ಮೈಸೂರು ಒಡೆಯರ ಸಂಸ್ಥಾನದ ಈ ಕುಡಿಗೆ ವಧು ಬೇಕಾಗಿದೆ!
ಬೆಂಗಳೂರು, ಜು. 12: ಆತ ಓದಿರೋದು ಕೇವಲ ಏಳನೇ ತರಗತಿ. ಸ್ಪಾನಿಷ್, ಇಂಗ್ಲಿಷ್ ಮಾತನಾಡುತ್ತಾನೆ. ಇಷ್ಟಕ್ಕೆ ಸೀಮಿತವಾಗಿದ್ದರೆ ಈತನ ಪ್ರತಿಭೆ ನೋಡಿ ಚಪ್ಪಾಳೆ ತಟ್ಟಿ ಖುಷಿ ಪಡುತ್ತಿದ್ದರು. ಮಾಡಿದ್ದೇ ಬೇರೆ. ನಾನು ಮೈಸೂರು ಒಡೆಯರ ಸಂಸ್ಥಾನದ ಕುಡಿ ಎಂದು ಹೇಳಿಕೊಂಡು ಮೂವರು ಯುವತಿಯರಿಗೆ ಮೋಸ ಮಾಡಿದ್ದಾನೆ. ಆನ್‌ಲೈನ್ ಅಂತರ್ಜಾಲ ತಾಣದಲ್ಲಿ ಯುವತಿಯರನನ್ನು ಪರಿಚಯಿಸಿಕೊಂಡು ಮದುವೆಯಾಗುವ ಆಸೆ ಹುಟ್ಟಿಸಿ ಬರೋಬ್ಬರಿ 40 ಲಕ್ಷ ರೂ. ಸುಲಿಗೆ ಮಾಡಿದ್ದ ಈತನನ್ನು ವೈಟ್‌ಫೀಲ್ಡ್ ವಿಭಾಗದ ಸೈಬರ್ ಪೊಲೀಸರು ಬಂಧಿಸಿದ್ದಾರೆ.
ಈ ಖತರ್ ನಾಕ್ ವಂಚಕನ ಹೆಸರು ಮುತ್ತು ಅಲಿಯಾಸ್ ಸಿದ್ದಾರ್ಥ. ಬಂಧಿತನ ಹೆಸರು. ಪಿರಿಯಾಣಪಟ್ಟಣ ತಾಲೂಕಿನ ಬೈಲುಕುಪ್ಪೆ ನಿವಾಸಿ. ಈತನಿಂದ ಎರಡು ಆಪಲ್ ಐಪೋನ್ , ಸ್ಯಾಮ್ ಸಾಂಗ್ ಮೊಬೈಲ್ ಪೋನ್, ಆರು ಬ್ಯಾಂಕ್ ನ ಡೆಬಿಟ್ ಕಾರ್ಡ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈತನ ವಂಚಕ ಕೃತ್ಯದ ಬಗ್ಗೆ ಡಿಸಿಪಿ ಡಿ. ದೇವರಾಜ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸಿದ್ದಾರ್ಥ ಅರಸ್ ಹೆಸರಿನಲ್ಲಿ ಸಾಮಾಜಿಕ ಜಾಲ ತಾಣದಲ್ಲಿ ಖಾತೆ ತೆಗೆದಿದ್ದ ಮುತ್ತು, ತಾನು ಮೈಸೂರು ಸಂಸ್ಥಾನದ ಒಡೆಯರ ಸಂಬಂಧಿ. ಸದ್ಯ ಅಮೆರಿಕದ ಮೈಕ್ರೋಸಾಫ್ಟ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವುದಾಗಿ ಬಿಂಬಿಸಿಕೊಂಡಿದ್ದ. ಇದಲ್ಲದೇ ಕನ್ನಡ ಮ್ಯಾಟ್ರಿಮೊನಿಯಲ್ ವೆಬ್ ತಾಣದಲ್ಲಿ ಸಂಗಾತಿಯನ್ನು ಹುಡುಕುತ್ತಿರುವುದಾಗಿ ಪೋಟೋಗಳನ್ನು ಹಾಕಿದ್ದ. ಸ್ಯಾಂಡಿ, ಸಿದ್ದಾರ್ಥ ಅರಸ್ ಎಂದು ಕೆಲವು ಯುವತಿಯರನ್ನು ಪರಿಚಯಿಸಿಕೊಂಡಿದ್ದ ಮುತ್ತು, ಚಿಕ್ಕ ವಯಸ್ಸಿನ ಹುಡುಗನ ವೇಳೆ ಮೈಸೂರು ಮಹಾರಾಜರ ಜತೆ ಚಿತ್ರ ಹಿಡಿಸಿಕೊಂಡಂತೆ ಪೋಟೋಗಳನ್ನು ಎಡಿಟ್ ಮಾಡಿ ಪ್ರೊಫೈಲ್‌ಗೆ ಹಾಕಿಕೊಂಡಿದ್ದ. ಇದನ್ನು ನೋಡಿದ ಯುವತಿಯರು ಮುತ್ತುನನ್ನು ಸಂಪರ್ಕಿಸುತ್ತಿದ್ದರು.

