ಬಿಜೆಪಿಗೆ ಹೀನಾಯ ಸೋಲುಣಿಸಿದವರಿಗೆ ಸರ್ಕಾರ ಪತನದ ಬಗ್ಗೆ ಮಾತನಾಡುವ ಹಕ್ಕಿಲ್ಲ: ಸಚಿವ
ಬೆಂಗಳೂರು, ಫೆಬ್ರವರಿ 02: ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಬಿಜೆಪಿಯು ಹೀನಾಯವಾಗಿ ಸೋಲು ಕಂಡಿತು. ಹೀಗಿರುವಾಗ, ಲೋಕಸಭಾ ಚುನಾವಣೆ ಆದ ಮೇಲೆ ರಾಜ್ಯ ಸರ್ಕಾರ ಪತನವಾಗುತ್ತದೆ ಎಂದು ಹೇಳಲು ಅವರಿಗೆ ಯಾವ ನೈತಿಕತೆ ಇದೆ ಎಂದು ಭಾರಿ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ತಿರುಗೇಟು ನೀಡಿದರು.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಶುಕ್ರವಾರ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷಕ್ಕೆ 135 ಸೀಟುಗಳು ಬಂದಿರುವುದರಲ್ಲಿ ಬೊಮ್ಮಾಯಿ ಅವರ ಕೊಡುಗೆಯೂ ಇದೆ. ಇವರಿಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಪತನ ಕುರಿತು ಮಾತನಾಡುವ ನೈತಿಕೆ ಇಲ್ಲ ಎಂದರು.

ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದಾಗ ಬುದ್ಧಿವಂತರೊಬ್ಬರು ಆ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆಂದು ನಾವೂ ಖುಷಿ ಪಟ್ಟಿದ್ದೆವು. ಆದರೆ, ಅದನ್ನು ಉಳಿಸಿಕೊಳ್ಳಲು ಅವರಿಗೆ ಆಗಲಿಲ್ಲ ಎಂದು ಎಂಬಿ ಪಾಟೀಲ್ ಟೀಕಾಸ್ತ್ರ ಪ್ರಯೋಗಿಸಿದರು.
ಪ್ರತ್ಯೇಕ ರಾಷ್ಟ್ರ ಬಗ್ಗೆ ಹೆಚ್ಚಿನ ಅರ್ಥ ಕಲ್ಪಿಸಬೇಕಿಲ್ಲ
ಪ್ರತ್ಯೇಕ ರಾಷ್ಟ್ರ ದ ಬಗ್ಗೆ ಸಂಸದ ಡಿ.ಕೆ ಸುರೇಶ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, ದಕ್ಷಿಣದ ರಾಜ್ಯಗಳಿಗೆ ಆದಾಯಕ್ಕೆ ತಕ್ಕ ಪ್ರತಿಫಲ ಸಿಗಲಿ ಎಂಬುದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಅವರು ಹಾಗೆ ಹೇಳಿದ್ದಾರೆ; ಅದಕ್ಕೆ ಹೆಚ್ಚಿನ ಅರ್ಥಗಳನ್ನು ಕಲ್ಪಿಸುವ ಅಗತ್ಯವಿಲ್ಲ ಎಂದು ಸಮರ್ಥಿಸಿಕೊಂಡರು.
ನಿನ್ನೆ ಮುಖ್ಯಮಂತ್ರಿ ಅವರು ಡಿನ್ನರ್ ಪಾರ್ಟಿ ಕರೆದ ಸಂದರ್ಭದಲ್ಲಿ, ಜಿಲ್ಲೆಗಳ ಉಸ್ತುವಾರಿ ಸಚಿವರೊಂದಿಗೆ ಬರಲಿರುವ ಲೋಕಸಭಾ ಚುನಾವಣೆಗೆ ಸಜ್ಜಾಗುವುದು, ಪಕ್ಷ ಸಂಘಟನೆ ಮತ್ತಿತರ ವಿಷಯಗಳ ಕುರಿತು ಚರ್ಚೆಗಳು ನಡೆದಿವೆ ಎಂದು ಪಾಟೀಲ ತಿಳಿಸಿದರು.

ಕೇಂದ್ ಬಜೆಟ್ ಬಗ್ಗೆ ಸಚಿವರ ಪ್ರತಿಕ್ರಿಯೆ
ಕೇಂದ್ರ ಬಜೆಟ್ ಮಂಡನೆಗೆ ಪ್ರತಿಕ್ರಿಯಿಸಿದ್ದ ಸಚಿವರು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರತಿಯೊಂದರಲ್ಲೂ ದೇಶವು 2014ರಿಂದ ಈಚೆಗೆ ಮಾತ್ರ ಭಾರೀ ಸಾಧನೆ ಮಾಡಿದೆ ಎಂದು ಹೇಳುವ ಕೆಲಸವನ್ನಷ್ಟೆ ಮಾಡಿದ್ದಾರೆ. ಹಾಗಾದರೆ, 60 ವರ್ಷಗಳ ಕಾಲ ದೇಶವನ್ನಾಳಿರುವ ಕಾಂಗ್ರೆಸ್ ದೇಶವನ್ನು ಕಟ್ಟಿದ್ದಕ್ಕೆ ಬೆಲೆ ಕಟ್ಟುವುದೇ ಸಾಧ್ಯವಿಲ್ಲ ಎಂದು ಹೇಳಿದರು.
ಆದಾಯ ತೆರಿಗೆಯಲ್ಲಿ ಜನರು ಹೆಚ್ಚಿನ ರಿಯಾಯಿತಿ/ವಿನಾಯಿತಿ ಬಯಸಿದ್ದರು. ಈಗ ನೋಡಿದರೆ ಮೋದಿ ಏನನ್ನೂ ಕೊಟ್ಟಿಲ್ಲ. ಸುಮ್ಮನೆ ಅಭಿವೃದ್ಧಿಯ ಮಂತ್ರ ಹೇಳುತ್ತ, ಜನರ ಭಾರವನ್ನು ಹಾಗೆಯೇ ಉಳಿಸಿದ್ದಾರೆ. ಅವರು ಸದಾ ಹೇಳುವ ಈಸ್ ಆಫ್ ಲಿವಿಂಗ್ ಪರಿಕಲ್ಪನೆಗೆ ಈಗ ಅರ್ಥವಿನ್ನೆಲ್ಲಿ ಉಳಿಯಿತು? ರೈತರು, ಮಹಿಳೆಯರು, ಯುವಜನರು ಮತ್ತು ಬಡವರನ್ನು ಬರೀ ವೋಟ್ ಬ್ಯಾಂಕ್ ಆಗಿ ನೋಡಿರುವ ಬಜೆಟ್ ಇದು ಎಂದು ಅವರು ಅಭಿಪ್ರಾಯಪಟ್ಟರು.












Click it and Unblock the Notifications