Namma Metro: ಮೆಟ್ರೋ ಒಳಗೂ ಭಿಕ್ಷಾಟನೆ ಮಾಡಿದ ವ್ಯಕ್ತಿ, ಪ್ರಯಾಣಿಕರು ಫುಲ್ ಶಾಕ್
ಸಾರ್ವಜನಿಕ ಸ್ಥಳಗಳಲ್ಲಿ ಭಿಕ್ಷಾಟನೆ ಮಾಡುವುದು ಕೂಡ ಅಪರಾಧ ಎಂದು ಪರಿಗಣಿಸಲಾಗಿದೆ. ಆದರೂ ಇದು ನಿಯಂತ್ರಣಕ್ಕೆ ಬಂದಿಲ್ಲ. ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೂ ಸಿಗ್ನಲ್ ಹಾಗೂ ದೇವಸ್ಥಾನಗಳ ಭಿಕ್ಷೆ ಇಂದಿಗೂ ಭಿಕ್ಷಾಟನೆ ಮಾಡುವುದು ತಪ್ಪಿಲ್ಲ. ಇದೀಗ ವ್ಯಕ್ತಿಯೊಬ್ಬ ನಮ್ಮ ಮೆಟ್ರೋ ಒಳಗೂ ಭಿಕ್ಷಾಟನೆ ಮಾಡಿ ಪ್ರಯಾಣಿಕರಿಗೆ ಶಾಕ್ ನೀಡಿದ್ದಾನೆ ಎಂದು ವರದಿಯಾಗಿದೆ.
ನಮ್ಮ ಮೆಟ್ರೋದಲ್ಲಿ ಭಿಕ್ಷಾಟನೆಗೆ ಅವಕಾಶ ಇಲ್ಲ. ಆದರೂ ವ್ಯಕ್ತಿಯೊಬ್ಬ ಪ್ರಯಾಣಿಕರ ಸೋಗಿನಲ್ಲಿ ಬಂದು ಅಲ್ಲಿದ್ದವರ ಬಳಿ ಭಿಕ್ಷಾಟನೆ ಮಾಡಿದ್ದು, ಪ್ರಯಾಣಿಕರೆಲ್ಲ ಗಾಬರಿಯಿಂದ ಆತನನ್ನು ನೋಡಿದ್ದಾರೆ. ಮೆಟ್ರೋದಲ್ಲಿ ಯಾವಾಗಿನಿಂದ ಭಿಕ್ಷೆ ಬೇಡಲು ಅವಕಾಶ ಕೊಡಲಾಗಿದೆ ಎಂದು ತಲೆಕೆಡಿಸಿಕೊಂಡಿದ್ದಾರೆ. ಇನ್ನು ಈ ವಿಡಿಯೋ ಅನ್ನು ಪ್ರಯಾಣಿಕರೊಬ್ಬರು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ವಿಡಿಯೋ ವೈರಲ್ ಆಗಿದೆ. ಇನ್ನು ವಿಡಿಯೋದಲ್ಲಿರುವುದು ವಿಶೇಷ ಚೇತನ ವ್ಯಕ್ತಿ ಎಂದು ಹೇಳಲಾಗುತ್ತಿದೆ. ಪ್ರಯಾಣಿಕರಂತೆಯೇ ಮೆಟ್ರೋ ಪ್ರವೇಶಿಸಿರುವ ಅವರು ಬಳಿಕ ಅಲ್ಲಿ ದಿಢೀರನೆ ಭಿಕ್ಷಾಟನೆಗೆ ಇಳಿದಿದ್ದಾರೆ. ಮೊದಲಿಗೆ ಕೆಲವರು ಯಾರೋ ಪ್ರಾಂಕ್ ಇರಬಹುದು ಎಂದು ಭಾವಿಸಿದ್ದಾರೆ. ಆದರೆ ಆ ವ್ಯಕ್ತಿ ಎಲ್ಲರ ಬಳಿ ಭಿಕ್ಷೆ ಕೇಳುತ್ತಾ ಸಾಗಿದ್ದಾರೆ. ಇದರಿಂದ ಕೆಲ ಪ್ರಯಾಣಿಕರು ಮುಜುಗರಕ್ಕೂ ಒಳಗಾಗಿದ್ದಾರೆ ಎನ್ನಲಾಗಿದೆ.
