ಮಗು ಅಪಹರಣ ಪ್ರಕರಣ : ಆಸ್ಪತ್ರೆಗೆ ಸಚಿವರ ಭೇಟಿ
ಬೆಂಗಳೂರು, ಅಕ್ಟೋಬರ್ 07 : ಹಸುಗೂಸನ್ನು ಅಪರಿಚಿತ ಮಹಿಳೆ ಅಪಹರಿಸಿದ ಪ್ರಕರಣ ಬೌರಿಂಗ್ ಆಸ್ಪತ್ರೆಯಲ್ಲಿ ಅಕ್ಟೋಬರ್ 4ರಂದು ನಡೆದಿತ್ತು. ಮಂಗಳವಾರ ಸಚಿವರಿಬ್ಬರು ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದರು.
ಮಂಗಳವಾರ ಶಿವಾಜಿನಗರ ಶಾಸಕ ಮತ್ತು ಸಚಿವ ಆರ್. ರೋಷನ್ ಬೇಗ್ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಅವರು ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. [ಬುರ್ಖಾ ಧರಿಸಿ ಬಂದವಳು ಗಂಡು ಮಗು ಹೊತ್ತೊಯ್ದಳು]

ಮಗುವಿನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯ ಅಧೀಕ್ಷಕ ಡಾ.ಎಸ್.ಐ.ಎಸ್.ಖಾದ್ರಿ ಅವರಿಂದ ವಿವರಣೆ ಪಡೆದರು. ಮಗು ಕಳೆದುಕೊಂಡ ಮಹಿಳೆ ಹಾಗೂ ಆಕೆಯ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. [ಕಿಮ್ಸ್ ಸಿಬ್ಬಂದಿ ಧರಣಿಗೆ ಮಣಿಯದ ಅಪ್ಪಾಜಿ ಗೌಡ]
ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಸಚಿವರು ಅಪಹರಣಕ್ಕೆ ಒಳಗಾದ ಮಗುವನ್ನು ಶೀಘ್ರವೇ ಪತ್ತೆ ಹಚ್ಚಿ ತಾಯಿಗೆ ಒಪ್ಪಿಸಲು ಎಲ್ಲಾ ಪ್ರಯತ್ನಗಳನ್ನೂ ಮಾಡುವಂತೆ ಸೂಚನೆ ನೀಡಿದರು. ಆಸ್ಪತ್ರೆಯಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಿದರು. [ಹೂವಿನ ತೋಟದಲ್ಲಿ ಕಳೆದುಹೋದ ಹೂವಿನಂಥ ಹುಡುಗಿ]
ಬೌರಿಂಗ್ ಆಸ್ಪತ್ರೆಯಲ್ಲಿ ಏನಾಗಿತ್ತು? : ಕಾಡುಗೋಡಿಯ ನಿವಾಸಿ ಹಬೀಬ್ ಅವರು ಪತ್ನಿ ಫರೀದಾ ಅವರನ್ನು ಹೆರಿಗೆಗಾಗಿ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದರು. ಅ.1ರಂದು ಗಂಡು ಮಗು ಜನಿಸಿತ್ತು, ಮಗುವಿನ ಆರೋಗ್ಯ ಸರಿ ಇಲ್ಲದ ಕಾರಣ ಎನ್‍ಐಸಿಯು ನಲ್ಲಿ ಇರಿಸಲಾಗಿತ್ತು.
ಅಕ್ಟೋಬರ್ 4ರ ಭಾನುವಾರ ಎನ್ಐಸಿಯುನ ನರ್ಸ್ ಹಾಲು ಕುಡಿಸಲು ವಾರ್ಡ್‍ನಲ್ಲಿ ಮಲಗಿದ್ದ ತಾಯಿ ಫರೀದಾಗೆ ಮಗುವನ್ನು ನೀಡಿದ್ದರು. ಆಗ ಅಲ್ಲಿಗೆ ಬಂದ ಬುರ್ಖಾಧಾರಿ ಮಹಿಳೆ, ಫರಿದಾಳನ್ನು ಮಾತನಾಡಿಸಿದ್ದಳು. ನನಗೆ ಗಂಡು ಮಗುವಿಲ್ಲ ಎತ್ತಿಕೊಳ್ಳಲೇ ಎಂದು ಕೇಳಿದ್ದಳು. ಇದಕ್ಕೆ ಫರಿದಾ ಒಪ್ಪಿಗೆ ನೀಡಿ, ಮಗುವನ್ನು ನೀಡಿದ್ದರು.

ಮಗುವನ್ನು ಎತ್ತಿಕೊಂಡು ಮುದ್ದಿಸುವ ನಾಟಕವಾಡಿದ್ದ ಮಹಿಳೆ, ನಂತರ ಮಗುವನ್ನು ಎತ್ತಿಕೊಂಡು ಪರಾರಿಯಾಗಿದ್ದಳು. ಬುರ್ಖಾಧಾರಿ ಮಹಿಳೆ ಮಗುವನ್ನು ಎತ್ತಿಕೊಂಡು ಪರಾರಿಯಾಗುವ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ. ಮಗುವಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.












Click it and Unblock the Notifications