ಮೋದಿಗೆ ಭದ್ರತೆ, ಅರಮನೆ ಮೈದಾನ ಪೊಲೀಸ್ ವಶಕ್ಕೆ
ಬೆಂಗಳೂರು, ನ.11 : ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಬೆಂಗಳೂರು ಸಮಾವೇಶ ನಡೆಯುವ ಅರಮನೆ ಮೈದಾನವನ್ನು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ. ಮುಂದಿನ ವಾರದ ಸಮಾವೇಶಕ್ಕಾಗಿ ಅಗತ್ಯ ಭದ್ರತಾ ವ್ಯವಸ್ಥೆಗಳನ್ನು ಕೈಗೊಂಡಿದ್ದಾರೆ.
ಶನಿವಾರ ಬೆಂಗಳೂರು ಪೊಲೀಸ್ ಆಯುಕ್ತ ರಾಘವೇಂದ್ರ ಔರಾದಕರ್ ನರೇಂದ್ರ ಮೋದಿ ಅವರ ಭಾರತ ಗೆಲ್ಲಿಸಿ ಸಮಾವೇಶದ ಭದ್ರತೆಗೆ ಸಂಬಂಧಸಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದರು. ಹೆಚ್ಚುವರಿ ಆಯುಕ್ತರು, ಜಂಟಿ ಆಯುಕ್ತರು ಸೇರಿದಂತೆ ಎಲ್ಲಾ ವಿಭಾಗಗಳ ಡಿಸಿಪಿ ಮತ್ತು ನರೇಂದ್ರ ಮೋದಿ ಭದ್ರತೆಗೆ ನಿಯೋಜಿಸಿರುವ ಅಧಿಕಾರಿಗಳು ಭಾಗವಹಿಸಿದ್ದರು ಸಭೆಯಲ್ಲಿ ಭಾಗವಹಿಸಿದ್ದರು.

ಭಾನುವಾರ ಪೊಲೀಸರು ಅರಮನೆ ಮೈದಾನವನ್ನು ತಮ್ಮ ವಶಕ್ಕೆ ಪಡೆದಿದ್ದು, ಅಗತ್ಯ ಭದ್ರತಾ ವ್ಯವಸ್ಥೆಗಳನ್ನು ಕೈಗೊಂಡಿದ್ದಾರೆ. ಸದ್ಯ ಸುಮಾರು 100ಕ್ಕೂ ಹೆಚ್ಚು ಪೊಲೀಸರು, ಶ್ವಾನದಳದೊಂದಿಗೆ ಮೈದಾನದ ಭದ್ರತೆ ನೋಡಿಕೊಳ್ಳುತ್ತಿದ್ದಾರೆ. ಸಮಾವೇಶದ ವೇದಿಕೆ ನಿರ್ಮಾಣ ಕಾರ್ಯ ತ್ವರಿತ ಗತಿಯಲ್ಲಿ ನಡೆಯುತ್ತಿದೆ.
ಮೈದಾನದ ಪ್ರವೇಶ ಮತ್ತು ನಿರ್ಗಮನ ದ್ವಾರದ ಬಳಿ ಪೊಲೀಸರು ಕಾವಲು ನಿಂತಿದ್ದಾತೆ. ಸಾರ್ವಜನಿಕರಿಗೆ ಮೈದಾನ ಪ್ರವೇಶವನ್ನು ನಿಷೇಧಿಸಲಾಗಿದೆ. ಮೋದಿ ಪಾಟ್ನಾ ಸಮಾವೇಶದ ಸಮಯದಲ್ಲಿ ಸರಣಿ ಬಾಂಬ್ ಸ್ಪೋಟ ನಡೆದ ಪರಿಣಾಮ ನರೇಂದ್ರ ಮೋದಿ ಸಮಾವೇಶಕ್ಕೆ ಒಂದು ವಾರಗಳ ಮುಂಚಿತವಾಗಿಯೇ ಪೊಲೀಸ್ ವ್ಯವಸ್ಥೆ ಮಾಡಲಾಗಿದೆ.
ಬೆಂಗಳೂರು ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನರೇಂದ್ರ ಮೋದಿ ಅವರ ಸಮಾವೇಶಕ್ಕೆ ಭದ್ರತೆ ಕಲ್ಪಿಸುವ ಕುರಿತು ರೂಪುರೇಷೆ ತಯಾರಿಸಲಾಗಿದೆ. ಪಕ್ಷದ ಮಾಹಿತಿಯಂತೆ ಈಗಾಗಲೇ ಸುಮಾರು 4 ಲಕ್ಷ ಜನರು ಸಮಾವೇಶಕ್ಕಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಈ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದ್ದು, ಪೊಲೀಸರು ಅಗತ್ಯ ಕ್ರಮ ಕೈಗೊಂಡಿದ್ದಾರೆ.












Click it and Unblock the Notifications