ಸ್ಪಾನಿಶ್ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಮಾತನಾಡುತ್ತಿದ್ದ ಮುತ್ತುರಾಜನನ್ನು ಯುವತಿಯರು ನಂಬಿದ್ದರು. ಮೈಸೂರು ಸಂಸ್ಥಾನದ ಕುಡಿ ಸಿಕ್ಕಿತು ಎಂಬ ಖುಷಿಯಲ್ಲಿ ಮಾತನಾಡುತ್ತಿದ್ದ ಯುವತಿಯರ ಬಳಿ ಅನಾರೋಗ್ಯ ವೈಯಕ್ತಿಕ ಕಾರಣದ ಕಥೆ ಹೇಳಿ ಹಣ ಬೇಕೆಂದು ಕೇಳುತ್ತಿದ್ದ. ನಂಬಿದ ಯುವತಿಯರಿಂದ ಆನ್‌ಲೈನ್‌ನಲ್ಲಿ ಯುವತಿಯರಿಂದ ಹಣ ಪಡೆಯುತ್ತಿದ್ದ. ಇತ್ತೀಚೆಗೆ ಆನ್‌ಲೈನ್‌ನಲ್ಲಿ ಈತನನ್ನು ಇಷ್ಟ ಪಟ್ಟಿದ್ದ ಮೂವರು ಯುವತಿಯರಿಂದ ಬರೋಬ್ಬರಿ 40 ಲಕ್ಷ ರೂ. ಹಣ ಪಡೆದಿದ್ದ. ಬಂದ ಹಣದಲ್ಲಿ ಐಷಾರಾಮಿ ಜೀವನ ಸಾಗಿಸುವ ಜತೆಗೆ ಗ್ಯಾಂಬ್ಲಿಂಗ್ ಆಡುತ್ತಿದ್ದ. ಹಣವನ್ನು ಹಾಕಿಸಿಕೊಳ್ಳುವಾಗ ಬೈಲು ಕುಪ್ಪೆಯ ಕಾರ್ಮಿಕರಿಗೆ ಹಣ ಕೊಟ್ಟು ಅವರ ಬ್ಯಾಂಕ್ ಖಾತೆಯ ವಿವರ ನೀಡಿ ಹಣ ಹಾಕಿಸಿಕೊಳ್ಳುತ್ತಿದ್ದ. ಹೀಗೆ ಸಿಕ್ಕ ಸಿಕ್ಕವರಿಗೆ ಗಾಳ ಹಾಕುತ್ತಿದ್ದ.

ಈತನಿಂದ ಮೋಸ ಹೋಗಿದ್ದ ಬೆಂಗಳೂರು ಮೂಲದ ಮೂವರು ಯುವತಿಯರು ವಿವಿಧ ಠಾಣೆಗಳಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಮುತ್ತುನ ಹುಡುಕಾಟ ಶುರುವಾಗಿತ್ತು. ಪಿರಿಯಾಪಟ್ಟಣದ ಬ್ಯಾಂಕ್‌ನಲ್ಲಿ ಹಣ ಡ್ರಾ ಮಾಡಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ ವೈಟ್ ಫೀಲ್ಡ್ ವಿಭಾಗದ ಪೊಲೀಸರು ಮುತ್ತುನನ್ನು ಬಂಧಿಸಿದ್ದಾರೆ. ಬಂಧನದ ವೇಳೆ ಭಯಾನಕ ಸಂಗತಿಗಳೂ ಹೊರಗೆ ಬಿದ್ದಿವೆ.

Recommended Video
ಏಳನೇ ತರಗತಿ ಓದಿರುವ ಈತ ಒಡೆಯರ ಸಂಸ್ಥಾನದ ಸಂಬಂಧಿಯಲ್ಲ ಎಂಬುದು ಗೊತ್ತಾಗಿದೆ. ಪ್ರವಾಸಿಗರಿಂದ ಸ್ಪಾನಿಶ್ ಮತ್ತು ಇಂಗ್ಲಿಷ್ ಕಲಿತಿದ್ದ ಆರೋಪಿ ಅದನ್ನೇ ಬಂಡವಾಳ ವಾಗಿಟ್ಟುಕೊಂಡು ಮ್ಯಾಟ್ರಿಮೊನಿಯಲ್ ಜಾಲ ತಾಣದಲ್ಲಿ ಖಾತೆ ತೆರೆದು ಮೋಸ ಮಾಡುತ್ತಿದ್ದ. ಇದೀಗ ಮೂರು ವಂಚನೆ ಪ್ರಕರಣ ದಾಖಲಾಗಿದ್ದು, ಮತ್ತಷ್ಟು ಪ್ರಕರಣ ಬೆಳಕಿಗೆ ಬರುವ ಸಾಧ್ಯತೆಯಿದೆ.












Click it and Unblock the Notifications