ಬೆಂಗಳೂರಿನಲ್ಲಿ ಹೆಚ್ಚಾಗುತ್ತಿವೆ ಪ್ರೇಮ ವೈಫಲ್ಯದ ಅಪರಾಧಗಳು: ಮತ್ತೊಂದು ಘಟನೆ ವರದಿ
ಇತ್ತೀಚೆಗೆ ಮದುವೆಯಾಗಲು ನಿರಾಕರಿಸಿದ್ದ 25 ವರ್ಷದ ಯುವತಿಯನ್ನು ಮುರುಗೇಶಪಾಳ್ಯದಲ್ಲಿ ತನ್ನ ಕಚೇರಿಯ ಹೊರಗೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.
ಬೆಂಗಳೂರು, ಮಾರ್ಚ್ 09: ಸಿಲಿಕಾನ್ ಸಿಟಿಯಲ್ಲಿ ಕಳೆದ ಮೂರು ತಿಂಗಳಲ್ಲಿ, ಪ್ರೇಮ ವೈಪಲ್ಯದಿಂದಾಗಿ ಯುವತಿಯರ ಮೇಲೆ ಯುವಕರು ಹಲ್ಲೆ, ದಾಳಿ ನಡೆಸಿರುವ ಘಟನೆಗಳು ಪದೇ ಪದೇ ವರದಿಯಾಗುತ್ತಿವೆ. ಮೂರು ತಿಂಗಳಲ್ಲಿ ಒಟ್ಟು ಮೂರು ಘಟನೆಗಳು ನಡೆದಿದ್ದು, ಮೂವರು ಮಹಿಳೆಯರ ಸಾವಿಗೆ ಕಾರಣವಾಗಿದೆ.
ಬೆಂಗಳೂರಿನ ಎಚ್‌ಆರ್‌ಬಿಆರ್ ಲೇಔಟ್‌ನಲ್ಲಿ ಮಾರ್ಚ್ 2 ರಂದು ಬ್ರೇಕ್‌ಅಪ್ ಆದ ಕಾರಣ ಕೋಪದಲ್ಲಿದ್ದ ವ್ಯಕ್ತಿ ತನ್ನ ಮಾಜಿ ಪ್ರೇಯಸಿ ಕೆಲಸ ಮಾಡುವ ಸ್ಥಳದ ಬಳಿ ಕಾಯುತ್ತಾ, ಆಕೆ ಹೊರ ಬಂದ ತಕ್ಷಣ ಆಕೆಯ ಮುಖಕ್ಕೆ ಚಾಕುವಿಂದ ಹಲ್ಲೆ ಮಾಡಿ ಗಾಯಗೊಳಿಸದ್ದಾನೆ. ಹಲ್ಲೆ ನಡೆಸಿದ ತಕ್ಷಣ ಸ್ಥಳದಿಂದ ಪರಾರಿಯಾಗಿದ್ದು, ಪೂರ್ವ ವಿಭಾಗದ ಪೊಲೀಸರು ಆರೋಪಿ ಯುವಕನನ್ನು ಹುಡುಕುತ್ತಿದ್ದಾರೆ.

ಘಟನೆ ಬಗ್ಗೆ 30 ವರ್ಷದ ಯುವತಿ ಪೊಲೀಸ್ ದೂರು ದಾಖಲಿಸಿದ್ದಾರೆ. ಮಾರ್ಚ್ 2 ರಂದು ಖಾಸಗಿ ಸಂಸ್ಥೆಯೊಂದರಲ್ಲಿ ಟೆಲಿ ಕಾಲರ್ ಆಗಿ ಕೆಲಸ ಮಾಡುತ್ತಿರುವ ಯುವತಿಯ ಮೇಲೆ ಅವಿನಾಶ್ ಎಂದು ಗುರುತಿಸಲಾದ ಯುವಕ ಹಲ್ಲೆ ನಡೆಸಿದ್ದಾನೆ ಎಂದು ಹೇಳಲಾಗಿದೆ. ಇಬ್ಬರು ಎರಡು ವರ್ಷಗಳಿಂದ ಸಂಬಂಧದಲ್ಲಿದ್ದು, ಇತ್ತೀಚೆಗೆ ಸಂಬಂಧ ಮುರಿದುಕೊಂಡಿದ್ದರು. ಇದರಿಂದಾಗಿ ಕೋಪಗೊಂಡಿದ್ದ ಆತ ಆಕೆಯ ಮುಖದ ಮೇಲೆ ಚಾಕುವಿನಿಂದ ಕೊಯ್ದು ತನ್ನ ಬೈಕ್‌ನಲ್ಲಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ದಾಖಲಾಗಿರುವ ಪೊಲೀಸ್ ದೂರಿನಲ್ಲಿ, ಬಾಣಸವಾಡಿ ಪ್ರದೇಶದಲ್ಲಿ ಪೇಯಿಂಗ್ ಗೆಸ್ಟ್‌ನಲ್ಲಿರುವ ಚಿಕ್ಕಮಗಳೂರು ಭಾಗದ ಯುವತಿ, ತಮ್ಮ ಸಂಬಂಧ ಮುರಿಯುವ ನಿರ್ಧಾರ ಮತ್ತು ಆತನ ಕರೆಗಳನ್ನು ಸ್ವೀಕರಿಸದ ಕಾರಣ ಅವಿನಾಶ್ ಕೋಪಗೊಂಡಿದ್ದರು. ಬೇರೆ ಯಾರೊಂದಿಗೂ ಸಂಬಂಧ ಇಟ್ಟುಕೊಳ್ಳಬಾರದು ಎಂದು ಹೇಳಿ ತನ್ನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿದ್ದಾರೆ.
