ಮೊಬೈಲ್ ವಾಪಸ್ ಕೊಡಲು 3000 ರೂ. ಡಿಮ್ಯಾಂಡ್ ಮಾಡಿದ ರ್‍ಯಾಪಿಡೋ ಚಾಲಕ: ಬೆಂಗ್ಳೂರು ಪೊಲೀಸರ ಕಾರ್ಯಕ್ಕೆ ನೆಟ್ಟಿಗರ ಸಲಾಂ!
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆಟೋ, ಕ್ಯಾಬ್ ಚಾಲಕರ ವರ್ತನೆಗಳ ಬಗ್ಗೆ ಆಗಾಗ ದೂರುಗಳು ಕೇಳಿಬರುತ್ತಲೇ ಇರುತ್ತವೆ. ಆದರೆ, ಈ ನಡುವೆ ಕಳೆದುಹೋದ ಮೊಬೈಲ್ ಒಂದನ್ನ ಹಿಂದಿರುಗಿಸಲು ರ್‍ಯಾಪಿಡೋ ಚಾಲಕನೊಬ್ಬ ಬರೋಬ್ಬರಿ 3,000 ರೂಪಾಯಿ ಬೇಡಿಕೆಯಿಟ್ಟಾಗ, ನೆರವಿಗೆ ಧಾವಿಸಿದ ಬೆಂಗಳೂರು ಪೊಲೀಸರು ಆತನಿಗೆ ಬಿಸಿ ಮುಟ್ಟಿಸಿ ಫೋನ್ ವಾಪಸ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಠಾಣೆಯಲ್ಲಿ ಪೊಲೀಸರು ತೋರಿದ ಸೌಜನ್ಯ ಹಾಗೂ ಸ್ಪಂದನೆಗೆ ಪರವೂರಿನ ಯುವಕನೊಬ್ಬ ಮನಸೋತಿದ್ದು, ಸಾಮಾಜಿಕ ಜಾಲತಾಣ ರೆಡ್ಡಿಟ್‌ನಲ್ಲಿ ತನ್ನ ಅನುಭವವನ್ನ ಹಂಚಿಕೊಂಡು ಪೊಲೀಸರಿಗೆ ಬಹುಪರಾಕ್ ಅಂದಿದ್ದಾನೆ.

ರ್‍ಯಾಪಿಡೋ ಚಾಲಕನಿಂದ ಸುಲಿಗೆ ಯತ್ನ
ವ್ಯಾಪಾರ ನಿಮಿತ್ತ ಯುವಕನೊಬ್ಬ ತನ್ನ ಮ್ಯಾನೇಜರ್ ಜೊತೆಗೆ ಬೆಂಗಳೂರಿಗೆ ಬಂದಿದ್ದ. ಕೆಲಸ ಮುಗಿಸಿದ ಬಳಿಕ ಮಂಡಿ ಬಿರಿಯಾನಿ ಸವಿಯುವ ಉದ್ದೇಶದಿಂದ ಇಬ್ಬರೂ ರ್‍ಯಾಪಿಡೋ ಕ್ಯಾಬ್ ಬುಕ್ ಮಾಡಿ ಯಲಹಂಕಕ್ಕೆ ತೆರಳಿದ್ದರು. ರೆಸ್ಟೋರೆಂಟ್ ತಲುಪಿದ ಬಳಿಕ ಮ್ಯಾನೇಜರ್ ತನ್ನ ಮೊಬೈಲ್ ಫೋನ್ ಅನ್ನಾ ಕ್ಯಾಬ್‌ನಲ್ಲೇ ಬಿಟ್ಟು ಬಂದಿರುವುದು ಅರಿವಿಗೆ ಬಂದಿದೆ. ತಕ್ಷಣವೇ ಬೇರೆ ಫೋನ್‌ನಿಂದ ಚಾಲಕನಿಗೆ ಕರೆ ಮಾಡಿದಾಗ, ಆತ ಮೊದಲು ತನ್ನ ಬಳಿ ಫೋನ್ ಇಲ್ಲ ಎಂದಿದ್ದ. ಸ್ವಲ್ಪ ಹೊತ್ತಿನ ಬಳಿಕ ಫೋನ್ ಇರುವುದಾಗಿ ಒಪ್ಪಿಕೊಂಡ.
