ಸಾಕು ನಾಯಿ ಕೊಂದು, ಬಿರಿಯಾನಿ ಮಾಡುತ್ತಿದ್ದವರ ಬಂಧನ
ಬೆಂಗಳೂರು, ಮೇ 08 : ಸಾಕು ನಾಯಿಯನ್ನು ಕೊಂದು ಬಿರಿಯಾನಿ ಮಾಡುತ್ತಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಬೆಂಗಳೂರಿನ ಕೆ.ಆರ್.ಪುರಂ ಪೊಲೀಸರು ಬಂಧಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬೌಬೌ ಬಿರಿಯಾನಿ ಮಾಡುವ ಫೋಟೋ ವಾಟ್ಸಪ್ ಮೂಲಕ ಹರಿದಾಡಿ, ಸ್ಥಳೀಯರಿಗೆ ಸಿಕ್ಕಿದ್ದರಿಂದ ಬಿರಿಯಾನಿ ಮಾಡಿದವರ ಬಂಧನವಾಗಿದೆ.
ಬಿರಿಯಾನಿ ಮಾಡಲು ಹೋಗಿ ಸಿಕ್ಕಿಬಿದ್ದಿವರನ್ನು ಸುಭಾಷ್ ನಗರದ ದಾಲ್ಜಿನ್ ಮತ್ತು ರೋಮನ್ ಎಂದು ಗುರುತಿಸಲಾಗಿದೆ. ಇಬ್ಬರು ನಗರದ ಖಾಸಗಿ ಕಾಲೇಜಿನಲ್ಲಿ ಅನಿಮೇಷನ್ ಕಲಿಯುತ್ತಿದ್ದರು. ತಮ್ಮ ಮನೆಯ ಸಾಕು ನಾಯಿಯನ್ನೇ ಕೊಂದು ಇವರು ಬಿರಿಯಾನಿ ಮಾಡಲು ಮುಂದಾಗಿದ್ದರು. [ನಾಯಿ, ಮಂಗ ಕಚ್ಚಿದರೆ 2 ಲಕ್ಷ ಪರಿಹಾರ]

ಆಗಿದ್ದಿಷ್ಟು : ಮೇ 5ರ ಮಂಗಳವಾರ ದಾಲ್ಜಿನ್ ಮತ್ತು ರೋಮನ್ ತಮ್ಮ ಮನೆಯ ಸಾಕು ನಾಯಿ ಗಲಾಟೆ ಮಾಡಿದ್ದರಿಂದ ಅದರ ತಲೆಗೆ ಹೊಡೆದಿದ್ದರು. 5 ತಿಂಗಳ ನಾಯಿಮರಿ ಇದರಿಂದಾಗಿ ಮೃತಪಟ್ಟಿತ್ತು. ಅದನ್ನು ಬಿರಿಯಾನಿ ಮಾಡಲು ಸಿದ್ಧತೆ ಆರಂಭಿಸಿದ ಇಬ್ಬರು ಚರ್ಮ ತೆಗೆದು ಅಡುಗೆ ಆರಂಭಿಸಿದ್ದರು. [ತೆಂಗಿನ ಹಾಲು ಬೆರೆಸಿ ಮಾಡಿದ ಚಿಕನ್ ಕರಿ ರೆಸಿಪಿ]
ಬಿರಿಯಾನಿ ಮಾಡುವ ವೇಳೆಗೆ ವಿದ್ಯಾರ್ಥಿಗಳ ಸ್ನೇಹಿತ ಶ್ರೀನ್ ಜಾಯ್ ಮನೆಗೆ ಬಂದಿದ್ದ. ಬೌ ಬೌ ಬಿರಿಯಾನಿ ಮಾಡುವುದು ನೋಡಿ ಅದರ ಫೋಟೋ ತೆಗೆದು ವಾಟ್ಸಪ್ ಮೂಲಕ ಸ್ನೇಹಿತರಿಗೆ ಕಳುಹಿಸಿದ್ದ. ಇದನ್ನು ತಿಳಿದ ಇಬ್ಬರು ಬಿರಿಯಾನಿ ಮಾಡುವುದನ್ನು ನಿಲ್ಲಿಸಿ, ಮಾಂಸವನ್ನು ಬಿಸಾಕಿದ್ದರು. [ಮಂಡ್ಯದಲ್ಲಿ ರಾಮಣ್ಣನ ತಿಥಿ ಮಾಡಿದ ಗ್ರಾಮಸ್ಥರು!]
ಆದರೆ, ವಾಟ್ಸಪ್ ಮೂಲಕ ಹರಿದಾಡಿದ ಚಿತ್ರ ಕೊನೆಗೆ ವಿದ್ಯಾರ್ಥಿಗಳಿದ್ದ ಮನೆಯ ಸಮೀಪವಿದ್ದ ರಾಜು ಗೌಡರಿಗೆ ತಲುಪಿತ್ತು. ಅವರು ಈ ಬಗ್ಗೆ ಕೆ.ಆರ್.ಪುರಂ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು. ದೂರಿನ ಅನ್ವಯ ಪೊಲೀಸರು ಇಬ್ಬರನ್ನು ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ.












Click it and Unblock the Notifications