ದ್ರೋಣ ಮೊತ್ತ ಮೊದಲ ಪ್ರಣಾಳ ಶಿಶುವಂತೆ!
ಬೆಂಗಳೂರು, ಅ. 4: ರಾಜ್ಯ ಸರ್ಕಾರ ಹೊರಡಿಸಿರುವ 9ನೇ ತರಗತಿ ವಿಜ್ಞಾನ ಪುಸ್ತಕದಲ್ಲಿ ಮಹಾಭಾರತದ ದ್ರೋಣ ಮೊತ್ತ ಮೊದಲ ಪ್ರಣಾಳ ಶಿಶು ಎಂದು ಪ್ರಕಟಿಸಲಾಗಿದೆ. ಇದೇ ಮುಂತಾದ ವಿಷಯಗಳು ಈಗ ಮತ್ತೊಮ್ಮೆ ಪಠ್ಯಪುಸ್ತಕ ಕೇಸರೀಕರಣ ವಿವಾದಕ್ಕೆ ನಾಂದಿಹಾಡಿದೆ.
ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಅವಧಿಯಲ್ಲಿ ಪಠ್ಯಪುಸ್ತಕಗಳನ್ನು ಕೇಸರೀಕರಣಗೊಳಿಸಲಾ ಗಿದೆ ಎಂಬ ಆರೋಪದ ಕುರಿತು ಪರಿಶೀಲನೆಗಾಗಿ ರಾಜ್ಯ ಸರ್ಕಾರ ಸದ್ಯವೇ ತಜ್ಞರ ಸಮಿತಿಯೊಂದನ್ನು ನೇಮಿಸಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.
9ನೆ ತರಗತಿಯ ವಿಜ್ಞಾನ ಪುಸ್ತಕದಲ್ಲಿ ಮಹಾಭಾರತದ ದ್ರೋಣ ಮೊತ್ತ ಮೊದಲ ಪ್ರಣಾಳ ಶಿಶು ಎಂಬಂತಹ ಅಸಂಬದ್ಧ ವಿಚಾರಗಳನ್ನು ಹೇಳಲಾಗಿದೆ. ಈ ಕುರಿತಾದ ಮಾಧ್ಯಮ ವರದಿಯನ್ನು ಓದಿದ್ದೇನೆ. ಸ್ವತಂತ್ರ ಸಂಸ್ಥೆಯೊಂದು ಸಿದ್ಧಪಡಿಸಿದ ವರದಿಯ ಪ್ರತಿಯೊಂದನ್ನು ಪಡೆದ ಬಳಿಕ ತಾನು ಈ ವಿಷಯವನ್ನು ಕೈಗೆತ್ತಿಕೊಳ್ಳಲಿದ್ದೇನೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದ್ದಾರೆ.

ಈ ವಿಚಾರದ ಬಗ್ಗೆ ಶೀಘ್ರವೇ ಮುಖ್ಯಮಂತ್ರಿಯ ಜೊತೆ ಮಾತನಾಡಿ, ಶಾಲಾ ಪಠ್ಯಪುಸ್ತಕಗಳನ್ನು ಇಂಥ ಅಸಂಬದ್ಧದಿಂದ ಮುಕ್ತಗೊ ಳಿಸಲು ಏನು ಮಾಡಬಹುದು ಎಂದು ಚಿಂತಿಸಲಿದ್ದೇನೆ ಎಂದು ಕಿಮ್ಮನೆ ರತ್ನಾಕರ್ ಹೇಳಿದರು.
ಮುಖ್ಯಮಂತ್ರಿ ಹೇಳಿಕೆ: ಬಿಜೆಪಿ ಆಡಳಿತದ ವೇಳೆ ಪಠ್ಯಪುಸ್ತಕಗಳನ್ನು ಕೇಸರೀಕರಣಗೊಳಿಸಿರುವುದು ನಮ್ಮ ಗಮನಕ್ಕೆ ಬಂದಿದೆ. ಎಲ್ಲೆಲ್ಲಿ ತಿರುಚುವಿಕೆಗಳು ನಡೆದಿವೆಯೆಂಬ ಕುರಿತು ಅಧ್ಯಯನ ನಡೆಸಲಾಗುತ್ತದೆ. ಅಗತ್ಯವಾದಲ್ಲಿ ಅವುಗಳನ್ನು ಹೇಗೆ ಸರಿಪಡಿಸಬಹುದೆಂದು ಪರಿಶೀಲಿಸಲು ಸಮಿತಿಯೊಂದನ್ನು ರಚಿಸಲಾಗುವುದು ಎಂದಿದ್ದಾರೆ.