ಆದರೆ, ಫೋನ್ ಅನ್ನು ಪಡೆದುಕೊಳ್ಳಲು ತಾವು ಸ್ವಿಗ್ಗಿ ಜಿನಿ ಕಳುಹಿಸುವುದಾಗಿ ಹೇಳಿದರೂ ಆತ ಒಪ್ಪಲಿಲ್ಲ. ತಾನಿರುವಲ್ಲಿಗೆ ಬಂದು ಪಡೆಯುವುದಾಗಿ ಹೇಳಿದರೂ, ತಾನು ಅಲ್ಲಿರುವುದಿಲ್ಲ ಎಂದು ಸಬೂಬು ಹೇಳಲಾರಂಭಿಸಿದ. ಕೊನೆಗೆ, "ಫೋನ್ ತಂದುಕೊಡಬೇಕಾದರೆ ನನಗೆ ಬರಬೇಕಿದ್ದ 4,000 ರೂಪಾಯಿ ಮೌಲ್ಯದ ಟ್ರಿಪ್ ಕ್ಯಾನ್ಸಲ್ ಆಗುತ್ತದೆ. ಹೀಗಾಗಿ ಆ ನಷ್ಟವನ್ನು ಭರಿಸಲು ನನಗೆ 3,000 ರೂಪಾಯಿ ನೀಡಬೇಕು" ಎಂದು ಡಿಮ್ಯಾಂಡ್ ಮಾಡಿದ್ದಾನೆ.
ಚಿಕ್ಕಜಾಲ ಪೊಲೀಸ್ ಠಾಣೆಯ ನೆರವು
ಚಾಲಕನ ಈ ವರ್ತನೆಯಿಂದ ರೋಸಿಹೋದ ಆ ಇಬ್ಬರು ಮಧ್ಯಾಹ್ನ 1 ಗಂಟೆಯಿಂದ 4 ಗಂಟೆಯವರೆಗೆ ಆತನೊಂದಿಗೆ ಸಂಧಾನ ನಡೆಸಲು ಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಗೆ ಬೇರೆ ದಾರಿಯಿಲ್ಲದೆ ಅವರು ನೇರವಾಗಿ ಚಿಕ್ಕಜಾಲ ಪೊಲೀಸ್ ಠಾಣೆಯ ಮೆಟ್ಟಿಲೇರಿದರು. ತ
ಮಗೆ ಕನ್ನಡ ಬಾರದೆ ಇರುವುದರಿಂದ ಪೊಲೀಸರು ಹೇಗೆ ಸ್ಪಂದಿಸುತ್ತಾರೋ ಎಂಬ ಆತಂಕ ಅವರಲ್ಲಿತ್ತು. ಆದರೆ ಠಾಣೆಯಲ್ಲಿದ್ದ ಪೊಲೀಸರು ಹಿಂದಿಯಲ್ಲೇ ಅವರ ಸಮಸ್ಯೆಯನ್ನ ಅತ್ಯಂತ ತಾಳ್ಮೆಯಿಂದ ಆಲಿಸಿ, ತಕ್ಷಣವೇ ರ್‍ಯಾಪಿಡೋ ಚಾಲಕನಿಗೆ ಕರೆ ಮಾಡಿದರು.
"ಕೂಡಲೇ ಫೋನ್ ಅನ್ನು ಠಾಣೆಗೆ ತಂದು ಒಪ್ಪಿಸಬೇಕು, ಇಲ್ಲವಾದರೆ ನಿನ್ನ ವಾಹನವನ್ನು ಜಪ್ತಿ ಮಾಡಿ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ" ಎಂದು ಪೊಲೀಸರು ತಮ್ಮದೇ ಶೈಲಿಯಲ್ಲಿ ಖಡಕ್ ವಾರ್ನಿಂಗ್ ನೀಡಿದರು.
