ಎಂಎನ್ ಸಿ ಕೆಲಸ ಬಿಟ್ಟು ಫುಡ್ ಡೆಲಿವರಿ ಗರ್ಲ್ ಆದ ಮೇಘನಾ!
ಈಕೆ ಮಹಿಳೆ. ಈಕೆಗಿರುವ ವಿಶೇಷ ಶಕ್ತಿಯೇ ಅದೇ ಏನೋ. ಎಲ್ಲಿಗೂ ಸಲ್ಲುವುದು ಆಕೆಯ ಗುಣ ವಿಶೇಷ. ತಾನು ಕಾಲಿಟ್ಟ ಪ್ರತೀ ಕ್ಷೇತ್ರದಲ್ಲೂ ಆಕೆ ತನ್ನ ಅಸ್ತಿತ್ವ ಸ್ಥಾಪಿಸಿಬಿಡುತ್ತಾಳೆ. ಫುಡ್ ಡೆಲಿವರಿ, ಕೊರಿಯರ್ ಬಾಯ್ ಹೀಗೆ ತಿರುಗಾಟದ ಕೆಲಸಗಳಲ್ಲಿ ಹೆಚ್ಚಾಗಿ ಪುರುಷರನ್ನೇ ಕಾಣುತ್ತೇವೆ. ಆದ್ರೆ ಇಲ್ಲೊಬ್ಬಾಕೆ ಮಹಿಳೆ ಫುಡ್ ಡೆಲಿವರಿ ಕೆಲಸಕ್ಕೂ ಸೈ ಎಂದು ಪುರುಷರಿಗೇ ಸೆಡ್ಡು ಹೊಡೆದು ನಿಂತಿದ್ದಾರೆ.
ಈಕೆ ಮೇಘನಾ ದಾಸ್. ಮಂಗಳೂರಿನ ಉರ್ವದವರು. ಮಾಡೋದು ಝೊಮ್ಯಾಟೋ ಫೂಡ್ ಕಂಪನಿಯಲ್ಲಿ ಡೆಲಿವರಿ ಗರ್ಲ್ ಕೆಲಸ. ಝೊಮಾಟೊ ಉಬರ್ ಈಟ್ಸ್, ಸ್ವಿಗ್ಗಿ ಯಂತಹಾ ಫುಡ್ ಪಾರ್ಸೆ ಲ್ ಕಂಪನಿಗಳಲ್ಲಿ ಹುಡುಗರೇ ಹೆಚ್ಚಾಗಿ ಫುಡ್ ಡೆಲಿವರಿ ಮಾಡ್ತಾರೆ. ಆದ್ರೆ ಮಂಗಳೂರಿನ ಮೇಘನಾ ದಾಸ್ ಯಾವುದೇ ಅಂಜು ಅಳುಕಿಲ್ಲದೆ ಫುಡ್ ಡೆಲಿವರಿ ಮಾಡೋ ಮೂಲಕ ಕೈತುಂಬಾ ಸಂಪಾದನೆ ಮಾಡ್ತಾರೆ. ಈಕೆ ಓದಿದ್ದು ಬಿಎ ಲಿಟರೇಚರ್.
ಈ ಹಿಂದೆ ಬೆಂಗಳೂರಿನ ಎಂಎನ್ ಸಿ ಹ್ಯಾವ್ಲೆಟ್ ಪ್ಯಾಕಾರ್ಡ್ ನಲ್ಲಿ ಟೆಕ್ನಿಕಲ್ ಸಪೋರ್ಟ್ ಎಕ್ಸಿಕ್ಯುಟಿವ್ ಆಗಿದ್ದರು. ನಂತರ ದುಬೈನ ಕಂಪನಿಯೊಂದರಲ್ಲಿ ಮೇನೇಜರ್ ಆಗಿ ಕೆಲಸ ನಿರ್ವಹಿಸಿದ್ದರು.

ಅಂದ ಹಾಗೆ ಈಕೆ ಬೈಕ್ ಪ್ರಿಯೆ. ಮೋಟಾರ್ ಸೈಕಲ್ ಏರಿ ಸವಾರಿ ಹೊರಡೋದಂದ್ರೆ ಈಕೆಗೆ ಬಲು ಇಷ್ಟ. ಇವರ ಹವ್ಯಾಸದಲ್ಲಿ ತೊಡಗಿಸಿಕೊಳ್ಳಲೂ ಇವರಿಗೆ ಅವಕಾಶವಿರುವುದರಿಂದ ಈ ಕೆಲಸವನ್ನು ಇಷ್ಟ ಪಟ್ಟು ಮಾಡುತ್ತಿದ್ದಾರಂತೆ. ಡೆಲಿವರಿ ಎಕ್ಸಿಕ್ಯುಟಿವ್ ಆಗಿ ಯಾವುದೇ ಒತ್ತಡಗಳಿಲ್ಲದೆ ಸ್ವತಂತ್ರವಾಗಿ ಕೆಲಸ ನಿಭಾಯಿಸಬಹುದು - ಇದು ಇವರ ಅನುಭವ.

ಆಹಾರವನ್ನು ಡೆಲಿವರಿ ಮಾಡುವ ಕೆಲಸ ಸಣ್ಣ ಮಟ್ಟದ್ದು ಎಂದು ನಾಚಿಕೆ ಪಡುವ ಅಗತ್ಯವಿಲ್ಲ. ಹಸಿವಾದಾಗ ಆಹಾರ ಒದಗಿಸಿ ಅವರ ಹಸಿವು ತಣಿಸುವ ಕೆಲಸಕ್ಕಿಂತ ಉತ್ತಮವಾದ ಕೆಲ ಬೇರೊಂದಿಲ್ಲ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಮೇಘನಾ. ಝೊಮಾಟೋ ಫುಡ್ ಕಂಪನಿಯಲ್ಲಿ ಡೆಲಿವರಿ ಗರ್ಲ್ ಆಗಿ ಕೆಲಸ ಮಾಡುವ ಈ ಸ್ವಾಭಿಮಾನಿ ಹೆಣ್ಣು ಇತರ ಮಹಿಳೆಯರಿಗೂ ಸ್ಫೂರ್ತಿ.












Click it and Unblock the Notifications