ಬೆಂಗಳೂರು: ಆನೇಕಲ್ ಬಳಿ ಬಟ್ಟೆ ಕಾರ್ಖಾನೆ ಬೆಂಕಿಗಾಹುತಿ
ಬೆಂಗಳೂರು, ಜನವರಿ, 02: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅಗ್ನಿ ದುರಂತಗಳು ನಡೆಯುತ್ತಲೇ ಇವೆ. ಇಂದು (ಜನವರಿ 02) ಬಟ್ಟೆ ಕಾರ್ಖಾನೆ ಬೆಂಕಿಗಾಹುತಿಯಾದ ಘಟನೆ ಆನೇಕಲ್ ಬಳಿ ನಡೆದಿದೆ. ಸದ್ಯ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.
ಇಡೀ ಕೈಗಾರಿಕಾ ಪ್ರದೇಶವು ಹೊಗೆಯಿಂದ ಕೂಡಿದ್ದು, ಅಕ್ಕಪಕ್ಕದಲ್ಲಿ ಬೆಂಕಿ ಆವರಿಸಿದೆ. ಪರಿಣಾಮ ಕೋಟಿಗಟ್ಟಲೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಅಗ್ನಿ ಅವಘಡ ಸಂಭಮಿಸಿದ ವೇಳೆ ಕಾರ್ಮಿಕರು ಸಿಲುಕಿಕೊಂಡಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟ ಮಾಹಿತಿ ತಿಳಿದುಬಂದಿಲ್ಲ.

ಇನ್ನು ಮಹದೇವಪುರ ಬಳಿಯ ಬೈಕ್ ಶೋರೂಂವೊಂದರಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಕನಿಷ್ಠ 50ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಸುಟ್ಟ ಭಸ್ಮವಾಗಿವೆ ಎಂದು ಪೊಲೀಸರು ಗುರುವಾರ (ಜನವರಿ 02) ಮಾಹಿತಿ ನೀಡಿದ್ದಾರೆ. ನಿನ್ನೆ ರಾತ್ರಿ ಈ ಅವಘಡ ಸಂಭವಿಸಿದ್ದು, ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ. ಇನ್ನು ಈ ಘಟನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಬೈಕ್‌ಗಳು ಸುಟ್ಟು ಭಸ್ಮವಾಗಿವೆ.
ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ. ಪಕ್ಕದಲ್ಲೇ ಇದ್ದ ಮತ್ತೊಂದು ಶೋರೂಂಗೂ ಬೆಂಕಿ ವ್ಯಾಪಿಸಿದೆ. ಕೂಡಲೇ ಎಚ್ಚೆತ್ತ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶೋರೂಂ ಮುಚ್ಚಿರುವಾಗ ಈ ಅವಘಡ ಸಂಭವಿಸಿದೆ. ಕಟ್ಟಡದಿಂದ ದಟ್ಟ ಹೊಗೆ ಹೊರಡುತ್ತಿರುವುದನ್ನು ನೋಡಿದ ಸ್ಥಳೀಯ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.
ಇತ್ತೀಚೆಗಷ್ಟೇ ನಗರದ ಅತ್ತಿಬೆಲೆ ಸಮೀಪದ ಯಡವನಹಳ್ಳಿ ಬಳಿ ಇರುವ ಶ್ರೀರಾಮ್ ವುಡ್ ಫ್ಯಾಕ್ಟರಿಯಲ್ಲಿ ಇಂದು ನಸುಕಿನ ವೇಳೆ ಅಗ್ನಿ ಅವಘಡ ಸಂಭವಿಸಿದ್ದು, ಕೋಟ್ಯಂತರ ಮೌಲ್ಯದ ವುಡ್ ಸುಟ್ಟು ಕರಕಲಾಗಿತ್ತು.
ಬೆಂಕಿ ಕೆನ್ನಾಲಿಗೆ ಆವರಿಸಿದ ಪರಿಣಾಮ ಕಾರ್ಖಾನೆ ಹೊತ್ತಿ ಉರಿದಿತ್ತು. ಕಾರ್ಖಾನೆಯಲ್ಲಿದ್ದವರಲ್ಲಿ 25 ಕಾರ್ಮಿಕರು ನಾಪತ್ತೆ ಆಗಿದ್ದರು. ಅವರಲ್ಲಿ ಓರ್ವ ಕಾರ್ಮಿಕ ಹೊರಗೆ ಬರಲಾಗದ ಸಜೀವ ದಹನವಾಗಿದ್ದು, ಆತನ ಮೃತದೇಹವನ್ನು ಅಗ್ನಿಶಾಮಕದಳ ತಂಡ ಹೊರತೆದೆದಿದ್ದರು.












Click it and Unblock the Notifications