Man's Feelings: ನಾವು ಪುರುಷರ ಭಾವನೆಗಳ ವಿಚಾರದಲ್ಲಿ ಅಸಂವೇದನಶೀಲರು: ಶೋಭಾ ಮಳವಳ್ಳಿ ಬರಹ
Man's Feelings: ನಾವು ಪುರುಷರ ಭಾವನೆಗಳ ವಿಚಾರದಲ್ಲಿ ಅಸಂವೇದನಶೀಲರು: ಹಿರಿಯ ಪತ್ರಕರ್ತೆ ಶೋಭಾ ಮಳವಳ್ಳಿ ಅವರ ಬರಹ ಇಲ್ಲಿದೆ. ಮೊನ್ನೆ ಮಲ್ಲೇಶ್ವರಂನಿಂದ ಆಟೋ ಹತ್ತಿದ ಎರಡೇ ನಿಮಿಷಕ್ಕೆ ಡ್ರೈವರ್ ಮೊಬೈಲ್ ರಿಂಗಣಿಸಿತು. ರಿಸೀವ್ ಮಾಡ್ಲಿಲ್ಲ, ಮತ್ತೆ ಮತ್ತೆ ರಿಂಗಣಿಸಿತು. 55 ವರ್ಷದ ಮೇಲಿರಬಹುದು ಆಟೋ ಅಣ್ಣನ ವಯಸ್ಸು, ಸಿಡಿಸಿಡಿಯಿಂದಲೇ ರಿಸೀವ್ ಮಾಡಿ, ಡ್ರೈವ್ ಮಾಡ್ತಿದ್ದೀನಿ, ಮತ್ತೆ ಮಾಡ್ತೀನಿ ಇಡು ಅಂತ ಗದರಿದ್ರು. ಇನ್ನೆರಡು ನಿಮಿಷಕ್ಕೆ ಮತ್ತೆ ಫೋನ್, 10 ನಿಮಿಷದಲ್ಲಿ 7-8 ಬಾರಿ ಫೋನ್. ಇವರದ್ದು ಅದೇ ಮಾತು, ಮತ್ತೆ ಮಾಡ್ತೀನಿ ಅಷ್ಟೇ.
ತುಂಬಾ ತುರ್ತಿದ್ದರೆ, ಆಟೋ ನಿಲ್ಲಿಸಿ ಮಾತಾಡಿ, ನಾನೆಂದೆ. ಅಯ್ಯೋ ಮೇಡಂ, ಮಗಳು ಕಾಲೇಜ್ ಸೇರಬೇಕು. ಅಮ್ಮ- ಮಗಳನ್ನು ಒಂದೇ ರೋದನೆ, ಅವರು ಹೇಳಿದ್ದೇ ಕಾಲೇಜ್. ನನ್ನ ದುಡಿಮೆ ಸಾಕಾಗದು. ಫೀಸ್ ಕಟ್ಟೋದು ಕಷ್ಟ ಅಂತಿದ್ರೂ ಕೇಳ್ತಿಲ್ಲ- ಅಸಹಾಯಕತೆಯಲ್ಲಿ ಅದ್ದಿದ ದನಿ ಅವರದ್ದು.
ಹೆಂಡ್ತಿ ಕೆಲಸ ಮಾಡೋದಿಲ್ವಾ ? ನನ್ನದು ಮರುಪ್ರಶ್ನೆ. ಇಲ್ಲ ಮೇಡಂ, ಮಕ್ಕಳನ್ನು ನೋಡ್ಕೊಂಡ್ ಮನೆಯಲ್ಲೇ ಇರ್ತಾಳೆ. ಈಗ ದುಡಿಯೋ ವಯಸ್ಸಿಲ್ಲ. ದುಡಿಯೋ ವಯಸ್ಸಲ್ಲಿ ಕೆಲಸಕ್ಕೆ ಹೋಗಲಿಲ್ಲ. ನಾನೊಂದು ಫ್ಯಾಕ್ಟರಿಯಲ್ಲಿ ಕೆಲಸಕ್ಕಿದ್ದೆ. ಅದು ಕೊರೋನಾದಲ್ಲಿ ಮುಚ್ಚಿದ ಮೇಲೆ ಆಟೋ ಓಡಿಸ್ತಿದ್ದೀನಿ.. ಎನ್ನುತ್ತಿದ್ದಂತೆ ಮತ್ತೆ ಮೊಬೈಲ್ ರಿಂಗಣಿಸಿತು. ಈ ಬಾರಿ ಸಹನೆಯ ಕಟ್ಟೆಯೊಡೆದಿತ್ತು. ಈ ಬಾಡಿಗೆ ಮುಗಿತಿದ್ದಂತೆ ಮನೆಗೇ ಬರ್ತಿನಿ, ಅಲ್ಲಿವರೆಗೂ ಸುಮ್ನಿರು ಮಾರಾಯ್ತಿ ಎಂದು ಬೇಡುವ ದನಿಯಲ್ಲಿ ಹೇಳಿ ಬಿಟ್ರು.

