'ಲಕ್ಷ ಅನಾಥ ಶವಗಳ ತ್ರಿವಿಕ್ರಮ' ಮಹದೇವ ವಿಧಿವಶ
ಬೆಂಗಳೂರು, ಜುಲೈ 17: ಅಪಘಾತ, ಆತ್ಮಹತ್ಯೆ ಮುಂತಾದ ಕಾರಣಗಳಿಂದ ಮೃತ ಪಡುವ ಅನಾಥ ಶವಗಳ ಅಂತ್ಯ ಸಂಸ್ಕಾರ ನಡೆಸುತ್ತಿದ್ದ ಎಂ. ಮಹದೇವ ಗುರುವಾರ (ಜುಲೈ 14) ಮೃತ ಪಟ್ಟಿದ್ದಾರೆ.
ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಮಹದೇವರನ್ನು ಕೆಲವು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತ ಪಟ್ಟಿದ್ದಾರೆ. ಅವರು ಪತ್ನಿ, ಇಬ್ಬರು ಪುತ್ರಿಯರು ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.
ತಮ್ಮ ಒಂಬತ್ತನೇ ವಯಸ್ಸಿನಲ್ಲೇ ಅನಾಥ ಶವಗಳ ಸಂಸ್ಕಾರ ನಡೆಸಲು ಆರಂಭಿಸಿದ್ದ ಮಹದೇವ ಅವರಿಗೆ ನಗರದ ವಿಕ್ಟೋರಿಯಾ ಆಸ್ಪತ್ರೆಯೇ ಮನೆಯಂತಾಗಿತ್ತು. ಅನಾಥ ಶವಗಳ ಮರಣೋತ್ತರ ಪರೀಕ್ಷೆಯ ನಂತರ ಇವರು ಶವ ಸಂಸ್ಕಾರ ನಡೆಸುತ್ತಿದ್ದರು.

ಪೊಲೀಸರು ಮತ್ತು ವಿಕ್ಟೋರಿಯಾ ಆಸ್ಪತ್ರೆಯ ಅಧಿಕಾರಿಗಳ ಪ್ರಕಾರ ಮಹದೇವ ಅವರು ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಶವಗಳ ಅಂತ್ಯ ಸಂಸ್ಕಾರ ನಡೆಸಿದ್ದಾರೆ. ಸಂಬಂಧಿಕರ ಸ್ಥಾನದಲ್ಲಿ ನಿಂತು ಶವ ಸಂಸ್ಕಾರ ನಡೆಸುವ ಇವರನ್ನು 'ಅನಾಥ ಶವಗಳ ತ್ರಿವಿಕ್ರಮ'ಎಂದೇ ಪೊಲೀಸರು ಮತ್ತು ವಿಕ್ಟೋರಿಯಾ ಆಸ್ಪತ್ರೆಯವರು ಕರೆಯುತ್ತಿದ್ದರು.
ತಮ್ಮ ಆಟೋದ ಮೂಲಕ ಶವವನ್ನು ಸಾಗಿಸುತ್ತಿದ್ದ ಇವರಿಗೆ ಐಪಿಎಸ್ ಅಧಿಕಾರಿ ಮದನ್ ಗೋಪಾಲ್ ಮಾರುತಿ ಓಮ್ನಿ ಕಾರನ್ನು ಕೊಡಿಸಿದ್ದರು. ಈ ವಾಹನವನ್ನು ಮಹದೇವ ಶವ ಸಂಸ್ಕಾರಕ್ಕೆಂದೇ ಬಳಸುತ್ತಿದ್ದರು.
ರಾಜ್ಯೋತ್ಸವ, ಕೆಂಪೇಗೌಡ ಸೇರಿದಂದತೆ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಮಹದೇವ ಅವರು ಸುಮಾರು ಒಂದು ತಿಂಗಳಿನಿಂದ ಕಾಯಿಲೆಯಿಂದ ಬಳಲುತ್ತಿದ್ದರು. ಇವರ ಈ ದೇವರು ಮೆಚ್ಚುವ ಕೆಲಸವನ್ನು ಅವರ ಮಕ್ಕಳು ಈಗ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. (ಚಿತ್ರಕೃಪೆ: ಪ್ರಜಾವಾಣಿ)












Click it and Unblock the Notifications