ನಮ್ಮ ಮೆಟ್ರೋ ನಿಲ್ದಾಣದ ಕಿಟಕಿಯಿಂದ ಕೆಳಗೆ ಜಿಗಿದ ವ್ಯಕ್ತಿ
ಬೆಂಗಳೂರು, ಮೇ 14 : ನಮ್ಮ ಮೆಟ್ರೋ ನಿಲ್ದಾಣದಿಂದ ಜಿಗಿದ ವ್ಯಕ್ತಿಯೊಬ್ಬ ಗಾಯಗೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.
ಮಂಗಳವಾರ ಮಧ್ಯಾಹ್ನ ಸಂದೀಪ್ (27) ಎಂಬ ವ್ಯಕ್ತಿ ದಾಸರಹಳ್ಳಿ ನಮ್ಮ ಮೆಟ್ರೋ ನಿಲ್ದಾಣದಿಂದ ಕೆಳಗೆ ಜಿಗಿದಿದ್ದಾನೆ. ಗಾಯಗೊಂಡ ಆತನನ್ನು ಸಪ್ತಗಿರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸಂದೀಪ್ ಕುಡಿದು ನಮ್ಮ ಮೆಟ್ರೋ ನಿಲ್ದಾಣವನ್ನು ಪ್ರವೇಶಿಸಿದ್ದ. ಇದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ಆತನನ್ನು ಹಿಡಿಯಲು ಮುಂದಾದರು. ಆಗ ಆತ ನಿಲ್ದಾಣದ ಕಿಟಕಿಯಿಂದ ಕೆಳಗೆ ಹಾರಿದ್ದಾನೆ.

ದಾಸರಹಳ್ಳಿ ಮೆಟ್ರೋ ನಿಲ್ದಾಣದ ಸಿಬ್ಬಂದಿ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಆಸ್ಪತ್ರೆಯಲ್ಲಿ ಸಂದೀಪ್‌ಗೆ ಚಿಕಿತ್ಸೆ ಮುಂದುವರೆದಿದೆ.
ಸಂದೀಪ್ ಮೂಲತಃ ಕೇರಳ ರಾಜ್ಯದವನು. ಪಿಯುಸಿ ವ್ಯಾಸಂಗ ಮಾಡಿದ್ದು ಅರ್ಧಕ್ಕೆ ಕಾಲೇಜು ಬಿಟ್ಟ ಆತ ಪೋಷಕರ ಜೊತೆ ದಾಸರಹಳ್ಳಿಯಲ್ಲಿ ವಾಸವಾಗಿದ್ದಾನೆ. ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ.
ಸಂದೀಪ್ ಕುಡಿದು ಮೆಟ್ರೋ ನಿಲ್ದಾಣ ಪ್ರವೇಶ ಮಾಡಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ. ಆತನ ರಕ್ತದ ಮಾದರಿಯನ್ನು ಪ್ರಯೋಗಕ್ಕೆ ಕಳುಹಿಸಲಾಗಿದೆ.












Click it and Unblock the Notifications