ಫೀಸ್‌ಗೆ ಏನ್ಮಾಡ್ತೀರಿ, ಅವರು ಹೇಳಿದ ಕಾಲೇಜ್‌ಗೆ ಸೇರಿಸ್ತೀರಾ ? ಕೇಳಿದೆ. ನಮ್ ಮಾತು ಎಲ್ಲಿ ಕೇಳ್ತಾರೆ ಬಿಡಿ. ಎಲ್ಲ ಅಮ್ಮ, ಮಗಳದ್ದೇ. ಮದುವೆ ಆದ ಮೇಲೆ ಮುಗೀತು. ಮದುವೆ ಆಗೋವರೆಗೂ ಅಪ್ಪ-ಅಮ್ಮನ ಮಾತು ಕೇಳದಿದ್ರೂ ನಡೆಯುತ್ತೆ, ಕೇಳದಿದ್ರೂ ನಡೆಯುತ್ತೆ. ಆದ್ರೆ, ಮದುವೆ ಆದ್ಮೇಲೆ ಸಾಯೋತನಕ ಹೆಂಡ್ತಿ ಮಾತು ಕೇಳಲೇ ಬೇಕು. ಹೆಂಡ್ತಿ ಮಾತು ಮೀರಿ ನಡೆಯೋಕ್ಕಾಗುತ್ತಾ ? ಅಂತ ಮಾತು ನುಂಗಿದರು. ಅದೆಷ್ಟು ನೊಂದಿತ್ತೋ ಜೀವ ಅನ್ನಿಸಿ ಮತ್ತೆ ಮಾತಿಗೆಳೆಯಲಿಲ್ಲ.
ಈ ಗಂಡು ಜೀವ ಅನ್ನೋದು ಅದೆಷ್ಟೇ ದಾರ್ಷ್ಟ್ಯ, ದೌಲತ್ತು, ಅಹಂ ಎಲ್ಲವೂ ಹೆಂಡ್ತಿ, ಮಕ್ಕಳ ಎದುರು ಕರಗಿ ಹೋಗುತ್ತೆ ನೋಡಿ. ಆಟೋ ಡ್ರೈವರ್ ಹೇಳಿದಂತೆ, ಮದುವೆಯಾದ ಬಳಿಕ ಆತನಿಗೆ ಹೆಂಡತಿಯೇ ಎಲ್ಲವೂ. ಆಕೆಯ ಅಣತಿಯಂತೆಯೇ ಬದುಕು ಸಾಗಿ ಬಿಡುತ್ತೆ. ಅಷ್ಟು ವರ್ಷ ಹೆತ್ತು, ಹೊತ್ತು ಸಾಕಿದವರೂ ನಗಣ್ಯವಾಗಿ ಬಿಡ್ತಾರೆ.
ಹೆಂಡತಿ ತನ್ನ ಅಪ್ಪ- ಅಮ್ಮ, ಅಕ್ಕ- ತಂಗಿಯರು, ಅಣ್ಣ- ತಮ್ಮಂದಿರನ್ನು ಹೀಯಾಳಿಸುತ್ತಾ, ಅವರ ವಿರುದ್ಧ ದೂರುಗಳನ್ನು ಊದುತ್ತಿದ್ರೂ, ಎಲ್ಲವನ್ನೂ ಮೌನವಾಗಿ ಕೇಳಿಸಿಕೊಳ್ಳುತ್ತಾ ಅಸಹಾಯಕರಾಗಿ ಬದುಕುವ ಗಂಡಸರಿದ್ದಾರೆ. ಅವರ ಯಾವ ಅಭಿಪ್ರಾಯ, ಸಲಹೆ, ಮಾತಿಗೆ ಬೆಲೆಯೇ ಇರದು. ಅದೊಂದು ದುಡಿಯುವ ಯಂತ್ರವಷ್ಟೇ. ಎಷ್ಟೇ ಜನರೇಷನ್ ಕಳೆದರೂ, ನಾವು ಗಂಡಸಿನ ಭಾವನೆಗಳನ್ನು ಅರಿಯುವ ಪ್ರಯತ್ನ ಮಾಡೋದೇ ಇಲ್ಲೇನೋ. We are a little more insensitive towards man's feelings / ನಾವು ಪುರುಷರ ಭಾವನೆಗಳ ವಿಚಾರದಲ್ಲಿ ಅಸಂವೇದನಶೀಲರು ಅಂತ ಅನ್ಸತ್ತೆ.
ಹೆಣ್ಣಿನ ತಪ್ಪಿನ ಬಗ್ಗೆ ಮಾತನಾಡುವಾಗ ಸೂಕ್ಷ್ಮವಾಗಿ ವರ್ತಿಸುವ ನಾವು, ಒಬ್ಬ ಗಂಡಸು ಮಾಡೋ ತಪ್ಪಿನ ಬಗ್ಗೆ ಸುಲಭವಾಗಿ ಇಡೀ ಪುರುಷ ಸಮಾಜವನ್ನೇ ಹೊಣೆಗಾರ ಅನ್ನೋ ಕಲೆಕ್ಟಿವ್ ಅಭಿಪ್ರಾಯ ವ್ಯಕ್ತಪಡಿಸ್ತೀವಿ. ಕೆಲವೊಮ್ಮೆ Man is a victim of collective blaming ಅನ್ನಿಸದೇ ಇರದು. ಗಂಡಸಿನ ಅಸಹಾಯಕತೆ, ನರಳಿಕೆ ಅರ್ಥ ಮಾಡಿಕೊಳ್ಳುವಲ್ಲಿ ಎಲ್ಲೋ ಎಡವುತ್ತಿದ್ದೇವೆ ಅನ್ನಿಸತ್ತೆ. ಇದು ಎಲ್ಲ ಗಂಡಸರಿಗೂ ಅನ್ವಯ ಆಗೋದಿಲ್ಲ ಬಿಡಿ. ಆದರೆ, ಬಹುಸಂಖ್ಯಾತ ಗಂಡಸರು, ಹೆಣ್ಣಿನ ಮುಂದೆ ಮಂಡಿಯೂರಿ ಬದುಕು ಸಾಗಿಸುತ್ತಿರುವುದಂತೂ ಸತ್ಯ. ಇಲ್ಲದಿದ್ರು ಜೀವನ ನರಕ..
ಬರಹ: ಶೋಭಾಮಳವಳ್ಳಿ, ಹಿರಿಯ ಪತ್ರಕರ್ತರು.












Click it and Unblock the Notifications