ಬೆಂಗಳೂರು: 81ರ ಅಜ್ಜಿಗೆ ಮೈಕ್ರೋಸಾಫ್ಟ್ ಆಫೀಸ್ ತೋರಿಸಿದ ಮೊಮ್ಮಗ, ಅಜ್ಜಿ ಮಾತಿಗೆ ನೆಟ್ಟಿಗರು ಭಾವುಕ
ಬೆಂಗಳೂರು: ಯಶಸ್ಸಿನ ಉತ್ತುಂಗಕ್ಕೇರಿದಾಗಲೂ ನಮ್ಮ ಬೇರುಗಳನ್ನು ಹಾಗೂ ನಮ್ಮ ಏಳಿಗೆಗಾಗಿ ಶ್ರಮಿಸಿದ ಹಿರಿಯರನ್ನು ಮರೆಯದಿರುವುದು ನಿಜವಾದ ಸಾಧನೆಯಲ್ಲವೇ?. ಇದಕ್ಕೆ ಉತ್ತಮ ಉದಾಹರಣೆ ಎಂಬಂತೆ, ಬೆಂಗಳೂರಿನ ಮೈಕ್ರೋಸಾಫ್ಟ್ ಉದ್ಯೋಗಿಯೊಬ್ಬರು ತಮ್ಮ 81 ವರ್ಷದ ಅಜ್ಜಿಯನ್ನು ಇದೇ ಮೊದಲ ಬಾರಿಗೆ ತಮ್ಮ ಕಚೇರಿಗೆ ಕರೆತಂದು ಕ್ಯಾಂಪಸ್ ಸುತ್ತಾಡಿಸಿದ ಘಟನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಈ ಕುರಿತಾದ ಭಾವನಾತ್ಮಕ ಪೋಸ್ಟ್ ಹಲವರ ಹೃದಯ ಗೆದ್ದಿದೆ.
ಮೈಕ್ರೋಸಾಫ್ಟ್ ಸಂಸ್ಥೆಯಲ್ಲಿ ಹಿರಿಯ ವ್ಯವಸ್ಥಾಪಕರಾಗಿ ಕಳೆದ ಒಂದೂವರೆ ವರ್ಷದಿಂದ ಕಾರ್ಯನಿರ್ವಹಿಸುತ್ತಿರುವ ವೆಂಕಟೇಶ್ ಬಜಾಜ್ ಎಂಬುವವರೇ ತಮ್ಮ ಅಜ್ಜಿಗೆ ಸಾಫ್ಟ್‌ವೇರ್ ಲೋಕದ ದರ್ಶನ ಮಾಡಿಸಿದ ಮೊಮ್ಮಗ. ತಾವು ಬೆಳೆದುಬಂದ ಹಾದಿ ಹಾಗೂ ಅಜ್ಜಿಯ ಜೊತೆಗಿನ ಕಚೇರಿ ಭೇಟಿಯ ಅನುಭವವನ್ನು ಅವರು ತಮ್ಮ ಲಿಂಕ್ಡ್‌ಇನ್ ಖಾತೆಯಲ್ಲಿ ಸುದೀರ್ಘವಾಗಿ ಹಂಚಿಕೊಂಡಿದ್ದಾರೆ.

ಹಳ್ಳಿಯಿಂದ ಮೈಕ್ರೋಸಾಫ್ಟ್ ಹಾದಿ
"ಇಂದು ನನ್ನ ಜೀವನದ ಅತ್ಯಂತ ಭಾವನಾತ್ಮಕ ದಿನಗಳಲ್ಲಿ ಒಂದು. ನಾನು ಮೂಲತಃ ಮಹಾರಾಷ್ಟ್ರದ ಮಂಗ್ರುಲ್ಪಿರ್ (Mangrulpir) ಎಂಬ ಅತ್ಯಂತ ಸಣ್ಣ ಹಳ್ಳಿಯಿಂದ ಬಂದವನು. ಅಲ್ಲಿ ನಮಗೆ ಕಾರ್ಪೊರೇಟ್ ಜಗತ್ತಿನ ಪರಿಚಯವೇ ಇರಲಿಲ್ಲ. ಮೆಟ್ರೋ ನಗರಗಳ ಐಷಾರಾಮಿ ಜೀವನ ನಮಗೆ ಗಗನಕುಸುಮವಾಗಿತ್ತು. ಬಾಲ್ಯದಲ್ಲಿ ಟಿವಿಯಲ್ಲಿ ಕಾಣುತ್ತಿದ್ದ ದೊಡ್ಡ ದೊಡ್ಡ ಗಾಜಿನ ಕಟ್ಟಡಗಳನ್ನು ನೋಡಿ, ನಾನೂ ಒಮ್ಮೆ ಅಲ್ಲಿಗೆ ಹೋಗಬೇಕು ಎಂದು ಕನಸು ಕಾಣುತ್ತಿದ್ದೆ. ಆದರೆ ಇಂದು ನನ್ನ 81 ವರ್ಷದ ಅಜ್ಜಿಯನ್ನು ಬೆಂಗಳೂರಿನ ಮೈಕ್ರೋಸಾಫ್ಟ್ ಕ್ಯಾಂಪಸ್‌ನಲ್ಲಿ ಕೈಹಿಡಿದು ನಡೆಸಿದ್ದೇನೆ" ಎಂದು ವೆಂಕಟೇಶ್ ಬಜಾಜ್ ಭಾವುಕರಾಗಿ ಬರೆದುಕೊಂಡಿದ್ದಾರೆ.
