ಶಾಸಕ ವಿನಯ್ ಕುಲಕರ್ಣಿ ಅರ್ಜಿ ಶೀಘ್ರ ಇತ್ಯರ್ಥಕ್ಕೆ ಮನವಿ: ನ್ಯಾಯಮೂರ್ತಿ ಹೇಳಿದ್ದೇನು?
ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಸದಸ್ಯರಾಗಿದ್ದ ಯೋಗೀಶ್‌ಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಜನಪ್ರತಿನಿಧಿಗಳ ಸೆಷನ್ಸ್ ನ್ಯಾಯಾಲಯ ಆರೋಪಿಗಳ ವಿರುದ್ಧ ದೋಷಾರೋಪಣೆ ನಿಗದಿಪಡಿಸಿರುವಲ್ಲಿ ಸಾಕಷ್ಟು ದೋಷಗಳಿವೆ ಎಂದು ಧಾರವಾಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಶಾಸಕ ವಿನಯ ಕುಲಕರ್ಣಿ ಪರ ವಕೀಲರು ಹೈಕೋರ್ಟ್‌ಗೆ ಮನವಿ ಮಾಡಿದರು.
'ನನ್ನ ವಿರುದ್ಧ ಹೊರಿಸಲಾಗಿರುವ ದೋಷಾರೋಪಣೆ ಮತ್ತು ಬೆಂಗಳೂರು ಸಿಟಿ ಸಿವಿಲ್ ಕೋರ್ಟ್‌ನ ವಿಶೇಷ ನ್ಯಾಯಾಲಯದಲ್ಲಿ ನಡೆಯಲಿರುವ ವಿಚಾರಣಾ ನ್ಯಾಯಾಲಯದ ನ್ಯಾಯ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು' ಎಂದು ವಿನಯ ಕುಲಕರ್ಣಿ ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು, ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಸೋಮವಾರ ವಿಚಾರಣೆ ನಡೆಸಿದರು.

ವಿಚಾರಣೆ ವೇಳೆ ವಿನಯ ಕುಲಕರ್ಣಿ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ಸುದೀರ್ಘ ವಾದ ಮಂಡಿಸಿ, 'ಪ್ರಾಸಿಕ್ಯೂಷನ್ ಸಂಗ್ರಹಿಸಿರುವ ಸಾಕ್ಷ್ಯಗಳಲ್ಲಿ ಭಾರತೀಯ ದಂಡ ಸಂಹಿತೆ ಕಲಂ 201ರ (ಅಪರಾಧ ಪುರಾವೆ ಕಣ್ಮರೆಯಾಗುವಂತೆ ಮಾಡುವುದು ಅಥವಾ ಅಪರಾಧ ತೆರೆಯಲು ತಪ್ಪು ಮಾಹಿತಿ ನೀಡುವುದು) ಅನುಸಾರ ಕೊಲೆಗೆ ಬಳಸಲಾಗಿದೆ ಎಂಬ ಆಯುಧವನ್ನೇ ವಶಪಡಿಸಿಕೊಂಡಿಲ್ಲ. ಅಪರಾಧ ನಡೆದಿದ್ದ ಸ್ಥಳದಲ್ಲಿ ರಕ್ತದ ಕಲೆ, ಚಪ್ಪಲಿ, ಮೆಣಸಿನ ಪುಡಿ, ಚಾಪೆ, ಒಂದು ಸ್ಯಾಮ್‌ಸಂಗ್ ಫೋನ್ ಅನ್ನು ಮಹಜರು ಮಾಡಲಾಗಿದೆಯೇ ಹೊರತಾಗಿ ಬೇರಾವುದೇ ಸಾಕ್ಷ್ಯಗಳಿಲ್ಲ. ಹೀಗಾಗಿ, ಅರ್ಜಿದಾರರ ವಿರುದ್ಧ ವಿಚಾರಣಾ ನ್ಯಾಯಾಲಯ ದೋಷಾರೋಪ ಹೊರಿಸಿರುವ ಕ್ರಮ ನ್ಯಾಯಬದ್ಧವಾಗಿಲ್ಲ' ಎಂದು ವಿವರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ದೀಕ್ಷಿತ್ ಅವರು, 'ಅಪರಾಧಿಕ ಪ್ರಕರಣಗಳಲ್ಲಿ ಸಾಂದರ್ಭಿಕ ಪುರಾವೆಗಳಿಂದಲೂ ಕೇಸನ್ನು ತೀರ್ಮಾನಿಸಬಹುದಲ್ಲವೇ?, ಜನಪ್ರತಿನಿಧಿಗಳ ವಿರುದ್ಧದ ಅಪರಾಧಿಕ ಪ್ರಕರಣಗಳು ಗಂಭೀರ ಎಂಬ ಕಾರಣಕ್ಕಾಗಿಯೇ, ಸುಪ್ರೀಂ ಕೋರ್ಟ್, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವನ್ನು ನಿಯೋಜಿಸಿದೆ. ಇಂತಹ ಪ್ರಕರಣಗಳಲ್ಲಿ ಮೆರಿಟ್ ಮೇಲಿನ ವಾದ ಆಲಿಸುವುದರಿಂದ ಉಳಿದ ಆರೋಪಿಗಳ ವಿರುದ್ಧದ ವಿಚಾರಣೆ ವಿಳಂಬವಾಗುತ್ತದೆ ಅಲ್ಲವೇ?' ಎಂದು ಕಾಳಜಿ ವ್ಯಕ್ತಪಡಿಸಿದರು.
