ಪರಿಷತ್ ಸದಸ್ಯರಿಗೂ ಸಚಿವ ಸ್ಥಾನ ಬೇಕು: ಎಚ್‌ಎಂ ರೇವಣ್ಣ ಪಟ್ಟು
ಬೆಂಗಳೂರು, ಅಕ್ಟೋಬರ್ 5: ಬೇರೆ ರಾಜ್ಯಗಳಲ್ಲಿ ವಿಧಾನ ಪರಿಷತ್ ಸದಸ್ಯರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಕೊಟ್ಟಿದ್ದು, ಕರ್ನಾಟಕದಲ್ಲೂ ಪಕ್ಷದ ಹೈಕಮಾಂಡ್ ಅವಕಾಶ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ಒತ್ತಾಯಿಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ಪುನರ್ ರಚನೆ ವಿಚಾರದಲ್ಲಿ ಎಲ್ಲ ರಾಜ್ಯಗಳಲ್ಲಿ ವಿಧಾನ ಪರಿಷತ್ ಸದಸ್ಯರಿಗೆ ಸಚಿವ ಸ್ಥಾನ ನೀಡಿದೆ. ಹೀಗಾಗಿ ಪರಿಷತ್ ಹಿರಿಯ ಸದಸ್ಯರಿಗೆ ಅವಕಾಶ ನೀಡಬೇಕು. ನಾನು ಕೂಡಾ ಸಚಿವ ಸ್ಥಾನದ ಆಕಾಂಕ್ಷಿಯೇ. ಸಂಪುಟದಲ್ಲಿ 2 ಸ್ಥಾನ ಕುರುಬ ಸಮುದಾಯಕ್ಕೆ ನೀಡಬೇಕು ಎಂದು ಒತ್ತಾಯಿಸಿದರು.
ಇದುವರೆಗೂ ಬಿಜೆಪಿ ನೀಡಿರುವ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ. ಹಾಗಾಗಿ ಬಿಜೆಪಿಯೇ ಬಹುಮತ ಪಡೆಯುತ್ತದೆ ಎನ್ನುವುದು ಸರಿಯಲ್ಲ. ಸ್ಥಳೀಯ ಚುನಾವಣೆಯಲ್ಲಿ ಮೈತ್ರಿ ಸರ್ಕಾರ ಮೇಲುಗೈ ಸಾಧಿಸಿದೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದರು.

ವಿಧಾನ ಪರಿಷತ್ನ ಮೂರು ನಾಮ ನಿರ್ದೇಶಿತ ಸ್ಥಾನಗಳು ದೋಸ್ತಿಗಳ ನಡುವೆ ಹಂಚಿಕೆಯಾಗಿದೆ. ಕಾಂಗ್ರೆಸ್ 2 ಹಾಗೂ ಜೆಡಿಎಸ್ 1 ಸ್ಥಾನವನ್ನ ಹಂಚಿಕೆ ಮಾಡಿಕೊಂಡಿವೆ. ಅದರಂತೆ ಇಬ್ಬರ ಹೆಸರನ್ನ ಕಾಂಗ್ರೆಸ್ ಅಂತಿಮಗೊಳಿಸಿದೆ ಎನ್ನಲಾಗಿದೆ.
ಯು.ಬಿ. ವೆಂಕಟೇಶ್ ಮತ್ತು ಪ್ರಕಾಶ್ ರಾಥೋಡ್ ಹೆಸರು ಫೈನಲ್ ಆಗಿದೆ ಎನ್ನಲಾಗಿದೆ. ಈ ಇಬ್ಬರ ಹೆಸರನ್ನ ಅಂತಿಮಗೊಳಿಸಿರುವ ಕಾಂಗ್ರೆಸ್ ಸಿಎಂ ಕುಮಾರಸ್ವಾಮಿಗೆ ರವಾನೆ ಮಾಡಿದೆ ಎನ್ನಲಾಗಿದೆ. ಜೆಡಿಎಸ್ ಪಾಲಿನ ಒಂದು ಸ್ಥಾನದ ಹೆಸರು ಅಂತಿಮಗೊಳ್ಳಬೇಕಿದೆ. ಜೆಡಿಎಸ್ನಿಂದ ಮಾಜಿ ಶಾಸಕ ಕೋನರೆಡ್ಡಿ ಹೆಸರು ಮುಂಚೂಣಿಯಲ್ಲಿದೆ ಎಂದು ತಿಳಿದುಬಂದಿದೆ.












Click it and Unblock the Notifications