Bengaluru Traffic Fine: ₹80,000 ಸ್ಕೂಟರ್‌ಗೆ ₹1,61,500 ಟ್ರಾಫಿಕ್ ದಂಡ ಕಟ್ಟಿದ ಆಸಾಮಿ
ಇದು ಡಿಜಿಟಲ್ ಯುಗ, ಎಲ್ಲಾ ಕ್ಷೇತ್ರಗಳಲ್ಲೂ ಡಿಜಿಟಲ್ ತಂತ್ರಜ್ಞಾನದ ಬಳಕೆ ಹೆಚ್ಚಾಗುತ್ತಿದೆ. ಬೆಂಗಳೂರು ಟ್ರಾಫಿಕ್ ಪೊಲೀಸರು ಕೂಡ ಸಂಚಾರಿ ನಿಯಮಗಳ ಉಲ್ಲಂಘನೆಗಳ ಮೇಲೆ ಕಣ್ಣಿಡಲು ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ನಿಯಮ ಉಲ್ಲಂಘಿಸಿ ಪೊಲೀಸರ ಬಳಿ ಸಬೂಬು ಹೇಳಿ ತಪ್ಪಿಸಿಕೊಳ್ಳುವಂತೆ ಕ್ಯಾಮರಾ ಕಣ್ಣಿಂದ ತಪ್ಪಿಸಿಕೊಳ್ಳಲು ಆಗದು, ಇದೀಗ ಬೆಂಗಳೂರಿನ ವ್ಯಕ್ತಿಯೊಬ್ಬ ಟ್ರಾಫಿಕ್ ನಿಯಮ ಉಲ್ಲಂಘನೆಗಾಗಿ ಬರೋಬ್ಬರಿ 1.61 ಲಕ್ಷ ರೂಪಾಯಿ ದಂಡ ಕಟ್ಟಿದ್ದಾರೆ.
ಸುಮಾರು 80,000 ರೂಪಾಯಿ ಮೌಲ್ಯದ ಗಾಡಿಯಲ್ಲಿ ಓಡಾಡುತ್ತಿದ್ದ ವ್ಯಕ್ತಿಯೊಬ್ಬ, ಟ್ರಾಫಿಕ್ ನಿಯಮಗಳಿಗೂ ನನಗೂ ಸಂಬಂಧವೇ ಇಲ್ಲ ಎನ್ನುವಂತೆ ಓಡಾಡಿದ್ದು, ಸಿಕ್ಕ ಸಿಕ್ಕ ಕಡೆ ಟ್ರಾಫಿಕ್ ನಿಯಮ ಉಲ್ಲಂಘನೆಯನ್ನು ಟ್ರಾಫಿಕ್ ಪೊಲೀಸ್ ಇಲಾಖೆಯ ಕ್ಯಾಮರಾಗಳು ಸೆರೆ ಹಿಡಿದಿದ್ದು, ದಂಡದ ಮೊತ್ತವನ್ನು ಸೇರಿಸುತ್ತಲೇ ಹೋಗಿದೆ.

ಯಮಹ ಪ್ಯಾಸಿನೋ ಸ್ಕೂಟರ್‌ನಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿ, ಇಷ್ಟಬಂದಂತೆ ಬೆಂಗಳೂರಿನ ಬೀದಿ ಬೀದಿಗಳಲ್ಲಿ ಸುತ್ತಿದ್ದ ವ್ಯಕ್ತಿ ಇದೀಗ ಗಾಡಿಯ ಹಣಕ್ಕಿಂತ ಎರಡು ಪಟ್ಟು ದಂಡ ತೆರಬೇಕಾದ ಪರಿಸ್ಥಿತಿ ಎದುರಾಗಿದೆ.
ಪದೇ ಪದೇ ನಿಯಮ ಮೀರಿ ಓಡಾಡುತ್ತಿದ್ದ ಸ್ಕೂಟರ್ ಅನ್ನು ಫೆಬ್ರವರಿ 3ರಂದು ಸಿಟಿ ಮಾರ್ಕೆಟ್ ಸಂಚಾರಿ ಠಾಣೆ ಪೊಲೀಸರು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದರು. ಬಳಿಕ ಮಾಲಿಕನಿಂದ ದಂಡ ವಸೂಲಿ ಮಾಡಿ ಎಚ್ಚರಿಕೆ ಕೊಟ್ಟು ಬಿಟ್ಟು ಕಳಿಸಿದ್ದಾರೆ.
ಒಟ್ಟು 311 ಬಾರಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದು ಇದಕ್ಕಾಗಿ ಮಾಲೀಕರಿಂದ 1,61,500 ರೂಪಾಯಿ ದಂಡ ವಸೂಲಿ ಮಾಡಲಾಗಿದೆ ಎಂದು ಸಿಟಿ ಮಾರ್ಕೆಟ್ ಸಂಚಾರ ಪೊಲೀಸ್ ಠಾಣೆಯ ಅಧಿಕೃತ ಎಕ್ಸ್ ಖಾತೆಯಲ್ಲಿ ಫೋಟೊ ಸಮೇತ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.
ಏನೇ ಆದರೂ ಟ್ರಾಫಿಕ್ ನಿಯಮಗಳನ್ನು ಮೀರಿದ ತಪ್ಪಿಗೆ ವ್ಯಕ್ತಿಯೊಬ್ಬ ತನ್ನ ಸ್ಕೂಟರ್ ಬೆಲೆಗಿಂತ ಡಬಲ್ ಹಣವನ್ನು ದಂಡವಾಗಿ ಪೊಲೀಸರಿಗೆ ಕಟ್ಟಬೇಕಾಗಿ ಬಂದಿದ್ದು ಮಾತ್ರ ವಿಪರ್ಯಾಸವೇ ಸರಿ. ಸಂಚಾರಿ ಪೊಲೀಸರ ಈ ಪೋಸ್ಟ್ ನೆಟ್ಟಿಗರ ಗಮನ ಸೆಳೆಯುತ್ತಿದ್ದು, ಹಲವರು ಪೊಲೀಸರ ಕ್ರಮವನ್ನು ಶ್ಲಾಘಿಸಿದ್ದಾರೆ.












Click it and Unblock the Notifications