ಸಿಗ್ನಲ್ ಲೈಟ್‌ನಲ್ಲಿ ಹಾರ್ಟ್ ಚಿಹ್ನೆ: ವಾಹನ ಸವಾರರ ಗೊಂದಲಕ್ಕೆ ಇಲ್ಲಿದೆ ಉತ್ತರ..!
ಬೆಂಗಳೂರು, ಅಕ್ಟೋಬರ್ 11: ಸಂಚಾರ ದಟ್ಟಣೆಗೆ ಹೆಸರುವಾಗಿಯಾಗಿರುವ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಟ್ರಾಫಿಕ್ ಸಿಗ್ನಲ್ ಯಾವಾಗ ಬಿಡುತ್ತದೆಯೋ ಎಂದು ಸಿಗ್ನಲ್‌ಗಳನ್ನೇ ನೋಡುತ್ತಿದ್ದ ವಾಹನ ಸವಾರರು ಹುಬ್ಬೇರಿಸುವಂಥ ಘಟನೆ ನಡೆದಿದೆ. ಇತ್ತೀಚಿಗೆ ಬೆಂಗಳೂರಿನ ಹಲವು ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಹೃದಯ ಚಿಹ್ನೆಯ ಟ್ರಾಫಿಕ್ ಲೈಟ್‌ಗಳು ಮಿನುಗುತ್ತಿದ್ದು, ವಾಹನ ಸವಾರರು ಆಶ್ಚರ್ಯಗೊಂಡಿದ್ದಾರೆ.
ಇನ್ನು ಕೆಲ ವಾಹನ ಸವಾರರು ಹಾಗೂ ಪಾದಾಚಾರಿಗಳು ಹೃದಯ ಚಿಹ್ನೆಯ ಟ್ರಾಫಿಕ್ ಲೈಟ್‌ಗಳ ಫೋಟೋಗಳನ್ನು ತೆಗೆದು ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಒಟ್ಟಾರೆ ಟ್ರಾಫಿಕ್ ಲೈಟ್‌ನ ಹೊಸ ರೂಪ ಕಂಡು ವಾಹನ ಸವಾರರು ಹಾಗೂ ಪಾದಾಚಾರಿಗಳು ಗೊಂದಲಕ್ಕೊಳಗಾಗಿದ್ದಾರೆ.
ಹೃದಯ ಚಿಹ್ನೆಯ ಟ್ರಾಫಿಕ್ ಲೈಟ್‌ಗಳು ಯಾಕೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ. ಜನರಿಗೆ ಉಪಯೋಗವಾಗಲೆಂದು ಬೆಂಗಳೂರು ಮಣಿಪಾಲ ಆಸ್ಪತ್ರೆ, ಬೆಂಗಳೂರು ಸಂಚಾರಿ ಪೊಲೀಸರು ಹಾಗೂ ಬೆಂಗಳೂರು ಮಹಾ ನಗರ ಪಾಲಿಕೆ ಜಂಟಿಯಾಗಿ ಹೊಸ ಕಾರ್ಯಕ್ರಮ ಆರಂಭಿಸಿದ್ದು, ತುರ್ತು ಪರಿಸ್ಥಿತಿಯಲ್ಲಿ ಜನರಿಗೆ ವೈದ್ಯಕೀಯ ಸೌಲಭ್ಯ ಸಿಗುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

ಟ್ರಾಫಿಕ್ ಸಿಗ್ನಲ್ ಲೈಟ್‌ಗಳಲ್ಲಿ ಹೃದಯಾಕಾರದ ಚಿಹ್ನೆ
ಬೆಂಗಳೂರನ್ನು ಹಾರ್ಟ್‌ಸಿಟಿಯನ್ನಾಗಿ ಮಾಡುವ ಉದ್ದೇಶದಿಂದ ವಿಶ್ವ ಹೃದಯದ ದಿನ(ಸೆ.29)ದ ಅಂಗವಾಗಿ ನಗರದ 15 ಟ್ರಾಫಿಕ್ ಸಿಗ್ನಲ್ ಲೈಟ್‌ಗಳಲ್ಲಿ ಹೃದಯಾಕಾರದ ಚಿಹ್ನೆಗಳನ್ನು ಅಳವಡಿಸಲಾಗಿದೆ. ಇನ್ನು ಹೃದಯದ ಆರೋಗ್ಯದ ಬಗ್ಗೆಯ ಜಾಗೃತಿ ಮೂಡಿಸುವ ಆಡಿಯೋ ಸಂದೇಶಗಳನ್ನು ಸಹ ಬೆಂಗಳೂರಿನ ಕೆಲವು ಪ್ರಮುಖ ಪ್ರದೇಶಗಳಲ್ಲಿ ಪ್ಲೇ ಮಾಡಲಾಗುತ್ತದೆ ಎಂದು ಮಣಿಪಾಲ ಆಸ್ಪತ್ರೆ ತಿಳಿಸಿದೆ.

ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಕ್ಯೂ ಆರ್ ಕೋಡ್
ಈ ಬಗ್ಗೆ ಮಣಿಪಾಲ ಆಸ್ಪತ್ರೆ ನೀಡಿರುವ ಮಾಹಿತಿ ಪ್ರಕಾರ, ಜನರಿಗೆ ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಬಳಕೆಯಾಗಲೆಂದು ಬೆಂಗಳೂರು ನಗರದ ಎಲ್ಲಾ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಕ್ಯೂ ಆರ್ ಕೋಡ್‌ಗಳನ್ನು ಅಂಟಿಸಲಾಗಿದೆ. ಬೆಂಗಳೂರಿನ ನಿವಾಸಿಗಳು ತುರ್ತು ಸಂದರ್ಭಗಳಲ್ಲಿ ಈ ಕ್ಯೂ ಆರ್ ಕೋಡ್‌ಗಳನ್ನು ಸ್ಕ್ಯಾನ್ ಮಾಡುವ ಮೂಲಕ ವೈದ್ಯಕೀಯ ತುರ್ತು ಸೇವೆಗಳನ್ನು ಪಡೆಯಬಹುದಾಗಿದೆ.

ಜನರ ಗೊಂದಲಕ್ಕೆ ವಿವರಣೆ ನೀಡಿದ ಮಣಿಪಾಲ ಆಸ್ಪತ್ರೆ
ತುರ್ತು ಸಂಖ್ಯೆಯನ್ನು ಡಯಲ್ ಮಾಡಿ ಸೇವೆಗಳನ್ನು ಪಡೆಯಲು ಜನರು ಕಾಯುವ ಬದಲು ಕ್ಯೂ ಆರ್ ಕೋಡ್‌ಗಳನ್ನು ಸ್ಕ್ಯಾನ್ ಮಾಡುವ ಮೂಲಕ ಜನರು ಬಹುಬೇಗ ವೈದ್ಯಕೀಯ ಸೇವೆಗಳನ್ನು ಹಾಗೂ ಆ್ಯಂಬುಲೆನ್ಸ್ ಸೇವೆಯನ್ನು ಕೂಡ ಅತೀ ಶೀಘ್ರದಲ್ಲಿ ಪಡೆಯಬಹುದು ಎಂದು ತಿಳಿಸಿದೆ. ಈ ವಿಚಾರವನ್ನು ಮಣಿಪಾಲ ಆಸ್ಪತ್ರೆ ತಮ್ಮ ಅಧೀಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಹೃದಯ ಚಿಹ್ನೆಯ ಟ್ರಾಫಿಕ್ ಲೈಟ್‌ಗಳ ಬಗ್ಗೆ ಗೊಂದಲಕ್ಕೊಳಗಾಗಿರುವ ವಾಹನ ಸವಾರರಿಗೆ ವಿವರಣೆ ನೀಡಿದೆ.

ನಿಯಮ ಪಾಲಿಸುವಂತೆ ಸಂಚಾರಿ ಪೊಲೀಸರ ಮನವಿ
ಹೃದಯ ಚಿಹ್ನೆಯ ಟ್ರಾಫಿಕ್ ಲೈಟ್‌ಗಳ ಬಗ್ಗೆ ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿದ್ದು, ಪ್ರತಿಯೊಬ್ಬರ ಜೀವವೂ ಅತ್ಯಮೂಲ್ಯವಾದದ್ದು ಎನ್ನುವುದನ್ನು ಹೃದಯ ಚಿಹ್ನೆಯ ಟ್ರಾಫಿಕ್ ಲೈಟ್‌ಗಳು ಸೂಚಿಸಿಸುತ್ತವೆ ಎಂದರು.
ಈ ಬಗ್ಗೆ ಮಾತು ಮುಂದುವರಿಸಿದ ಅವರು, ''ವಾಹನ ಸವಾರರು ಸಂಚಾರಿ ನಿಯಮಗಳನ್ನು ಪಾಲಿಸಬೇಕು. ವಾಹನ ಸವಾರರು ಅತೀ ವೇಗವಾಗಿ ಚಲಿಸಬಾರದು, ಸಿಗ್ನಲ್ ಜಂಪ್ ಮಾಡಬಾರದು. ವಾಹನ ಸವಾರರು ತಾವು ಸುರಕ್ಷಿತವಾಗಿ ಮನೆಗೆ ವಾಪಸ್ ಆಗುವ ನಿರೀಕ್ಷೆಯಲ್ಲಿ ಕಾಯುತ್ತಿರರುವ ಬಗ್ಗೆ ಯೋಚಿಸಬೇಕು. ಸಂಚಾರಿ ನಿಯಮಗಳನ್ನು ಪಾಲಿಸುವ ಮೂಲಕ ತಮ್ಮ ಸುರಕ್ಷತೆಯನ್ನು ಕಾಪಾಡಿಕೊಳ್ಳಬೇಕು'' ಎಂದು ಹೇಳಿದ್ದಾರೆ.












Click it and Unblock the Notifications