ಈ ಘಟನೆ ನಡೆದಿರುವುದು ಚಲ್ಲಘಟ್ಟದಿಂದ ವೈಟ್‌ಫೀಲ್ಡ್ ಮಾರ್ಗದ ಮೆಟ್ರೋದಲ್ಲಿ ಎಂದು ಹೇಳಲಾಗುತ್ತಿದೆ. ಇನ್ನು ವಿಶೇಷ ಚೇತನ ವ್ಯಕ್ತಿ ಆಗಿರುವ ಅವರು, ತಮ್ಮ ದೈಹಿಕ ಸ್ಥಿತಿಯನ್ನು ಎಲ್ಲರಿಗೂ ತೋರಿಸಿ ಭಿಕ್ಷೆ ಕೇಳಿದ್ದಾರೆ. ಮೆಟ್ರೋದಲ್ಲೂ ಭಿಕ್ಷಾಟನೆ ಕಂಡು ಪ್ರಯಾಣಿಕರು ಆತಂಕದಿಂದ ನೋಡಿದ್ದಾರೆ. ಅಲ್ಲದೆ ಆ ವ್ಯಕ್ತಿ ಮೊದಲಿಗೆ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಮೆಟ್ರೋ ಟಿಕೆಟ್ ಪಡೆದುಕೊಂಡು ಬಳಿಕ ಭಿಕ್ಷಾಟನೆ ಮಾಡಿರುವುದು ಪ್ರಯಾಣಿಕರಿಗೆ ಅಚ್ಚರಿ ತರಿಸಿದೆ.

ಸಾಮಾನ್ಯವಾಗಿ ಬೆಂಗಳೂರಿನ ರಸ್ತೆಗಳಲ್ಲಿ ಭಿಕ್ಷುಕರ ಸಂಖ್ಯೆ ಹೆಚ್ಚಾಗಿದ್ದು, ಬೆನ್ನುಬಿದ್ದಂತೆ ಸಾರ್ವಜನಿಕರ ಬಳಿ ಭಿಕ್ಷಾಟನೆ ಮಾಡುತ್ತಿದ್ದರು. ಮೆಟ್ರೋದಲ್ಲಿ ಭಿಕ್ಷುಕರ ಹಾವಳಿ ಇರಲಿಲ್ಲ. ಈಗ ಇಲ್ಲಿಯೂ ಭಿಕ್ಷಾಟನೆ ಮಾಡುವುದು ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆ ಮುಂದಿಟ್ಟಿದ್ದಾರೆ. ಅಲ್ಲದೆ, ಮೆಟ್ರೋದವರು ಯಾವಾಗಿನಿಂದ ಭಿಕ್ಷಾಟನೆಗೆ ಅನುಮತಿ ನೀಡಿದ್ದಾರೆ? ಎಂದೂ ಹಲವರು ಕೇಳುತ್ತಿದ್ದಾರೆ.
ಮೆಟ್ರೋದಲ್ಲಿ ಪ್ರಯಾಣಿಸುವವರಿಗೆ ಭಿಕ್ಷುಕರಿಂದ ಕಿರಿಕಿರಿ ಜೊತೆಗೆ ಮುಜುಗರವೂ ಆಗುತ್ತದೆ. ದಯಮಾಡಿ ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಬಿಎಂಆರ್‌ಸಿಎಲ್ ಕೂಡಲೇ ಕ್ರಮ ಕೈಗೊಳ್ಳಬೇಕು. ಇದಕ್ಕೆ ಕಡಿವಾಣ ಹಾಕದಿದ್ದರೆ, ಬಸ್-ರೈಲ್ವೆ ನಿಲ್ದಾಣಕ್ಕೂ ಮೆಟ್ರೋಗೂ ಯಾವುದೇ ವ್ಯತ್ಯಾಸ ಇರೋದಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇನ್ನು ವ್ಯಕ್ತಿ ಭಿಕ್ಷಾಟನೆ ಮಾಡಿರುವ ಬಗ್ಗೆ ಮೆಟ್ರೋದವರು ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಈ ಹಿಂದೆಯೂ ಯುವಕನೊಬ್ಬ ತಾನು ಮೂಕ ಮತ್ತು ಕಿವುಡ ಎಂದು ಹೇಳಿಕೊಂಡು ನಮ್ಮ ಮೆಟ್ರೋದಲ್ಲಿ ಭಿಕ್ಷೆ ಬೇಡಿದ್ದ. ಈ ಬಗ್ಗೆ ಪ್ರಯಾಣಿಕರು ದೂರು ನೀಡಿದ ಬೆನ್ನಲ್ಲೇ ಬೆಂಗಳೂರು ಮೆಟ್ರೋ ರೈಲು ನಿಗಮದ ಅಧಿಕಾರಿಗಳು ಎಚ್ಚೆತ್ತುಕೊಂಡು ಆತನ ಮೇಲೆ ಕ್ರಮ ತೆಗೆದುಕೊಂಡಿದ್ದರು. ಜೊತೆಗೆ 500 ರೂಪಾಯಿ ದಂಡ ಕೂಡ ವಿಧಿಸಿದ್ದರು. ಈಗ ಅಂತದ್ದೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.












Click it and Unblock the Notifications