ಅಜ್ಜಿಯ ಮೆಚ್ಚುಗೆ
ಕಾರ್ಪೊರೇಟ್ ಜಗತ್ತನ್ನು ಮೊದಲ ಬಾರಿಗೆ ಹತ್ತಿರದಿಂದ ನೋಡಿದ 81 ವರ್ಷದ ಅಜ್ಜಿ, ಕಚೇರಿಯ ಕಾರ್ಯಾಚರಣೆ, ತಂತ್ರಜ್ಞಾನ ಹಾಗೂ ಅಲ್ಲಿನ ವಾತಾವರಣವನ್ನು ನೋಡಿ ಆಶ್ಚರ್ಯಚಕಿತರಾಗಿದ್ದಾರೆ. "ಇಷ್ಟು ದೊಡ್ಡ ಮಟ್ಟದಲ್ಲಿ ಇಲ್ಲಿ ಕೆಲಸ ಹೇಗೆ ನಡೆಯುತ್ತದೆ?" ಎಂದು ಅವರು ಅತ್ಯಂತ ಕುತೂಹಲದಿಂದ ಮೊಮ್ಮಗನನ್ನು ಪ್ರಶ್ನಿಸಿದ್ದಾರೆ.
ಔಪಚಾರಿಕ ಶಿಕ್ಷಣವನ್ನು ಪಡೆಯದಿದ್ದರೂ, ಅಜ್ಜಿಯ ಪ್ರಗತಿಪರ ಚಿಂತನೆಗಳು ವೆಂಕಟೇಶ್ ಅವರನ್ನು ಹೆಚ್ಚು ಆಕರ್ಷಿಸಿವೆ. "ತರಗತಿಯ ಕೋಣೆಗಳು ಕಲಿಸದ ಜೀವನದ ಪಾಠಗಳನ್ನು ಬದುಕು ಅವರಿಗೆ ಕಲಿಸಿದೆ. ತಲೆಮಾರುಗಳ ತ್ಯಾಗ ಇಂದು ಸಾರ್ಥಕವಾದಂತೆ ಭಾಸವಾಗುತ್ತಿದೆ. ಕಚೇರಿಯನ್ನೆಲ್ಲಾ ನೋಡಿದ ಬಳಿಕ ಅಜ್ಜಿ ನಗುತ್ತಾ, 'ನೀನು ಬಹಳ ಅರ್ಥಪೂರ್ಣವಾದ ಕೆಲಸ ಮಾಡುತ್ತಿದ್ದೀಯಾ' ಎಂದರು. ಆ ಒಂದು ಮಾತು ನನಗೆ ಯಾವುದೇ ಬಡ್ತಿ, ಪ್ರಶಸ್ತಿ ಅಥವಾ ಹುದ್ದೆಗಿಂತ ದೊಡ್ಡದಾಗಿ ಕಂಡಿತು. ಇಂದು ನನ್ನ ಸ್ಥಾನಮಾನದಿಂದಲ್ಲ, ಬದಲಾಗಿ ಅಜ್ಜಿಯ ಕಣ್ಣುಗಳ ಮೂಲಕ ನನ್ನ ಜಗತ್ತನ್ನು ನೋಡಿದ್ದಕ್ಕಾಗಿ ನಾನು ಇನ್ನಷ್ಟು ಎತ್ತರಕ್ಕೆ ಬೆಳೆದಂತೆ ಭಾಸವಾಯಿತು" ಎಂದು ಬಜಾಜ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ನೆಟ್ಟಿಗರ ಭಾವುಕ ಪ್ರತಿಕ್ರಿಯೆ
ವೆಂಕಟೇಶ್ ಬಜಾಜ್ ಅವರ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಹಲವರು ಕಮೆಂಟ್‌ನಲ್ಲಿ ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದಾರೆ. "ತಲೆಮಾರುಗಳ ತ್ಯಾಗ ಸಾರ್ಥಕವಾಯಿತು ಎಂಬ ನಿಮ್ಮ ಮಾತು ನಿಜಕ್ಕೂ ಅದ್ಭುತ. ಕೆಲಸದ ಸ್ಥಳದಲ್ಲಿ ಸಿಗುವ ಯಾವುದೇ ಮನ್ನಣೆಗಿಂತ ಅಜ್ಜಿಯ ಕಣ್ಣಲ್ಲಿ ಕಾಣುವ ಹೆಮ್ಮೆ ತುಂಬಾ ದೊಡ್ಡದು," ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ. "ಪೋಷಕರನ್ನು ಕಚೇರಿಗೆ ಕರೆತರುವುದು ಸಾಮಾನ್ಯ. ಆದರೆ ಅಜ್ಜಿಯನ್ನು ಕರೆತಂದಿರುವುದು ನಿಜಕ್ಕೂ ವಿಶೇಷ. ನಿಮ್ಮ ಬೇರುಗಳನ್ನು ಮರೆಯದ ನಿಮ್ಮ ಗುಣಕ್ಕೆ ನಮ್ಮದೊಂದು ಸಲಾಂ" ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.












Click it and Unblock the Notifications