Bannerghatta: ಜಿಂಕೆ, ಚಿರತೆ ದಿಢೀರ್ ಸಾವು: ಬನ್ನೇರುಘಟ್ಟಕ್ಕೆ ಸಚಿವರ ಭೇಟಿ
ಬೆಂಗಳೂರು: ರಾಜಧಾನಿಗೆ 30 ಕಿಮೀ ದೂರದಲ್ಲಿರುವ ಬನ್ನೇರುಘಟ್ಟ ಪಾರ್ಕ್‌ಗೆ ಲಕ್ಷಾಂತರ ಪ್ರವಾಸಿಗರು ಭೇಟಿ ಕೊಡುತ್ತಾರೆ. ಹೀಗಾಗಿ ಬನ್ನೇರುಘಟ್ಟ ಪಿಕ್‌ನಿಕ್ ಪ್ರಿಯರ ನೆಚ್ಚಿನ ತಾಣ ಅಂತಾರೆ. ಆದರೆ ಬನ್ನೇರುಘಟ್ಟದಲ್ಲಿ ಭಯ ಆವರಿಸಿದ್ದು, ಹೊಸ ವೈರಸ್ ಜಿಂಕೆ ಹಾಗೂ ಚಿರತೆಗಳನ್ನು ಕೊಂದು ಹಾಕುತ್ತಿದೆ. ಹೀಗಾಗಿ ಖುದ್ದು ಸಚಿವರೇ ಬನ್ನೇರುಘಟ್ಟಕ್ಕೆ ವಿಸಿಟ್ ಕೊಟ್ಟು, ಖಡಕ್ ಆದೇಶ ನೀಡಿದ್ದಾರೆ.
ಸಾಮಾನ್ಯವಾಗಿ ಬೆಕ್ಕುಗಳಿಗೆ ತಗಲುವ ಮಾರಕ ಫೆಲಿನ್ ಪ್ಯಾನ್ಲೂಕೋಪೇನಿಯಾ ಅರ್ಥಾತ್ ಎಫ್.ಪಿ.ವಿ ವೈರಸ್ ಬನ್ನೇರುಘಟ್ಟದಲ್ಲಿ ಭಯ ಹುಟ್ಟಿಸಿದೆ. ಈ ವೈರಸ್‌ಗೆ ಬನ್ನೇರುಘಟ್ಟ ಮೃಗಾಲಯದಲ್ಲಿ 7 ಚಿರತೆ ಮರಿ ಬಲಿಯಾಗಿವೆ. ಈ ಘಟನೆ ಸಾಲದು ಎಂಬಂತೆ ಉದರ ಸಂಬಂಧಿ ಕಾಯಿಲೆ ಹಾಗೂ ಪರಸ್ಪರ ಬಡಿದಾಡಿಕೊಂಡು 16 ಜಿಂಕೆಗಳು ಸಾವಿಗೀಡಾಗಿವೆ. ಹೀಗಾಗಿ ಇಂದು ಬನ್ನೇರುಘಟ್ಟಕ್ಕೆ ಇಂದು ಭೇಟಿ ನೀಡಿದ್ದ ಸಚಿವ ಈಶ್ವರ ಖಂಡ್ರೆ, ಖಡಕ್ ಸೂಚನೆ ನೀಡಿದ್ದಾರೆ. ಹಾಗಾದರೆ ಸಭೆಯಲ್ಲಿ ಏನೆಲ್ಲಾ ಚರ್ಚೆ ನಡೆಯಿತು? ಮುಂದೆ ಓದಿ

ಸಚಿವ ಈಶ್ವರ ಖಂಡ್ರೆ ಹೇಳಿದ್ದೇನು?
ಬನ್ನೇರುಘಟ್ಟ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಚಿವ ಈಶ್ವರ ಖಂಡ್ರೆ ಅವರು, ರಾಜ್ಯದ ಯಾವುದೇ ಮೃಗಾಲಯಗಳಲ್ಲಿ ಬೆಕ್ಕಿನ ಜಾತಿಗೆ ಸೇರಿದ ವನ್ಯಮೃಗಗಳಿಗೆ ಸೋಂಕು ಬಾರದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಇದೇ ವೇಳೆ ಬನ್ನೇರುಘಟ್ಟದಲ್ಲಿ ಸುತ್ತಾಡಿ, ಪರಿಶೀಲನೆ ನಡೆಸಿದ ಸಚಿವರು ಪರಿಸ್ಥಿತಿ ಹಿಡಿತಕ್ಕೆ ತರುವಂತೆ ಅಧಿಕಾರಿಗಳಿಗೆ ತಕ್ಷಣ ಕ್ರಮ ಕೈಗೊಳ್ಳಲು ಸೂಚಿಸಿದರು.
ಲಸಿಕೆ ನೀಡುವಂತೆ ಸಚಿವರ ಸೂಚನೆ
ಪರಿಶೀಲನೆ ಬಳಿಕ ಬನ್ನೇರುಘಟ್ಟದ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದ ಸಚಿವ ಈಶ್ವರ ಖಂಡ್ರೆ, ಉದ್ಯಾನದಲ್ಲಿ ಚಿರತೆಗಳಿಗೆ ಸೋಂಕು ಬಂದಿರುವ ಹಿನ್ನೆಲೆ ಇಲ್ಲಿನ ಯಾವುದೇ ಸಿಬ್ಬಂದಿ ರಾಜ್ಯದ ಬೇರೆ ಯಾವುದೇ ಮೃಗಾಲಯಕ್ಕೂ ಭೇಟಿ ನೀಡದಂತೆ ಆದೇಶ ನೀಡಿದ್ದಾರೆ. ಹಾಗೇ ಮೈಸೂರಿನ ಚಾಮರಾಜೇಂದ್ರ ಮೃಗಾಲಯ ಮತ್ತು ಇತರ ಮೃಗಾಲಯಗಳಲ್ಲಿ ಬೆಕ್ಕಿನ ಜಾತಿಗೆ ಸೇರಿದ ಪ್ರಾಣಿಗಳು ಅಂದರೆ ಚಿರತೆ, ಸಿಂಹ, ಹುಲಿ, ಕಾಡು ಬೆಕ್ಕುಗಳಿಗೆ ಅಗತ್ಯವಿದ್ದರೆ ಲಸಿಕೆ ನೀಡುವಂತೆ ಸೂಚಿಸಿದರು.
