MLA Munirathna: ಶಾಸಕ ಮುನಿರತ್ನಗೆ ಹೆಚ್ಚಿದ ಸಂಕಷ್ಟ; ಎಸ್‌ಐಟಿ ತನಿಖೆಗೆ ವಹಿಸಿದ ಸರ್ಕಾರ
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಹಲವು ಗಂಭೀರ ಆರೋಪಗಳು ಕೇಳಿ ಬಂದಿರುವ ಹಿನ್ನಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ವಹಿಸಿದೆ. ಜಾತಿ ನಿಂದನೆ , ಅತ್ಯಾಚಾರ ಪ್ರಕಾರಣ, ಲಂಚದ ಬೇಡಿಕೆ ಹಿನ್ನೆಲೆ ಹಲವು ದೂರು ದಾಖಲಾಗಿದ್ದು, ಈಗಾಗಲೇ ಮುನಿರತ್ನ 14 ದಿನಗಳ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಹಿರಿಯ ಐಪಿಎಸ್ ಅಧಿಕಾರಿ ಬಿ.ಕೆ ಸಿಂಗ್ ನೇತೃತ್ವದಲ್ಲಿ ತನಿಖಾ ತಂಡವನ್ನು ರಚನೆ ಮಾಡಿ ರಾಜ್ಯ ಸರ್ಕಾರ ಆದೇಶ ಮಾಡಿದೆ. ಕೇಂದ್ರ ವಲಯ ಪೊಲಿಸ್ ಮಹಾ ನಿರೀಕ್ಷಕ ಲಭುರಾಮ್, ರೈಲ್ವೇ ಪೊಲೀಸ್ ಅಧೀಕ್ಷಕಿ ಸೌಮ್ಯಲತ ಮತ್ತು ಪೊಲೀಸ್ ಅಧೀಕ್ಷಕ ಸಿ.ಎ. ಸೈಮನ್ ವಿಶೇಷ ತನಿಖಾ ತಂಡದ ಸದಸ್ಯರಾಗಿದ್ದಾರೆ.

ಒಕ್ಕಲಿಗ ಕಾಂಗ್ರೆಸ್ ಜನಪ್ರತಿನಿಧಿಗಳ ಮನವಿ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎಸ್‌ಐಟಿ ತನಿಖೆಗೆ ಆದೇಶ ನೀಡಿದ್ದಾರೆ. ಹಲವು ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಶಾಸಕ ಮುನಿರತ್ನರಿಗೆ ಎಸ್‌ಐಟಿ ತನಿಖೆ ಮತ್ತಷ್ಟು ಸಂಕಷ್ಟ ತಂದೊಡ್ಡುವ ಭಯ ಶುರುವಾಗಿದೆ.
14 ದಿನ ನ್ಯಾಯಾಂಗ ಬಂಧನ
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶನಿವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಐಪಿಸಿ ಸೆಕ್ಷನ್ 354ಎ, 354ಸಿ, 376, 506, 504, 120(ಬಿ), 149, 384, 406, 308 ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಮುನಿರತ್ನ ಮಾತ್ರವಲ್ಲದೆ ವಿಜಯ್ ಕುಮಾರ್, ಸುಧಾಕರ, ಕಿರಣ್ ಕುಮಾರ್, ಲೋಹಿತ್ ಗೌಡ, ಮಂಜುನಾಥ್ ಮತ್ತು ಲೋಕಿ ಎನ್ನುವವರ ಮೇಲೆ ಕೂಡ ಪ್ರಕರಣ ದಾಖಲಿಸಲಾಗಿದೆ.
ಕಗ್ಗಲಿಪುರ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ರೆಸಾರ್ಟ್‌ನಲ್ಲಿ ಅತ್ಯಾಚಾರ ಮಾಡಿದ್ದಾರ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ. ಶಾಸಕರನ್ನು ಜನಪ್ರತಿನಿಧಿ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಕೆ.ಎಂ.ಶಿವಕುಮಾರ್ ಅವರ ಮುಂದೆ ಹಾಜರುಪಡಿಸಲಾಯಿತು.
ಅತ್ಯಾಚಾರ ಪ್ರಕರಣ ಮಾತ್ರವಲ್ಲದೆ ಬಿಬಿಎಂಪಿ ಗುತ್ತಿಗೆದಾರರಿಗೆ ಬೆದರಿಕೆ, ಲಂಚದ ಬೇಡಿಕೆ ಮತ್ತು ಜಾತಿ ನಿಂದನೆ ಆರೋಪದ ಮೇಲೆ ದೂರು ಕೂಡ ಶಾಸಕ ಮುನಿರತ್ನ ಮೇಲೆ ದಾಖಲಾಗಿದೆ. ಬಿಬಿಎಂಪಿ ಗುತ್ತಿಗೆದಾರರಿಗೆ ಬೆದರಿಕೆ ಹಾಕಿ, ಜಾತಿ ನಿಂದನೆ ಮಾಡಿದ ಆರೋಪದ ಮೇಲೆ ಬೆಂಗಳೂರು ಪೊಲೀಸರು ಸೆಪ್ಟೆಂಬರ್ 14 ರಂದು ರಾತ್ರಿ ಅವರನ್ನು ಬಂಧಿಸಿದ್ದರು.
ಆಂಧ್ರ ಪ್ರದೇಶಕ್ಕೆ ಪರಾರಿಯಾಗಲು ಯತ್ನಿಸಿದ್ದ ಮುನಿರತ್ನರನ್ನು ಕೋಲಾರ ಪೊಲೀಸರು ಸಹಾಯದಿಂದ ಬಂಧಿಸಿ ಬೆಂಗಳೂರಿಗೆ ಕರೆತರಲಾಗಿತ್ತು. ಚೆಲುವರಾಜು ಎನ್ನುವ ಗುತ್ತಿಗೆದಾರರಿಗೆ ಬೆದರಿಕೆ ಮತ್ತು ಕಿರುಕುಳ ನೀಡಿದ ಆರೋಪದ ಮೇಲೆ ದೂರು ದಾಖಲಾಗಿದೆ. ಎಫ್‌ಐಆರ್‌ನಲ್ಲಿ ಮುನಿರತ್ನ, ವಿಜಿ ಕುಮಾರ್, ಅಭಿಷೇಕ್, ವಸಂತ್ ಕುಮಾರ್ ಹೆಸರನ್ನ ದಾಖಲಿಸಲಾಗಿದೆ.












Click it and Unblock the Notifications