ದೇವಸ್ಥಾನದಲ್ಲಿ ಕೇಕ್ ಕಟಿಂಗ್: ತನಿಖೆ ನಡೆಸಿ ಕ್ರಮಕ್ಕೆ ರಾಮಲಿಂಗಾ ರೆಡ್ಡಿ ಆದೇಶ
ಬೆಂಗಳೂರು, ಅಕ್ಟೋಬರ್ 12: ಧಾರ್ಮಿಕ ಕ್ಷೇತ್ರವಾದ ದೇವಸ್ಥಾನದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರ ಉಪಸ್ಥಿತಿಯಲ್ಲಿ
ಹುಟ್ಟುಹಬ್ಬ ಆಚರಿಸಿಕೊಂಡ ಅರ್ಚಕರೊಬ್ಬರು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಈ ಫೋಟೋಗಳ ಆಧಾರವಾಗಿಟ್ಟುಕೊಂಡು ವಿಚಾರಣೆ ನಡೆಸಿ ಕ್ರಮ ಜರುಗಿಸುವಂತೆ ರಾಜ್ಯ ಮುಜರಾಯಿ ಖಾತೆ ಮತ್ತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಆದೇಶಿಸಿದ್ದಾರೆ.
ಹೌದು, ಕರ್ನಾಟಕ ಸರ್ಕಾರ ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ದೇವಾಲಯವಾದ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯ, ಹಲಸೂರಿನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಜಾನಕಿ ರಾಮ್ ರೆಡ್ಡಿ, ಪ್ರಧಾನ ಅರ್ಚಕರಾದ ಸುಂದರ್ ದಿಕ್ಷೀತ್ ಮತ್ತು ಸಹಾಯಕ ಆರ್ಚಕರಾದ ಎಸ್.ಸುರೇಶ್ ದೀಕ್ಷಿತ್ ರವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಹಾಯಕ ಅರ್ಚಕರ ಜನ್ಮ ದಿನವಾಗಿದ್ದರಿಂದ ದಿನಾಂಕ:23/09/2025ರಂದು ದೇವಾಲಯದ ಆವರಣದೊಳಗೆ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡಿರುತ್ತಾರೆ. ಇದರ ಫೋಟೋಗಳು ಇತರ ಎಲ್ಲೆಡೆ ಹರಿದಾಡುತ್ತಿದ್ದಂತೆ ಆಕ್ರೋಶ ವ್ಯಕ್ತವಾಗಿತ್ತು.

ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವರು ತನಿಖೆಗೆ ಹಾಗೂ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಈ ಆದೇಶದ ಜೊತೆಗೆ ದೇವಾಲಯದಲ್ಲಿ ಆ ಸಂದರ್ಭದಲ್ಲಿ ಯಾವುದೇ ಅನ್ಯ ಧರ್ಮೀಯರು ಭಾಗವಹಿಸಿಲ್ಲ. ವಿನಾಕಾರಣ ಸುಳ್ಳು, ಅಪಪ್ರಚಾರಗಳನ್ನು ಹರಡುವುದು ಬೇಡ ಎಂದು ಸಚಿವರು ತಿಳಿಹೇಳಿದ್ದಾರೆ.
ನಿಯಮಗಳ ಪ್ರಕಾರ, ದೇವಾಲಯದ ಆವರಣದೊಳಗೆ ಯಾವುದೇ ವ್ಯಕ್ತಿಯ ಹುಟ್ಟುಹಬ್ಬದ ಸಂಭ್ರಮಾಚರಣೆಯನ್ನು ಮಾಡಲು ಅವಕಾಶ ವಿರುವುದಿಲ್ಲ. ಆದರೆ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಛಾಯಾಚಿತ್ರಗಳು ವಾಟ್ಸಪ್‌ಗಳಲ್ಲಿ ಹರಿದಾಡಿವೆ. ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಹಾಗೂ ಅರ್ಚಕರಾದವರು ದೇವಸ್ಥಾನದಲ್ಲಿ ಈ ರೀತಿಯಲ್ಲಿ ವರ್ತಿಸಿರುವುದರಿಂದ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಆದ್ದರಿಂದ, ಈ ಬಗ್ಗೆ ಸೂಕ್ತ ವಿಚಾರಣೆ ಮಾಡಿ ಸಂಬಂಧಪಟ್ಟವರ ಮೇಲೆ ಸೂಕ್ತ
ಕ್ರಮ ಜರುಗಿಸುವಂತೆ ಇಲಾಖೆ ಅಧಿಕಾರಿಗಳಿಗೆ ಸಚಿವರು ನಿರ್ದೇಶಿಸಿದ್ದಾರೆ.
ಕೆಲವೊಂದು ಜಾಲತಾಣಗಳಲ್ಲಿ ಈ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಹಿಂದೂ ಧರ್ಮದವರನ್ನು ಹೊರತುಪಡಿಸಿ, ಅನ್ಯ ಧರ್ಮದವರು ಭಾಗವಹಿಸಿದ್ದರು ಎಂಬ ವಿಷಯವು ಸತ್ಯಕ್ಕೆ ದೂರವಾಗಿದೆ. ಈ ಬಗ್ಗೆ ಪ್ರಾಥಮಿಕ ವಿಚಾರಣೆ ನಡೆಸಲಾಗಿದೆ., ಇದು ಸಂಪೂರ್ಣ ಸುಳ್ಳು ಹಾಗೂ ದುರುದ್ದೇಶದಿಂದ ಕೂಡಿದ್ದಾಗಿದೆ ಎಂದು ಸಚಿವರು ಆದೇಶದಲ್ಲಿ ತಿಳಿಸಿದ್ದಾರೆ. ದೇವಾಲಯದಲ್ಲಿ ನಿಯಮ ಉಲ್ಲಂಘಿಸಿ ಜನ್ಮದಿನ ಆಚರಿಸಿಕೊಂಡ ತಪ್ಪಿತಸ್ಥರ ವಿರುದ್ಧ ಶೀಘ್ರವೇ ಕ್ರಮವಾಗಲಿದೆ ಎಂದು ಅವರು ತಿಳಿಸಿದ್ದಾರೆ.












Click it and Unblock the Notifications