ಮುಂದೆ ಹೀಗೆ ಆಗದಂತೆ ಕ್ರಮ ವಹಿಸಿ
ಇನ್ನು ಜಿಂಕೆ ಸಾವಿನ ಕುರಿತಂತೆ ಸುದೀರ್ಘ ಚರ್ಚೆ ನಡೆಸಿದ ಸಚಿವರಿಗೆ ಬೆಂಗಳೂರಿನ ಸೇಂಟ್ ಜಾನ್ಸ್ ಆಸ್ಪತ್ರೆಯಿಂದ ಸಂರಕ್ಷಣೆ ಮಾಡಿ ತರಲಾದ ಜಿಂಕೆಗಳಿಗೆ ಉದರ ಸಂಬಂಧಿ ಕಾಯಿಲೆ ಇತ್ತು. ಹೀಗಾಗಿ ಅವುಗಳನ್ನು ಪ್ರತ್ಯೇಕವಾಗಿ ಇಡಲಾಗಿತ್ತು ಅವು ಪರಸ್ಪರ ಕಚ್ಚಾಟದಿಂದ ಮತ್ತು ಸೋಂಕಿನಿಂದ ಮೃತಪಟ್ಟಿವೆ ಎಂದು ತಿಳಿಸಲಾಯಿತು. ಮೃಗಾಲಯ ಅತ್ಯಂತ ಸುರಕ್ಷಿತ ಮತ್ತು ಸಂರಕ್ಷಿತ ತಾಣವಾಗಿದೆ. ಇಲ್ಲಿ ಇಷ್ಟು ಪ್ರಮಾಣದಲ್ಲಿ ವನ್ಯಮೃಗದ ಸಾವು ಆಘಾತಕಾರಿ. ಇನ್ನು ಮುಂದೆ ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಿ ಎಂದು ಸಚಿವ ಈಶ್ವರ ಖಂಡ್ರೆ, ಇದೇ ವೇಳೆ ಬನ್ನೇರುಘಟ್ಟದ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಸೂಚನೆ ನೀಡಿದರು.
ಅರಣ್ಯ ಅಧಿಕಾರಿಗಳು ಮತ್ತು ವೈದ್ಯಾಧಿಕಾರಿಗಳು ಸಮನ್ವಯದೊಂದಿಗೆ ಎಲ್ಲ ಪ್ರಾಣಿಗಳನ್ನು ಗಮನವಿಟ್ಟು ಪರೀಕ್ಷಿಸಿ. ಅವುಗಳ ಆರೈಕೆ ಮತ್ತು ಸಂರಕ್ಷಣೆಗೆ ಆದ್ಯತೆ ನೀಡಬೇಕು. ಯಾವುದೇ ವೈಮನಸ್ಸು, ಮನಸ್ತಾಪದಿಂದ ಸಂಸ್ಥೆಗೆ ಮತ್ತು ಸರ್ಕಾರಕ್ಕೆ ಕೆಟ್ಟ ಹೆಸರು ಬಾರದಂತೆ ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಸ್ಪಷ್ಟ ಸೂಚನೆ ನೀಡಿದ್ದಾರೆ ಸಚಿವರು. ಈ ಮೂಲಕ ದಿಢೀರ್ ಪ್ರಾಣಿಗಳ ಸಾವಿನ ವಿಚಾರವನ್ನು ಸಿದ್ದರಾಮಯ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಸಚಿವ ಈಶ್ವರ ಖಂಡ್ರೆ ಸುದೀರ್ಘ ಸಭೆ ನಡೆಸಿ ಖಡಕ್ ಸೂಚನೆ ನೀಡಿದ್ದಾರೆ.
ಅಲ್ಲದೆ ಯಾವುದೇ ವನ್ಯಮೃಗ ಹಠಾತ್ ಅಥವಾ ಅನುಮಾಸ್ಪದ ರೀತಿಯಲ್ಲಿ ಸಾವಿಗೀಡಾದರೆ ತಕ್ಷಣ ಸರ್ಕಾರಕ್ಕೆ & ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸಚಿವರು ಆದೇಶಿಸಿದ್ದಾರೆ. ಸಭೆಯಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಅರಣ್ಯ ಪಡೆ ಮುಖ್ಯಸ್ಥರಾದ ರಾಜೀವ್ ರಂಜನ್ ಹಾಗೂ ಪ್ರಧಾನ ಕಾರ್ಯದರ್ಶಿ (ಅರಣ್ಯ ವಿಭಾಗ) ಸಂಜಯ್ ಬಿಜ್ಜೂರ್ ಸೇರಿದಂತೆ ವನ್ಯಜೀವಿ ಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುಭಾಶ್ ಮಾಲ್ಕಡೆ ಹಾಜರಿದ್ದರು.












Click it and Unblock the Notifications