಸ್ತೆ ಸರಿಪಡಿಸಲು, ತ್ಯಾಜ್ಯ, ನೀರು ವಿದ್ಯುತ್ ಸಮಸ್ಯೆಗೆ ಆ ಒಂದೇ ನಾಗರಿಕ ಸಂಸ್ಥೆಯನ್ನೇ ಕೇಲಬೇಕು. ಈ ಕಾರಣದಿಂದ ಸಮಿತಿಯೊಂದರ ಬೆಂಗಳೂರಿಗೆ ಬಹು ಮಹಾನಗರ ಪಾಲಿಕೆಗಳು ಬೇಕು ಎಂದು ಶಿಫಾರಸು ಮಾಡಿತ್ತು. ಜನರ ಪಾಲುದಾರಿಕೆ ಇರಬೇಕಾದರೆ ವಾರ್ಡ್ ಕೌನ್ಸಿಲ್ ಇರಬೇಕು. ಅದರ ಮೇಲೆ ನಾಲ್ಕು ಪುರಸಭೆಗಳು ರಚನೆಯಾಗಬೇಕು. ಅದರ ಮೇಲೆ ಒಂದು ಮೆಟ್ರೋಪಾಲಿಟನ್ ಏಜೆನ್ಸಿ ಇರಬೇಕು ಎಂದು ಅವರು ವಿವರಿಸಿದರು.
ಹೀಗಾಗಿ ಬೆಂಗಳೂರಲ್ಲಿ ಬೆಂಗಳೂರು ಕೇಂದ್ರ, ಉತ್ತರ, ದಕ್ಷಿಣ, ಪಶ್ಚಿಮ ಮತ್ತು ಪೂರ್ವ ಎಂದು ಐದು ಮಹಾನಗರ ಪಾಲಿಕೆಗಳ ಅಗತ್ಯವಿದೆ. ಅವುಗಳು ಮೇಯರ್ ಹಾಗೂ ಸಮರ್ಥವಾಗಿ ಕಾರ್ಯನಿರ್ವಹಿಸುವ ಅಧಿಕಾರಿಗಳನ್ನು ಹೊಂದಿರಬೇಕು ಎಂದು ಅವರು ತಿಳಿಸಿದರು.
ರಾಜಕಾಲುವೆ ಒತ್ತುವರಿ ತೆರವು ನಾಟಕ: ಪೈ ವಾಗ್ದಾಳಿ
ಬಿಬಿಎಂಪಿ ರಾಜಕಾಲುವೆ ಒತ್ತುವರಿ ತೆರವಿನ ನಾಟಕವಾಡುತ್ತಿದೆ. ಈ ರಾಜಕಾಲುವೆ ಒತ್ತುವರಿ ಐಟಿಬಿಟಿ ಕಂಪನಿಗಳಿಂದ ಆಗಿಲ್ಲ. ಬಾಡಿಗೆ ನೀಡಿ ಐಟಿ ಕಂಪನಿಗಳು ಆಯಾ ಸ್ಥಳದಲ್ಲಿ ಕೆಲಸ ಮಾಡುತ್ತಿದೆ. ಆ ಜಮೀನು ಇಲ್ಲವೇ ಜಾಗದ ಮಾಲೀಕರು ಯಾರು ಎಂದು ನೋಡಬೇಕು. ಅವರಿಂದ ಒತ್ತುವರಿ ಆಗಿದ್ದರೆ ಸರ್ಕಾರ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದರು.
ವಿಶ್ವದ ದೊಡ್ಡ ದೊಡ್ಡ ಕಂಪನಿಗಳು ಬೆಂಗಳೂರಲ್ಲಿವೆ. ಅವು ಇಲ್ಲಿನ ಅನೇಕ ಯುವಕರಿಗೆ ಕೆಲಸ ನೀಡಿವೆ. ಐಟಿ ಕಂಪನಿಗಳಿಂದ ಆರ್ಥಿಕತೆ ಸುಧಾರಿಸುತ್ತದೆ. ತೆರಿಗೆ ಅಧಿಕವಾಗಿ ಸಂಗ್ರಹವಾಗುತ್ತದೆ. ಇಷ್ಟೆಲ್ಲ ನೀಡುವ ಐಟಿ ಕಂಪನಿಗಳಿಗೆ ಸರ್ಕಾರ ಮೂಲಸೌಕರ್ಯ ಒದಗಿಸಬೇಕು. ಹೈದರಾಬಾದ್‌ನಲ್ಲೂ ಸಹ ಪ್ರವಾಹ ಉಂಟಾಗಿದ್ದರು ಅಲ್ಲಿ ಈಗ ಎಲ್ಲ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದು ಮೋಹನ್‌ದಾಸ್ ಪೈ ಹೇಳಿದರು.











Click it and Unblock the Notifications