‘ಅಲಿಂಗ ಚಳವಳಿ’ ಮೂಲಕ ಜೆಡಿಎಸ್ ಸೇರುವೆ ಎಂದ ಸಿಎಂ ಇಬ್ರಾಹಿಂ
ಬೆಂಗಳೂರು, ಫೆಬ್ರವರಿ 5: ಬಹುಸಂಖ್ಯಾತರು ಹಿಂದುಳಿದವರನ್ನು ಅಪ್ಪಿಕೊಳ್ಳುವ 'ಅಲಿಂಗ ಚಳವಳಿ' ಮಾಡುವುದಾಗಿ ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಘೋಷಿಸಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ಮಾತನಾಡಿದ ಅವರು, ಅನೇಕ ಧಾರ್ಮಿಕ ಮುಖಂಡರ ಸಭೆ ನಡೆಸಿದ್ದೇನೆ, 'ಅಲಿಂಗ ಚಳವಳಿ' ಮಾಡುತ್ತೇವೆ. ಅಲ್ಪಸಂಖ್ಯಾತರು, ಲಿಂಗಾಯತರು, ಗೌಡರನ್ನು ಒಂದಾಗಿಸಬೇಕು. ಬಹುಸಂಖ್ಯಾತರು ದಲಿತರನ್ನು, ಹಿಂದುಳಿದವರನ್ನು ಆಲಿಂಗನ ಮಾಡಿಕೊಳ್ಳಬೇಕು. ಇದೇ 'ಅಲಿಂಗ ಚಳುವಳಿ' ಎಂದು ಹೇಳಿದರು.
ಇದೊಂದು ಸಾಮಾಜಿಕ ಚಳವಳಿಯಾಗಿದ್ದು, ಬಿರುಕುಗಳು ಹೋಗಬೇಕು, ದಲಿತರಲ್ಲಿ ಒಳ್ಳೆಯ ಭಾವನೆಗಳು ಬರಬೇಕು. ಅಂದು ಬಸವಣ್ಣ ಮಾಡಿದ ಕೆಲಸವನ್ನು ಈಗ ಕರ್ನಾಟಕದಲ್ಲಿ ಮತ್ತೆ ಮಾಡಬೇಕು ಎಂದು ಹೊರಟಿದ್ದೇವೆ ಎಂದು ಸಿಎಂ ಇಬ್ರಾಹಿಂ ಮಾಹಿತಿ ನೀಡಿದ್ದಾರೆ.

ಅಲ್ಲದೇ ಇದಕ್ಕಾಗಿ ಬಿಜಾಪುರದಿಂದ ಅಲಿಂಗ ಸಮಾವೇಶ ಮಾಡುತ್ತೇವೆ. ಇದು ರಾಜಕೀಯೇತರ ಕಾರ್ಯಕ್ರಮವಾಗಿದ್ದು, ನಾನೇ ಅದರ ಅಧ್ಯಕ್ಷ ಆಗಬೇಕು ಅಂತೇನಿಲ್ಲ. ಸ್ವಾಮಿಜಿಗಳೇ ಅದನ್ನು ನಡೆಸಿಕೊಂಡು ಹೋಗುತ್ತಾರೆ ಎಂದು ಹೇಳಿದ್ದಾರೆ. ಈ ಚಳವಳಿಗೆ ಎಲ್ಲಾ ಮಠಾಧೀಶರು ಬೆಂಬಲ ನೀಡಿದ್ದಾರೆ ಎಂದರು.
ಅಹಿಂದ ಹಾಗೂ ಅಲಿಂಗ ಚಳವಳಿಗಳು ಬೇರೆ. ಅಲಿಂಗ ಒಂದು ಸಾಮಾಜಿಕ ಚಳವಳಿ. ಮಠದ ಸ್ವಾಮಿಗಳು ಈ ಚಳವಳಿಯನ್ನು ನಡೆಸುತ್ತಾರೆ. ಇದು ರಾಜಕೀಯದಿಂದ ಹೊರತಾಗಿದ್ದು, ಸಾಮಾಜಿಕ ನ್ಯಾಯದ ತಳಹದಿಯ ಮೇಲೆ ನಡೆಯಲಿದೆ ಎಂದು ಹೇಳಿದರು.
ಜೆಡಿಎಸ್ ಸೇರುವ ಬಗ್ಗೆ ಸಿಎಂ ಇಬ್ರಾಹಿಂ ಹೇಳಿದ್ದೇನು?
ಫೆಬ್ರವರಿ 14ರಂದು ಹುಬ್ಬಳ್ಳಿ ಸಭೆಯ ನಂತರ ಜೆಡಿಎಸ್ ಸೇರುವೆ ಎಂದು ವಿಧಾನ ಪರಿಷತ್ ಸದಸ್ಯ, ಮಾಜಿ ಸಚಿವ ಸಿ.ಎಂ ಇಬ್ರಾಹಿಂ ಹೇಳಿದ್ದಾರೆ. ಸದ್ಯ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ.
ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಲು ದಿನಾಂಕ ಪ್ರಕಟಿಸುವೆ. ಪರಿಷತ್ ಸ್ಥಾನಕ್ಕೆ ರಾಜೀನಾಮೆ ಕೊಡಲು ತೀರ್ಮಾನಿಸಿದ್ದೇನೆ. ಮತಾಂತರ ನಿಷೇಧ ಬಿಲ್ಗೆ ನನ್ನಿಂದಾಗಿ ಹಿನ್ನಡೆ ಆಗಬಾರದು ಎಂದು ಸದ್ಯಕ್ಕೆ ರಾಜೀನಾಮೆ ಕೊಟ್ಟಿಲ್ಲ ಎಂದ ಸಿಎಂ ಇಬ್ರಾಹಿಂ. ನಾನು ಅಲ್ಲಾಡಿದ್ದಕ್ಕೆ ಮೊಹಮ್ಮದ್ ನಲಪಾಡ್ಗೆ ಅಧ್ಯಕ್ಷ ಸ್ಥಾನ, ಯುಟಿ ಖಾದರ್ಗೆ ವಿಧಾನಸಭೆ ಉಪನಾಯಕ ಸ್ಥಾನ ಸಿಕ್ಕಿದೆ.