"ನಾವು ಆರೋಪಿಯನ್ನು ಹುಡುಕುತ್ತಿದ್ದೇವೆ. ಆತನ ಕುಟುಂಬದವರನ್ನು ವಿಚಾರಣೆ ನಡೆಸಿದ್ದೇವೆ" ಎಂದು ಬೆಂಗಳೂರಿನ ಪೂರ್ವ ವಿಭಾಗದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ, ನಗರದಲ್ಲಿ ಪದೇ ಪದೇ ಇಮತಹ ಘಟನೆಗಳು ನಡೆಯುತ್ತಿದ್ದು, ಸಾರ್ವಜನಿಕ ಪ್ರದೇಶಗಳಲ್ಲಿ ಮಹಿಳೆಯರ ಮೇಲೆ ಹಲ್ಲೆ ನಡೆಯುತ್ತಿರುವುದನ್ನು ನೋಡಿ ಸಿಲಿಕಾನ್ ಸಿಟಿ ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಫೆಬ್ರವರಿ 28 ರಂದು, ಮದುವೆಯಾಗಲು ನಿರಾಕರಿಸಿದ್ದ ಆಂಧ್ರಪ್ರದೇಶದ 25 ವರ್ಷದ ಯುವತಿಯನ್ನು ಆಗ್ನೇಯ ಬೆಂಗಳೂರಿನಲ್ಲಿರುವ ತನ್ನ ಕಚೇರಿಯ ಹೊರಗೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಮೃತ ಲೀಲಾ ಪವಿತ್ರಾ ಅವರಿಗೆ ಐದು ವರ್ಷಗಳಿಂದ ಪರಿಚಯವಿದ್ದ ಆಂಧ್ರಪ್ರದೇಶ ಮೂಲದ ದಿನಕರ್ ಎಸ್ (28) ಎಂಬಾತ ಮುರುಗೇಶಪಾಳ್ಯದಲ್ಲಿ ಕೊಲೆ ಮಾಡಿದ್ದರು.
ಜನವರಿ 18 ರಂದು ಬೆಂಗಳೂರು ಹೊರವಲಯದ ರಾಜನಕುಂಟೆ ಪ್ರದೇಶದಲ್ಲಿ 19 ವರ್ಷದ ಕಾಲೇಜು ಯುವತಿಯನ್ನು ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದು ಕೊಂದಿದ್ದರು. ಯಲಹಂಕದ ಸರ್ಕಾರಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಎ ವಿದ್ಯಾರ್ಥಿನಿಯಾಗಿದ್ದ ರಾಶಿ ವಿ ಮೃತ ಯುವತಿ. ಚಾಲಕನಾಗಿ ಕೆಲಸ ಮಾಡುತ್ತಿದ್ದ ಯಲಹಂಕದ ನಿವಾಸಿ ಮಧುಚಂದ್ರ (32) ಎಂಬಾತನ ಜೊತೆ ಸುಮಾರು 18 ತಿಂಗಳ ಕಾಲ ಆಕೆ ಸಂಬಂಧ ಹೊಂದಿದ್ದಳು ಎಂದು ವರದಿಯಾಗಿದೆ. ಚಂದ್ರು ಅವರನ್ನು ಬೆಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಜನವರಿ 2 ರಂದು ಪ್ರೆಸಿಡೆನ್ಸಿ ಕಾಲೇಜಿನ ಆವರಣದಲ್ಲಿ ಬಿಟೆಕ್ ಪ್ರಥಮ ವರ್ಷದ ವಿದ್ಯಾರ್ಥಿನಿ ಲಯಸ್ಮಿತಾ (19) ಅವರನ್ನು ದೂರದ ಸಂಬಂಧಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದರು. ಆರೋಪಿ ಪವನ್ ಕಲ್ಯಾಣ್ ಬೆಂಗಳೂರಿನ ನೃಪತುಂಗ ವಿಶ್ವವಿದ್ಯಾಲಯದಲ್ಲಿ ಪ್ರಥಮ ವರ್ಷದ ಬಿಸಿಎ ವಿದ್ಯಾರ್ಥಿಯಾಗಿದ್ದ. ಆತನನ್ನು ಪ್ರೀತಿಸಲು ಒಪ್ಪದ ಕಾರಣ ಆಕೆನ್ನು ಕೊಂದು ತಾನು ಸಾಯಲು ಹೊರಟ್ಟಿದ್ದ ಆರೋಪಿ ಕಲ್ಯಾಣ್. ಪೊಲೀಸರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಆತನ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತಿದೆ.












Click it and Unblock the Notifications