'ಕಾರ್ತಿಕ್ ಗೌಡ ಪ್ರಕರಣಕ್ಕೆ ಸಿದ್ದು ಸರ್ಕಾರ ತಲೆ ಹಾಕಲ್ಲ'
ಬೆಂಗಳೂರು, ಸೆ.5: ನಟಿ ಮೈತ್ರಿಯಾ ಹಾಗೂ ಸದಾನಂದಗೌಡರ ಪುತ್ರ ಕಾರ್ತಿಕ್ ಗೌಡ ಅವರ ನಡುವಿನ ಸಂಬಂಧದ ವಿಷಯ ಕಾನೂನಾತ್ಮಕ ಹೋರಾಟಕ್ಕೆ ತಿರುಗಿದ್ದು, ನ್ಯಾಯಾಲಯವೇ ಅಂತಿಮ ತೀರ್ಮಾನ ಮಾಡಬೇಕಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಉಮಾಶ್ರೀ ಸ್ಪಷ್ಟಪಡಿಸಿದ್ದಾರೆ.
ಕೇಂದ್ರ ರೈಲ್ವೆ ಸಚಿವ ಸದಾನಂದ ಗೌಡ ಅವರ ಪುತ್ರ ಕಾರ್ತಿಕ್ ಗೌಡ ಅವರ ಮೇಲಿನ ಅತ್ಯಾಚಾರ ಹಾಗೂ ವಂಚನೆ ಆರೋಪಗಳನ್ನು ಮಾಡಿರುವ ನಟಿ ಮೈತ್ರಿಯಾ ಅವರು ಕಾಂಗ್ರೆಸ್ಸಿನ ಸಕ್ರಿಯ ಕಾರ್ಯಕರ್ತೆ ಎನ್ನಲಾಗಿದೆ. ಇದಕ್ಕೆ ಪೂರಕವಾಗಿ ಬೆಂಗಳೂರಿನ ಯುವ ಕಾಂಗ್ರೆಸ್ ಘಟಕ ಕೂಡಾ ಮೈತ್ರಿಯಾಗೆ ಬೆಂಬಲ ಸೂಚಿಸಿ ಕಾರ್ತಿಕ್ ವಿರುದ್ಧ ಕ್ರಮ ಜರುಗಿಸುವಂತೆ ಪೊಲೀಸರಿಗೆ ದೂರು ನೀಡಿತ್ತು.
ಮೈತ್ರಿಯಾ ಹಾಗೂ ಕಾರ್ತಿಕ್ ಗೌಡ ಪ್ರಕರಣದ ಬಗ್ಗೆ ಸಿದ್ದರಾಮಯ್ಯ ಸರ್ಕಾರದ ನಿಲುವೇನು ಎಂಬ ಕುತೂಹಲದ ಪ್ರಶ್ನೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಉಮಾಶ್ರೀ ಉತ್ತರಿಸಿದ್ದಾರೆ.[ಕಾರ್ತಿಕ್ ಗೌಡಗೆ ಜೈಲಾ? ಬೇಲಾ? ಸೆ.6ಕ್ಕೆ ತೀರ್ಪು]

'ಮೈತ್ರಿಯಾಗೌಡ ನೀಡಿರುವ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ. ರಾಮಚಂದ್ರಪುರ ಮಠದ ಪ್ರಕರಣವಾಗಲಿ, ಮೈತ್ರಿಯ ಪ್ರಕರಣದಲ್ಲಾಗಲಿ ಕಾಂಗ್ರೆಸ್ ಸರ್ಕಾರ ಯಾವುದೇ ರೀತಿಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಕಾನೂನಾತ್ಮಕವಾಗಿ ಯಾರು ಅಪರಾಧಿ, ಯಾರನ್ನು ಬಂಧಿಸಬೇಕು ಎಂಬುದನ್ನು ಪೊಲೀಸರು ನಿರ್ಧರಿಸುತ್ತಾರೆ. ಈ ಬಗ್ಗೆ ಗೃಹ ಇಲಾಖೆ ಮಾರ್ಗದರ್ಶನ ನೀಡುತ್ತಿದ್ದು, ಇದರಲ್ಲಿ ತಾವಾಗಲಿ ತಮ್ಮ ಇಲಾಖೆಯಾಗಲಿ ಮಧ್ಯೆ ಪ್ರವೇಶಿಸುವುದಿಲ್ಲ ಎಂದಿದ್ದಾರೆ.