'ಆರೋಪಿಯ ಹಕ್ಕುಗಳು ಬಹಳ ಮೌಲ್ಯಯುತವಾದವು ಎಂಬುದೇನೊ ಸರಿ. ಆದರೆ, ಕ್ರಿಮಿನಲ್ ಪ್ರಕರಣಗಳ ವಿಲೇವಾರಿ ಶೀಘ್ರ ಮುಗಿಯದೇ ಹೋದರೆ, ಸಮಾಜದಲ್ಲಿ ಯಾರೂ ಸುರಕ್ಷಿತವಾಗಿರಲು ಸಾಧ್ಯವಿಲ್ಲ. ಹೀಗೇ ಆದರೆ ಶ್ರೀಸಾಮಾನ್ಯರ ಗತಿಯೇನು? ಒಳ್ಳೆಯ ಸಮಾಜ ನಿರ್ಮಾಣವಾಗಬೇಕು ಎಂದಾಗ ಎಲ್ಲಿಂದಲಾದರೂ ಅದನ್ನು ಸರಿಪಡಿಸುವ ಅದರಲ್ಲೂ, ನ್ಯಾಯಾಂಗದ ಪಾತ್ರ ಹಿರಿದಲ್ಲವೇ? ಎಂದು ಪ್ರಶ್ನಿಸಿದರು.
'ಈ ಪ್ರಕರಣವನ್ನು ಆದಷ್ಟು ಬೇಗ ಇತ್ಯರ್ಥಗೊಳಿಸುತ್ತೇನೆ' ಎಂದು ಹೇಳಿದರು. ನಾಗೇಶ್ ಅವರು ತಮ್ಮ ವಾದ ಮುಂದುವರಿಸಲು ಮತ್ತಷ್ಟು ಸಮಯ ಕೋರಿದ ಕಾರಣ ವಿಚಾರಣೆಯನ್ನು ಇದೇ 19ಕ್ಕೆ ಮುಂದೂಡಿದರು.
ಏನಿದು ಪ್ರಕರಣ?
ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2016ರ ಜೂನ್ 15ರಂದು ಯೋಗೀಶ್‌ಗೌಡ ಗೌಡರ್ ಕೊಲೆ ನಡೆದಿತ್ತು. ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸಿದ್ದು, ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ. ಸಿಸಿಎಚ್-82ರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಒಟ್ಟು 21 ಆರೋಪಿಗಳ ವಿರುದ್ಧ ದೋಷಾರೋಪ ನಿಗದಿಪಡಿಸಿ 2024ರ ಜನವರಿ 29ರಿಂದ ಫೆಬ್ರುವರಿ 1ರವರೆಗೆ ನಿಯಮಿತವಾಗಿ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ಆದೇಶಿಸಿತ್ತು.
ಪ್ರಕರಣದ ಆರೋಪಿಯೂ ಆದ ವಿನಯ ಕುಲಕರ್ಣಿ, ದೋಷಾರೋಪ ನಿಗದಿ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅಂತೆಯೇ ಪ್ರಕರಣಕ್ಕೆ ಸಂಬಂಧಿಸಿದಂತೆ 2020ರ ನವೆಂಬರ್‌ನಲ್ಲಿ ವಿನಯ ಕುಲಕರ್ಣಿ ಅವರನ್ನು ಬಂಧಿಸಿ, ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಒಂಬತ್ತು ತಿಂಗಳ ಕಾಲ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿತ್ತು.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications