Bengaluru Metro: ಬೆಂಗಳೂರು ಮೆಟ್ರೋದಲ್ಲಿ ಫೋಟೋ ತೆಗೆದವನಿಗೆ ಪಾಠ ಕಲಿಸಿದ ಯುವತಿ!
ಮೆಟ್ರೋದಲ್ಲಿ ಚಿತ್ರವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಇದೀಗ ನಮ್ಮ ಮೆಟ್ರೋದಲ್ಲಿ ವಿಚಿತ್ರವಾಗಿ ವರ್ತಿಸಿದ ವ್ಯಕ್ತಿಗೆ ಮಹಿಳೆಯೊಬ್ಬರು ಕಪಾಳಕ್ಕೆ ಬಾರಿಸುವ ಮೂಲಕ ಬುದ್ಧಿ ಕಲಿಸಿದ್ದಾರೆ. ಬೆಂಗಳೂರು ಮೆಟ್ರೋ ಸೇವೆ ಬಳಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಇದೀಗ ಬೆಂಗಳೂರಿನಲ್ಲಿ ಹೊಸ ಹೊಸ ಮೆಟ್ರೋ ಸೇವೆ ಪ್ರಾರಂಭವಾಗುತ್ತಿದೆ. ಈ ರೀತಿ ಇರುವಾಗಲೇ ಮೆಟ್ರೋದಲ್ಲಿ ಪುಂಡರ ಪುಂಡಾಟ ಹೆಚ್ಚಳವಾಗುತ್ತಿದೆ.
ಮೆಟ್ರೋದಲ್ಲಿ ಇತ್ತೀಚಿಗೆ ಇದೇ ರೀತಿಯ ಘಟನೆಯೊಂದು ನಡೆದಿದೆ. ಇದಕ್ಕೆ ಮಹಿಳೆ ಹಾಗೂ ಪೊಲೀಸರು ಸರಿಯಾಗಿಯೇ ಬುದ್ಧಿಕಲಿಸಿದ್ದಾರೆ. ಚಲಿಸುತ್ತಿದ್ದ ಮೆಟ್ರೋ ರೈಲಿನಲ್ಲಿ ಜನ ಕಿಕ್ಕಿರಿದು ಸೇರಿದ್ದರು ಈ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಫೋಟೋ ಕ್ಲಿಕ್ಕಿಸಿದ್ದಾನೆ ಆತನ ಅಸಭ್ಯ ವರ್ತನೆಯನ್ನು ಗಮನಿಸಿದ ಮಹಿಳೆ ಅಲರ್ಟ್ ಆಗಿದ್ದಾರೆ.

ಬೆಂಗಳೂರು ಮೆಟ್ರೋದಲ್ಲಿ ಸಾವಿರಾರು ಜನ ಪ್ರಯಾಣಿಸುತ್ತಿರುತ್ತಾರೆ. ಸಿಸಿ ಕ್ಯಾಮೆರಾ ಹಾಗೂ ಭದ್ರತಾ ಸಿಬ್ಬಂದಿ ಸೇರಿದಂತೆ ಹಲವು ಮುಂಜಾಗ್ರತಾ ಕ್ರಮಗಳ ಹೊರತಾಗಿಯೂ ಬೆಂಗಳೂರಿನ ಮೆಟ್ರೋದಲ್ಲಿ ಅಹಿತಕರ ಘಟನೆ ನಡೆದಿರುವುದು ವರದಿಯಾಗಿದೆ. ಇದೀಗ ಈ ರೀತಿ ಅಸಭ್ಯವಾಗಿ ವರ್ತನೆ ಮಾಡಿದ ವ್ಯಕ್ತಿಯನ್ನು ಬಂಧಿಸುವಲ್ಲಿ ಬೆಂಗಳೂರಿನ ಜಯನಗರದ ಪೊಲೀಸರು ಯಶಸ್ವಿಯಾಗಿದ್ದಾರೆ.
ಘಟನೆಯ ಹಿನ್ನೆಲೆ ಏನು: ಬೆಂಗಳೂರಿನಲ್ಲಿ ಚಲಿಸುತ್ತಿದ್ದ ಮೆಟ್ರೋದಲ್ಲಿ ಮಹೇಶ್ ಎನ್ನುವ ವ್ಯಕ್ತಿ ಪೋಟೋಗಳನ್ನು ಕ್ಲಿಕ್ಕಿಸುತ್ತಿದ್ದ ಎಂದು ಹೇಳಲಾಗಿದೆ. ಈ ರೀತಿ ಆತ ಫೋಟೋಗಳನ್ನು ಕ್ಲಕ್ಕಿಸುವುದಕ್ಕೆ ಮಹಿಳೆಯೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಆತ ಮಹಿಳೆಯ ಮುಖ ಹಾಗೂ ಯುವತಿಯರ ಖಾಸಗಿ ಅಂಗಗಳ ಫೋಟೋ ತೆಗೆದಿದ್ದಾನೆ ಎಂದು ಹೇಳಲಾಗಿದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಮಹಿಳೆ ಆತನ ಮೇಲೆ ತಿರುಗಿ ಬಿದಿದ್ದಾರೆ. ಕೂಡಲೇ ಪೊಲೀಸರಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ. ಅಷ್ಟೇ ಅಲ್ಲ ಆತನ ಕಪಾಳಕ್ಕೆ ಬಾರಿಸಿದ್ದಾರೆ.
ಈ ಘಟನೆಯನ್ನು ಗಮನಿಸಿದ ಮೆಟ್ರೋದ ಸಿಬ್ಬಂದಿ ಕೂಡಲೇ ಮಹಿಳೆಯ ಸಹಾಯಕ್ಕೆ ಬಂದಿದ್ದಾರೆ. ಮಹಿಳೆಯೊಬ್ಬರು ಕೆಲಸ ಮುಗಿಸಿಕೊಂಡು ಹೋಗುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.
ಕಾಮುಕನ ಫೋನ್‌ನಲ್ಲಿತ್ತು ಹಲವು ವಿಡಿಯೋ: ಇನ್ನು ಈ ಕಾಮುಕನ ಫೋನ್‌ನಲ್ಲಿ ಈ ರೀತಿ ಮಹಿಳೆಯರು ಹಾಗೂ ಯುವತಿಯರಿಗೆ ಸಂಬಂಧಿಸಿದ ಹಲವು ವಿಡಿಯೋ ಹಾಗೂ ಫೋಟೋಗಳು ಇರುವುದನ್ನು ಪೊಲೀಸರು ಗಮನಿಸಿದ್ದಾರೆ. ಕೂಡಲೇ ಅವುಗಳನ್ನು ಡಿಲೀಟ್ ಮಾಡಿಸಲಾಗಿದೆ. ಅಲ್ಲದೆ ಆತನನ್ನು ಬಂಧಿಸುವುದರ ಜೊತೆಗೆ 5,000 ಸಾವಿರ ರೂಪಾಯಿ ದಂಡವನ್ನು ಸಹ ವಿಧಿಸಲಾಗಿದೆ ಎಂದು ಹೇಳಲಾಗಿದೆ.
ಆಕ್ಷೇಪ: ಮೆಟ್ರೋದಲ್ಲಿ ಇತ್ತೀಚಿನ ದಿನಗಳಲ್ಲಿ ರೀಲ್ಸ್ ಮಾಡುವುದು ಹಾಗೂ ಕೀಟಲೆ ಮಾಡುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಯೂಟ್ಯೂಬರ್‌ವೊಬ್ಬ ಮೆಟ್ರೋದಲ್ಲಿ ಟಿಕೆಟ್ ಇಲ್ಲದೆ ಪ್ರಯಾಣ ಮಾಡುವುದು ಹೇಗೆ ಎನ್ನುವ ವಿಡಿಯೋವೊಂದನ್ನು ಮಾಡಿ ಸೋಷಿಯಲ್ ಮೀಡಿಯಾ ಹಾಗೂ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ್ದ ಇದಕ್ಕೂ ಭಾರೀ ವಿರೋಧ ವ್ಯಕ್ತವಾಗಿತ್ತು. ಇದಾದ ಮೇಲೆ ಮೆಟ್ರೋದ ಸಿಬ್ಬಂದಿ ಸಹ ಸಾಕಷ್ಟು ಅಲರ್ಟ್ ಆಗಿದ್ದಾರೆ. ಈ ರೀತಿ ಇರುವಾಗಲೇ ಮೆಟ್ರೋದಲ್ಲಿ ಮತ್ತೊಂದು ಅಹಿತಕರ ಘಟನೆ ನಡೆದಿರುವುದು ವರದಿಯಾಗಿದೆ.












Click it and Unblock the Notifications