ಈ ನಡುವೆ ರೂಪದರ್ಶಿ ಮೈತ್ರಿಯಾ ಗೌಡ ಅವರನ್ನು ಪ್ರೀತಿಸಿ ವಂಚಿಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ರೈಲ್ವೆ ಸಚಿವ ಸದಾನಂದಗೌಡರ ಪುತ್ರ ಕಾರ್ತಿಕ್ ಗೌಡ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ತೀರ್ಪನ್ನು ಸೆಷನ್ ನ್ಯಾಯಾಲಯ ನಾಳೆಗೆ ಕಾಯ್ದಿರಿಸಿದೆ. ಪ್ರಕರಣದ ವಿಚಾರಣೆ ಸಂಬಂಧ ವಾದ-ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶ ಮುದಿಗೌಡರ್ ತೀರ್ಪನ್ನು ನಾಳೆಗೆ ಮುಂದೂಡಿದ್ದಾರೆ. ಕಾರ್ತಿಕ್ ಹುಡುಕಿಕೊಂಡು ಮಂಗಳೂರಿನ ಮನೆಗೆ ತೆರಳಿದ ಪೊಲೀಸರು ಕಾರ್ತಿಕ್ ಆಪ್ತರು, ವಾಹನ ಚಾಲಕರನ್ನು ವಿಚಾರಣೆ ನಡೆಸಿದ್ದಾರೆ.
ಜೆಡಿಯು ರಾಜ್ಯ ಮಹಿಳಾ ವಿಭಾಗದ ಪ್ರತಿಕ್ರಿಯೆ: ಕೇಂದ್ರ ರೈಲ್ವೆ ಸಚಿವ ಡಿ.ವಿ.ಸದಾನಂದಗೌಡರ ಪುತ್ರ ಕಾರ್ತಿಕ್ ಗೌಡ ಮತ್ತು ಚಿತ್ರನಟಿ ಮೈತ್ರಿಯಾ ವಿವಾಹವಾಗಿದ್ದಾರೆಯೇ ಇಲ್ಲವೇ ಎಂಬುದನ್ನು ಸಾಬೀತುಪಡಿಸಲು ಕಾನೂನಿದೆ. ಆದರೆ, ವಿನಾಕಾರಣ ಈ ವಿಷಯವನ್ನು ಮಾಧ್ಯಮಗಳಲ್ಲಿ ಪ್ರತಿದಿನ ವೈಭವೀಕರಿಸುತ್ತಿರುವುದು ಸರಿಯಲ್ಲ ಎಂದು ಜೆಡಿಯು ರಾಜ್ಯ ಮಹಿಳಾ ವಿಭಾಗದ ಅಧ್ಯಕ್ಷೆ ಸಾವಿತ್ರಿ ಎಂ.ಗುಂಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಮೈತ್ರಿಯಾ ಈಗಾಗಲೇ ಕಾರ್ತಿಕ್ ಗೌಡರ ವಿರುದ್ಧ ಕಾನೂನು ಮೊರೆ ಹೋಗಿದ್ದಾರೆ. ಅವರಿಬ್ಬರೂ ವಿವಾಹವಾಗಿದ್ದಾರೆಯೇ, ಇಲ್ಲವೇ ಎಂಬುದನ್ನು ಸಾಕ್ಷಾಧಾರಗಳು, ಪುರಾವೆಯೊಂದಿಗೆ ಕಾನೂನು ಸಾಬೀತು ಪಡಿಸಲಿದೆ. ಆದರೆ, ವಿವಿಧ ಮಾಧ್ಯಮಗಳು ಈ ವಿಷಯವನ್ನು ತೀರಾ ವೈಭವೀಕರಿಸಿ ಮೈತ್ರಿಯಾ ಹಾಗೂ ಅವರ ಕುಟುಂಬದವರನ್ನು ಸಂದರ್ಶಿಸುವುದು, ಅದನ್ನೇ ದಿನ ಪ್ರಸಾರ ಮಾಡುವುದು ತರವಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.












Click it and Unblock the Notifications