ಬೆಂಗಳೂರು : ಕಸದ ಸಮಸ್ಯೆಗೆ ತಾತ್ಕಾಲಿಕ ಪರಿಹಾರ
ಬೆಂಗಳೂರು, ಜೂ. 18 : ಟೆರ್ರಾ ಫಾರ್ಮ್‌ಗೆ ಕಸ ವಿಲೇವಾರಿ ಮಾಡದಂತೆ ಒತ್ತಾಯಿಸಿ ಗುಂಡ್ಲಹಳ್ಳಿ ನಿವಾಸಿಗಳು ನಡೆಸುತ್ತಿರುವ ಪ್ರತಿಭಟನೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಬೆಂಗಳೂರು ನಗರ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಅವರು ಗ್ರಾಮಸ್ಥರೊಂದಿಗೆ ನಡೆಸಿದ ಸಂಧಾನ ಯಶಸ್ವಿಯಾಗಿದೆ. ಗ್ರಾಮಸ್ಥರ ಬೇಡಿಕೆ ಈಡೇರಿಸಲು ಸಚಿವರು ಆರು ತಿಂಗಳ ಕಾಲಾವಕಾಶ ಕೇಳಿದ್ದಾರೆ.
ಬುಧವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಡಳಿತಾಧಿಕಾರಿ ಟಿ.ಎಂ.ವಿಜಯಭಾಸ್ಕರ್, ಪಶ್ಚಿಮ ವಿಭಾಗದ ಜಂಟಿ ಆಯುಕ್ತ ಲಕ್ಷ್ಮೀ ನರಸಯ್ಯ ಮುಂತಾದ ಅಧಿಕಾರಿಗಳು ನಡೆಸಿದ ಸಂಧಾನ ಸಭೆ ಮುರಿದು ಬಿದ್ದಿತ್ತು. ಗ್ರಾಮಸ್ಥರು ಸಂಜೆಯವರೆಗೂ ಪ್ರತಿಭಟನೆ ಮುಂದುವರೆಸಿದ್ದರು. [ಕಸ ಗಲಾಟೆ, ಎಲ್ಲಿ ಹೋಯ್ತು ಸ್ವಚ್ಛಭಾರತ?]

ಸಚಿವರ ಭೇಟಿ : ಬೆಂಗಳೂರು ನಗರ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಬುಧವಾರ ರಾತ್ರಿ ಪ್ರತಿಭಟನಾನಿರತರ ಜೊತೆ ಮಾತುಕತೆ ನಡೆಸಿದರು. ಸಚಿವ ಕೃಷ್ಣಬೈರೇಗೌಡ, ಶಾಸಕ ವೆಂಕಟರಮಣಯ್ಯ, ದಲಿತ ಮುಖಂಡ ಮಾರಸಂದ್ರ ಮುನಿಯಪ್ಪ, ಸ್ಥಳೀಯ ಮುಖಂಡರು, ಪಾಲಿಕೆ ಆಯುಕ್ತರು, ಆಡಳಿತಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಂಧಾನ ಸಭೆ ಯಶಸ್ವಿಯಾಗಿದ್ದು, ಕಸ ವಿಲೇವಾರಿ ಗುರುವಾರದಿಂದ ಆರಂಭವಾಗುವ ಸಾಧ್ಯತೆ ಇದೆ. [ಇದು ಕಸದ ಮಾರ್ಕೆಟ್, ಒಣ ಕಸ ಮಾರಿ ಹಣ ಪಡೆಯಿರಿ]
ಬೇಡಿಕೆಗಳು : ಮಂಡೂರು ಕಸ ಸಂಸ್ಕರಣಾ ಘಟಕ ಸ್ಥಗಿತಗೊಂಡ ಬಳಿಕ ಟೆರ್ರಾ ಫಾರ್ಮ್‌ಗೆ 100 ಕ್ಕೂ ಹೆಚ್ಚು ವಾಹನಗಳಲ್ಲಿ 1000 ಟನ್‌ಗೂ ಹೆಚ್ಚು ಕಸ ಸಾಗಿಸಲಾಗುತ್ತಿದೆ. ಆದರೆ, ಸ್ಥಳೀಯರು ಹಳೆಯ ವಿಧಾನದಂತೆ ಕೇವಲ 40 ವಾಹನಗಳಲ್ಲಿ ಕಸ ಸಾಗಣೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.

ಟೆರ್ರಾ ಫಾರ್ಮ್‌ನಲ್ಲಿ ವೈಜ್ಞಾನಿಕವಾಗಿ ಕಸವನ್ನು ಸಂಸ್ಕರಣೆ ಮಾಡುವಂತೆ ಸೂಚಿಸಲಾಗಿದೆ. ಇನ್ನು ಆರು ತಿಂಗಳಲ್ಲಿ ಕಸ ಸಾಗಣೆ ಪ್ರಮಾಣ 500 ಟನ್‌ಗೆ ಇಳಿಕೆ ಮಾಡಲಾಗುವುದು ಹಾಗೂ ಪಾಲಿಕೆ ಹೆಚ್ಚುವರಿ ಘಟಕಗಳನ್ನು ನಿರ್ಮಿಸಿದ ಬಳಿಕ ಈ ಘಟಕ ಸ್ಥಗಿತಗೊಳಿಸುವುದಾಗಿ ಸಚಿವರು ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ.
ಸಚಿವರು ನೀಡಿದ ಭರವಸೆಗಳು
* 6 ತಿಂಗಳಲ್ಲಿ ಕಸದ ಪ್ರಮಾಣ 500 ಟನ್‌ಗೆ ಇಳಿಕೆ
* 27 ಗ್ರಾಮಗಳಲ್ಲಿ ಶುದ್ಧೀಕರಿಸಿದ ನೀರು ವಿತರಣಾ ಘಟಕ ಸ್ಥಾಪನೆ
* ಕಸದಿಂದ ಹಬ್ಬುವ ದುರ್ನಾತ ತಡೆಗೆ ತ್ಯಾಜ್ಯ ರಾಶಿಯ ಮೇಲೆ ಮಣ್ಣು ಸುರಿಯುವುದು
* ಸೊಳ್ಳೆ ನಿಯಂತ್ರಣಕ್ಕೆ ರಾಸಾಯನಿಕ ಸಿಂಪಡಣೆಗೆ ಗ್ರಾಮ ಪಂಚಾಯಿತಿಗೆ ಅನುದಾನ ನೀಡುವುದು












Click it and Unblock the Notifications