ಕಳೆದುಹೋದ ಮೊಬೈಲ್ ವಾಪಸ್
ಪೊಲೀಸರು ವಾರ್ನಿಂಗ್ ನೀಡುತ್ತಿದ್ದಂತೆಯೇ ಹೆದರಿದ ಚಾಲಕ, ತಕ್ಷಣವೇ ಫೋನ್ ಹಿಂದಿರುಗಿಸಲು ಒಪ್ಪಿಕೊಂಡ. ತಾವು ಚಾಲಕನಿಗೆ ತೊಂದರೆ ಕೊಡುವ ಉದ್ದೇಶ ಹೊಂದಿಲ್ಲ, ಕೇವಲ ಫೋನ್ ಸಿಕ್ಕರೆ ಸಾಕು ಎಂದು ಯುವಕರು ಪೊಲೀಸರಿಗೆ ತಿಳಿಸಿದರು. ಹೀಗಾಗಿ ತಾವು ಮೊದಲೇ ಹೇಳಿದಂತೆ ಸ್ವಿಗ್ಗಿ ಜಿನಿ ಮೂಲಕವೇ ಫೋನ್ ಕಳುಹಿಸಿಕೊಡುವಂತೆ ಪೊಲೀಸರು ಆತನಿಗೆ ಸೂಚಿಸಿದರು.
ವಿಶೇಷವೆಂದರೆ, ಆ ಚಾಲಕ ಕೇವಲ 5 ಕಿಲೋಮೀಟರ್ ದೂರದಲ್ಲಿದ್ದರೂ 3,000 ರೂಪಾಯಿಗಾಗಿ ಆಟವಾಡಿಸುತ್ತಿದ್ದ. ಆತ ಮೊದಲೇ ಸರಿಯಾಗಿ ಸ್ಪಂದಿಸಿ ತಂದುಕೊಟ್ಟಿದ್ದರೆ ನಾವೇ ಖುಷಿಯಿಂದ 500 ರೂಪಾಯಿ ನೀಡುತ್ತಿದ್ದೆವು ಎಂದು ಯುವಕ ಹೇಳಿಕೊಂಡಿದ್ದಾನೆ.

ರೆಡ್ಡಿಟ್‌ನಲ್ಲಿ ಬೆಂಗಳೂರು ಪೊಲೀಸರಿಗೆ ಪ್ರಶಂಸೆ
ಈ ಇಡೀ ಘಟನೆಯನ್ನ ಯುವಕ 'r/Bangalore' ರೆಡ್ಡಿಟ್ ಖಾತೆಯಲ್ಲಿ ಬರೆದುಕೊಂಡಿದ್ದಾನೆ. "ನಮಗೆ ಭಾಷೆ ಬಾರದಿದ್ದರೂ ನಮ್ಮನ್ನ ವಾಪಸ್ ಕಳುಹಿಸದೆ, ಅತ್ಯಂತ ತಾಳ್ಮೆಯಿಂದ ನಮ್ಮ ಸಮಸ್ಯೆ ಆಲಿಸಿ ಸಹಾಯ ಮಾಡಿದ ಚಿಕ್ಕಜಾಲ ಠಾಣೆಯ ಪೊಲೀಸರಿಗೆ ನನ್ನದೊಂದು ಸೆಲ್ಯೂಟ್" ಎಂದು ಆತ ಬರೆದಿದ್ದಾನೆ.
ಈ ಪೋಸ್ಟ್ ಇದೀಗ ವೈರಲ್ ಆಗಿದ್ದು, ನೂರಾರು ನೆಟ್ಟಿಗರು ಪೊಲೀಸರ ಕಾರ್ಯವನ್ನು ಹೊಗಳಿದ್ದಾರೆ. "ಇಂತಹ ಘಟನೆಗಳು ಬೆಂಗಳೂರು ಪೊಲೀಸರ ಮೇಲಿನ ನಮ್ಮ ನಂಬಿಕೆಯನ್ನ ಮತ್ತಷ್ಟು ಹೆಚ್ಚಿಸುತ್ತವೆ. ಮಾನವೀಯತೆ ಇನ್ನೂ ಜೀವಂತವಾಗಿದೆ ಎನ್ನಲು ಇಂತಹ ಅಧಿಕಾರಿಗಳೇ ಕಾರಣ" ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ.


Click it and Unblock the Notifications
