ನಮೋ ಭಾಷಣದಲ್ಲಿ ಶಾದಿಭಾಗ್ಯ ಯೋಜನೆ ಪ್ರಸ್ತಾಪ?
ಬೆಂಗಳೂರು, ನ. 15 : ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಬೆಂಗಳೂರಿನ ಭಾರತ ಗೆಲ್ಲಿಸಿ ಸಮಾವೇಶಕ್ಕೆ ಎರಡು ದಿನ ಮಾತ್ರ ಬಾಕಿ ಉಳಿದಿದೆ. ಸಮಾವೇಶದದಲ್ಲಿ ಮೋದಿ ಯಾವ ವಿಷಯದ ಕುರಿತು ಮಾತನಾಡುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಸದ್ಯ ರಾಜ್ಯದಲ್ಲಿ ಸಾಕಷ್ಟು ವಿವಾದ ಉಂಟು ಮಾಡಿರುವ ಶಾದಿಭಾಗ್ಯ ಯೋಜನೆ ಹಾಗೂ ಮೂಢನಂಬಿಕೆ ನಿಷೇಧಿಸುವ ವಿಧೇಯಕದ ವಿಷಯಗಳು ಮೋದಿ ಅವರ ಭಾಷಣದಲ್ಲಿ ಪ್ರಸ್ತಾಪವಾಗುವ ಸಾಧ್ಯತೆಯಿದೆ.
ನರೇಂದ್ರ ಮೋದಿ ಅವರ ಭಾಷಣ ಸಿದ್ಧಪಡಿಸುವ ಚಿಂತಕರ ತಂಡಕ್ಕೆ ರಾಜ್ಯ ಬಿಜೆಪಿ ಘಟಕ ಕರ್ನಾಟಕದಲ್ಲಿನ ಇತ್ತೀಚಿಗೆ ಹೆಚ್ಚು ವಿವಾದಕ್ಕೆ ಕಾರಣವಾಗಿರುವ ಶಾದಿಭಾಗ್ಯ ಮತ್ತು ಹಾಗೂ ಮೂಢನಂಬಿಕೆ ನಿಷೇಧಿಸುವ ವಿಧೇಯಕ ಕುರಿತು ಮಾಹಿತಿ ನೀಡಿದೆ. ಪ್ರತಿಪಕ್ಷಗಳು, ಸಂಘಟನೆಗಳು ಇದನ್ನು ವಿರೋಧಿಸುತ್ತಿದ್ದು, ಭಾಷಣದಲ್ಲಿ ಈ ಅಂಶದ ಬಗ್ಗೆ ಗಮನ ನೀಡುವಂತೆ ತಂಡಕ್ಕೆ ಮಾಹಿತಿ ನೀಡಿದೆ, ಯೋಜನೆಯ ಕುರಿತು ವಿವರಗಳನ್ನು ಒದಗಿಸಿದೆ.

ನರೇಂದ್ರ ಮೋದಿ ಪ್ರತಿಯೊಂದು ರಾಜ್ಯಕ್ಕೆ ತೆರಳುವ ಮೊದಲು ಅವರ ಚಿಂತಕರ ತಂಡ ಅಲ್ಲಿನ ಮಾಹಿತಿ ಸಂಗ್ರಹಿಸಿ, ಮೋದಿ ಅವರು ಭಾಷಣದಲ್ಲಿ ಪ್ರಸ್ತಾಪಿಸಬಹುದಾದ ಪ್ರಮುಖ ಅಂಶಗಳನ್ನು ಸಿದ್ಧಪಡಿಸಿ ಕೊಡುತ್ತದೆ. ಈ ತಂಡ ರಾಜ್ಯ ಬಿಜೆಪಿ ಘಟಕಗಳಿಂದ ಮಾತ್ರವಲ್ಲದೇ, ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹಿಸುತ್ತದೆ. ಆದರ ಆಧಾರವ ಮೇಲೆಯೇ ಮೋದಿ ತಮ್ಮ ಭಾಷಣದಲ್ಲಿ ಸ್ಥಳೀಯ ವಿಷಯಗಳ ಕುರಿತು ಮಾತನಾಡುತ್ತಾರೆ.
ಕರ್ನಾಟಕದಲ್ಲಿ ಶಾದಿಭಾಗ್ಯ, ಮೂಡನಂಬಿಕೆ ನಿಷೇಷ ಕಾಯ್ದೆ ವಿಚಾರಗಳ ಕುರಿತು ಸರ್ಕಾರದ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ. ನ.25ರಿಂದ ಆರಂಭವಾಗುವ ಚಳಿಗಾಲದ ಅಧಿವೇಶನದಲ್ಲಿಯೂ ಇದೇ ವಿಚಾರದ ಕುರಿತು ಸರ್ಕಾರವನ್ನು ಸಂಕಷ್ಟಕ್ಕೆ ಸಿಲುಕಿಸಲು ಪ್ರತಿಪಕ್ಷಗಳು ಸಿದ್ಧತೆ ನಡೆಸುತ್ತಿವೆ. ಆದ್ದರಿಂದ ಭಾರತ ಗೆಲ್ಲಿಸಿ ಸಮಾವೇಶದಲ್ಲಿ ಮೋದಿ ಈ ವಿಷಯಗಳನ್ನು ಪ್ರಸ್ತಾಪಿಸಿ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಬಹುದು ಎಂದು ನಿರೀಕ್ಷಿಸಲಾಗಿದೆ. (ಶಾದಿಭಾಗ್ಯ ಯೋಜನೆಗಾಗಿ ಧರಣಿ)
ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದರೆ ಅದು ರಾಷ್ಟ್ರ ಮಟ್ಟದ ವಿಷಯವಾಗುತ್ತದೆ. ಆಗ ಕಾಂಗ್ರೆಸ್ ಪಕ್ಷಕ್ಕೆ ತಮ್ಮ ಸರ್ಕಾರ ಮಾಡುತ್ತಿರುವ ಕೆಲಸದ ಬಗ್ಗೆ ರಾಷ್ಟ್ರ ಮಟ್ಟದಲ್ಲಿ ಮುಖಭಂಗವಾಗುತ್ತದೆ ಎಂಬುದು ರಾಜ್ಯ ಬಿಜೆಪಿ ಘಟಕದ ಚಿಂತನೆ. ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಲು ಮೋದಿ ತೀಕ್ಷಣ ಪದಗಳನ್ನೇ ಬಳಸುತ್ತಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತಿರುವುದರಿಂದ ಮೋದಿ ಮಾತಿನ ಮೇಲೆ ಜನರ ನಿರೀಕ್ಷೆ ಹೆಚ್ಚಿದೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನ.17ರ ಭಾನುವಾರ ನರೇಂದ್ರ ಮೋದಿ ಭಾರತ ಗೆಲ್ಲಿಸಿ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. ಮೋದಿ ಸಮಾವೇಶಕ್ಕೆ ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿದ್ದು, ಪಕ್ಷದ ಪ್ರಧಾನಿ ಅಭ್ಯರ್ಥಿಗೆ ಭವ್ಯ ಸ್ವಾಗತ ಕೋರಲು ರಾಜ್ಯ ಬಿಜೆಪಿ ಘಟಕವೂ ಸಕಲ ರೀತಿಯಲ್ಲಿ ತಯಾರಿ ನಡೆಸುತ್ತಿದೆ.












Click it and Unblock the Notifications