ಬಿಜೆಪಿ ಸರ್ಕಾರದ ಕಾಲದಲ್ಲಿ ಪುಣ್ಯಕೋಟಿ ಕಥೆ ಗೋವಿನ ಹಾಡಿನ ಕುರಿತು ವಿವಾದ ಉಂಟಾಗಿತ್ತು. ಅದರ ಕೊನೆಯ ಸಾಲುಗಳನ್ನು ಕೋಮು ಬಣ್ಣ ನೀಡುವಂತೆ ಬದಲಾಯಿಸಲಾಗಿತ್ತು. ಇಂಥ ಅನೇಕ ಉದಾಹರಣೆಗಳಿವೆ.
ಶಿವಮೊಗ್ಗದ ಕುವೆಂಪು ವಿವಿಯ ಶಿಕ್ಷಣ ತಜ್ಞ ಫ್ರಾನ್ಸಿಸ್ ಡಿಸೋಜರ ಏಕಸದಸ್ಯ ಸಮಿತಿಯು ಕರ್ನಾಟಕದಲ್ಲಿ ಪಠ್ಯಪುಸ್ತಕ ಸೊಸೈಟಿ ಹೆಸರಲ್ಲಿ ಪ್ರಕಟಿಸ ಲಾಗಿರುವ 5ರಿಂದ 9ನೆ ತರಗತಿಗಳ ವರೆಗಿನ ಪಠ್ಯಪುಸ್ತಕಗಳಲ್ಲಿ ಕೇಸರೀಕರಣದ ಅನೇಕ ಉದಾಹರಣೆಗಳನ್ನು ಗುರುತಿಸಿದೆ ಎಂದಿದ್ದಾರೆ.
9ನೇ ತರಗತಿಯ ವಿಜ್ಞಾನ ಪುಸ್ತಕದ 208 ಹಾಗೂ 209ನೇ ಪುಟದಲ್ಲಿ ಪ್ರಾಚೀನ ಭಾರತದಲ್ಲಿ ಪ್ರನಾಳ ಶಿಶುಗಳು ಎಂಬ ಶೀರ್ಷಿಕೆಯಡಿಯಲ್ಲಿ 7500 ವರ್ಷಗಳ ಹಿಂದೆ ದ್ರೋಣಾಚಾರ್ಯ(ಕುಂಭ ಸಂಭವ) ಅವರು ಮೊದಲ ಟೆಸ್ಟ್ ಟ್ಯೂಬ್ ಬೇಬಿಯಾಗಿ ಜನಿಸಿದರು ಎನ್ನಲಾಗಿದೆ.
ಭಾರಧ್ವಾಜ ಋಷಿ ಗಂಗಾ ನದಿ ತಟದಲ್ಲಿ ಘೃತಾಚಿ ಎಂಬ ಅಪ್ಸರೆ ಮೇಲೆ ಮೋಹಗೊಂಡಾಗ ಅವರ ವೀರ್ಯಸ್ಖಲನವಾಗುತ್ತದೆ ಇದನ್ನು ಕುಂಭ(ಮಡಿಕೆ)ದಲ್ಲಿ ಶೇಖರಿಸಿ ಅದಕ್ಕೆ ಜೀವ ನೀಡುತ್ತಾರೆ ಹೀಗಾಗಿ ದ್ರೋಣ ಅವರಿಗೆ ಕುಂಭ ಸಂಭವ ಎಂಬ ಹೆಸರೂ ಇದೆ ಎಂದು ಪಠ್ಯದಲ್ಲಿ ಹೇಳಲಾಗಿದೆ.












Click it and Unblock the Notifications