ನಾನು ಬಿಟ್ಟರೆ ಇನ್ನು ಕೆಲವರಿಗೆ ಅವಕಾಶ ಸಿಗುತ್ತದೆ. ಇಬ್ರಾಹಿಂಗೆ ಖಾದರ್ ಸರಿಸಮಾನ ಅನ್ನುವುದಾದರೆ, ಸಿದ್ದರಾಮಯ್ಯಗೆ ಎಚ್. ವಿಶ್ವನಾಥ್ ಸಮ. ಅವರನ್ನು ಸಿಎಂ ಮಾಡ್ತಾರಾ? ಎಂದು ಇಬ್ರಾಹಿಂ ವ್ಯಂಗ್ಯವಾಗಿಯೇ ಪ್ರಶ್ನಿಸಿದ್ದಾರೆ.
ಇನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಕೃಷ್ಣ ಭೈರೇಗೌಡ ಪರ್ಯಾಯ ನಾಯಕರಲ್ವಾ? ಅವರು ಒಕ್ಕಲಿಗರೇ ಅಲ್ವಾ? ಎಂದು ಕೇಳಿರುವ ಸಿಎಂ ಇಬ್ರಾಹಿಂ, ಅವರಿಗೊಂದು ನಮಗೊಂದು ನ್ಯಾಯವೇ?. ನಾನು ಸೆಂಟ್ರಲ್ ಮಿನಿಸ್ಟರ್ ಆಗಿದ್ದಾಗ ಟಿಕೆಟ್ ಕೇಳುವುದಕ್ಕೆ ನನ್ನ ಹತ್ತಿರ ಬಂದಿದ್ದರು. ನಾನು ಭಾಷಣ ಮಾಡುತ್ತಿದ್ದರೆ ಸಿದ್ದರಾಮಯ್ಯನವರು ಮೋಟರ್ ಸೈಕಲ್‌ನಲ್ಲಿ ಬಂದು ನನ್ನ ಭಾಷಣ ಕೇಳಿ ಹೋಗುತ್ತಿದ್ದರು ಎಂದು ಸಿಎಂ ಇಬ್ರಾಹಿಂ ಹೇಳಿದರು.
ಹಿಜಾಬ್ ವಿವಾದದ ಬಗ್ಗೆ ಸಿಎಂ ಇಬ್ರಾಹಿಂ ಏನಂದರು?
ಸರ್ಕಾರಿ ಕಾಲೇಜುಗಳಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ವಿವಾದಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ ಎಂಎಲ್ಸಿ ಸಿಎಂ ಇಬ್ರಾಹಿಂ, ವಿವಾದ ಸೃಷ್ಟಿಸುವಲ್ಲಿ ರಾಜ್ಯ ಸರ್ಕಾರ ಮುಂಚೂಣಿಯಲ್ಲಿದೆ ಎಂದು ಹೇಳಿದ್ದಾರೆ. ಯಾವುದೇ ವಿವಾದದಲ್ಲಿ ಸರ್ಕಾರಕ್ಕೆ ಯಶಸ್ಸು ಸಿಗುತ್ತಿಲ್ಲ. ಈಗ ಹಿಜಾಬ್ ವಿವಾದ ಶುರು ಆಗಿದೆ ಎಂದ ಇಬ್ರಾಹಿಂ ವಿವಾದವನ್ನು ಅಸಮರ್ಪಕವಾಗಿ ನಿರ್ವಹಿಸುತ್ತಿರುವುದರ ಬಗ್ಗೆ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಕರ್ನಾಟಕದ ವಿವಾದ ಗಂಭೀರವಾಗಿ ಪ್ರಸ್ತಾಪವಾಗುತ್ತಿದೆ. ದೇಶದ ಮಾನವನ್ನು ಎಲ್ಲಿ ತೆಗೆದುಕೊಂಡು ಹೋಗುತ್ತಿದ್ದೀರಿ? ಎಂದು ಅವರು ಖಾರವಾಗಿ ನುಡಿದಿದ್ದಾರೆ. ಇದನ್ನು ಅಂತ್ಯಗೊಳಿಸಬೇಕು ಎಂದು ಸರ್ಕಾರಕ್ಕೆ ಇಬ್ರಾಹಿಂ ಮನವಿ ಮಾಡಿದ್ದಾರೆ.












Click it and Unblock the Notifications