ದುಬೈಗೆ ಹಾರುವ ಮುನ್ನ 38 ಕೆಜಿ ಚಿನ್ನ ಕರಗಿಸಿದ್ದ ಮನ್ಸೂರ್ ಖಾನ್
ಬೆಂಗಳೂರು, ಆಗಸ್ಟ್ 23 : ಐಎಂಎ ಪ್ರಕರಣ ತನಿಖೆ ನಡೆಸುತ್ತಿರುವ ಎಸ್‌ಐಟಿಗೆ ಮಹತ್ವದ ಮಾಹಿತಿಗಳು ಸಿಕ್ಕಿವೆ. ಹಗರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್ ದುಬೈನಲ್ಲಿರುವ ಸ್ನೇಹಿತನಿಗೆ 9 ಕೋಟಿ ಹಣ ಕೊಟ್ಟಿರುವುದು ಪತ್ತೆಯಾಗಿದೆ.
ದುಬೈಗೆ ಪರಾರಿಯಾಗುವ ಮೊದಲು ಮನ್ಸೂರ್ ಖಾನ್ 38 ಕೆಜಿ ಚಿನ್ನವನ್ನು ಕರಗಿಸಿ ಮಾರಾಟ ಮಾಡಿದ್ದ. ಇದರಿಂದ ಬಂದ ಹಣದಲ್ಲಿ 9 ಕೋಟಿಯನ್ನು ಸ್ನೇಹಿತ ಅಬ್ಬಾಸ್‌ಗೆ ನೀಡಿದ್ದ. ಅಬ್ಬಾಸ್ ದುಬೈನಲ್ಲಿ ವಾಸವಾಗಿದ್ದಾರೆ.
ಚಿನ್ನ ಕರಗಿಸಿರುವ ಹಣವನ್ನು ಹೂಡಿಕೆ ಮಾಡಿರುವ ಅನುಮಾನದ ಮೇಲೆ ಎಸ್‌ಐಟಿ ಮನ್ಸೂರ್ ಖಾನ್ ವಿಚಾರಣೆ ನಡೆಸುವಾಗ ಈ ಕುರಿತು ಮಾಹಿತಿ ಲಭ್ಯವಾಗಿದೆ. ತನಿಖೆಗೆ ಹಾಜರಾಗುವಂತೆ ದುಬೈನಲ್ಲಿರುವ ಅಬ್ಬಾಸ್‌ಗೆ ನೋಟಿಸ್ ನೀಡಲಾಗಿದೆ.

ಸಿಬಿಐ ತನಿಖೆಗೆ ಹಾಜರು : ಕರ್ನಾಟಕ ಸರ್ಕಾರ ಐಎಂಎ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸುವುದಾಗಿ ಘೋಷಣೆ ಮಾಡಿದೆ. ಆದ್ದರಿಂದ, ಅಬ್ಬಾಸ್ ಸಿಬಿಐ ಮುಂದೆ ಹಾಜರಾಗುವ ಸಾಧ್ಯತೆ ಇದೆ.
ಐಎಂಎ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸುವ ವಿಚಾರದಲ್ಲಿ ಪೊಲೀಸ್ ಇಲಾಖೆಯಲ್ಲಿ ಅಸಮಾಧಾನ ಉಂಟಾಗಿದೆ. ಕರ್ನಾಟಕ ಸರ್ಕಾರವೇ ಹಗರಣದ ತನಿಖೆಗೆ ಎಸ್‌ಐಟಿ ರಚನೆ ಮಾಡಿರುವಾಗ, ಸಿಬಿಐ ತನಿಖೆಗೆ ವಹಿಸುವ ಅಗತ್ಯ ಏನಿತ್ತು? ಎಂಬುದು ಪ್ರಶ್ನೆ.
ಐಎಂಎ ಹಗರಣದ ಬಗ್ಗೆ ರಾಜ್ಯಾದ್ಯಂತ ಭಾರಿ ಚರ್ಚೆ ನಡೆದಿತ್ತು. ಇದೊಂದು ಬಹುಕೋಟಿ ರೂಪಾಯಿ ಹಗರಣವಾಗಿದೆ. ರಾಜಕಾರಣಿಗಳು, ಪೊಲೀಸ್ ಅಧಿಕಾರಿಗಳು, ಐಎಎಸ್ ಅಧಿಕಾರಿಗಳು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಶಂಕಿಸಲಾಗಿದೆ.












Click it and Unblock the Notifications