ಹಸ್ತಕ್ಷೇಪ ವಿಷಯವಾಗಿ ಸಿಎಂ ವಿರುದ್ಧ ರಾಜ್ಯಪಾಲರಿಗೆ ದೂರು: ಸಚಿವ ಈಶ್ವರಪ್ಪ ಹೇಳಿದ್ದೇನು?
ಬೆಂಗಳೂರು, ಏಪ್ರಿಲ್ 1: ನನ್ನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವಿಷಯಗಳನ್ನು ರಾಜ್ಯಪಾಲರ ಬಳಿ ಮಾತನಾಡಿಕೊಂಡು ಬಂದಿದ್ದೇನೆ ಅಷ್ಟೇ, ಅದರಲ್ಲೇನೂ ವಿಶೇಷತೆ ಇಲ್ಲ ಎಂದು ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸಿಎಂ ಯಡಿಯೂರಪ್ಪ ಅವರು ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ರಾಜ್ಯಪಾಲರಿಗೆ ಲಿಖಿತ ದೂರು ನೀಡಿರುವ ವಿಷಯವಾಗಿ ಪ್ರತಿಕ್ರಿಯಿಸಿದ ಅವರು, ಇಲಾಖೆ ವಿಷಯಗಳನ್ನು ಚರ್ಚೆ ಮಾಡುವುದಕ್ಕೆ ಅವಕಾಶವಿತ್ತು, ಭೇಟಿ ಮಾಡಿಕೊಂಡು ಬಂದಿದ್ದೇನೆ. ಅಸಮಾಧಾನ ಎಂಬ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ನನ್ನ ಇಲಾಖೆಗೆ ಸಂಬಂಧಿಸಿದ ವಿಷಯಗಳನ್ನು ಮಾತನಾಡಲು ರಾಜ್ಯಪಾಲರಷ್ಟೇ ಅಲ್ಲ, ದೆಹಲಿಗೂ ಹೋಗುತ್ತೇನೆ. ದೆಹಲಿಯಲ್ಲಿ ನಮ್ಮ ಪಕ್ಷದ ನಾಯಕರ ಬಳಿ, ಕೇಂದ್ರ ಮಂತ್ರಿಗಳ ಜೊತೆ, ಇಲಾಖೆ ಅಧಿಕಾರಿಗಳ ಜೊತೆ, ಇಲಾಖಾ ಅಭಿವೃದ್ಧಿ ಕುರಿತಂತೆ ಅನೇಕ ಚರ್ಚೆಗಳನ್ನು ಮಾಡಬೇಕಾಗುತ್ತದೆ ಎಂದರು.

ಇದರಲ್ಲಿ ವಿಶೇಷವೇನೂ ಇಲ್ಲ, ಇಲಾಖೆ ಅನುದಾನ ವರ್ಗಾವಣೆ ಆಂತರಿಕ ವಿಷಯ. ಅದನ್ನು ಮಾಧ್ಯಮಗಳ ಎದುರು ಮಾತನಾಡಲು ಬರುವುದಿಲ್ಲ ಎಂದು ಹೇಳಿದರು.

ಸಚಿವ ಕೆ.ಎಸ್ ಈಶ್ವರಪ್ಪ ಅವರು ರಾಜ್ಯಪಾಲರಿಗೆ ಬರೆದಿರುವ ಪತ್ರದಲ್ಲಿ, ಕಳೆದ ಒಂದು ವರ್ಷದಿಂದ ನನ್ನ ಇಲಾಖೆಯಲ್ಲಿ ಮುಖ್ಯಮಂತ್ರಿಗಳು ಅನಗತ್ಯವಾಗಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ನನ್ನ ಗಮನಕ್ಕೆ ಬರದೇ ಅನೇಕ ತೀರ್ಮಾನಗಳನ್ನು ಕೈಗೊಳ್ಳುತ್ತಿದ್ದಾರೆ. ಹಿರಿಯ ಸಚಿವನಾದ ನನಗೆ ಮುಜುಗರ ತರುತ್ತಿದೆ ಎಂದು ದೂರಿನ ಪತ್ರದಲ್ಲಿ ವಿವರಿಸಿದ್ದಾರೆ.
ಕ್ಷಣ ಕ್ಷಣದ ಸುದ್ದಿಗಳಿಗಾಗಿ ಒನ್ ಇಂಡಿಯಾ ಕನ್ನಡ ಟೆಲಿಗ್ರಾಂ ಚಾನಲ್ ಸೇರಿ












Click it and Unblock the Notifications