ಮಹಾರಾಷ್ಟ್ರ ಪೊಲೀಸರ ಬೇಟೆ: ಬೆಂಗಳೂರಲ್ಲಿ 3 ಡ್ರಗ್ಸ್ ಫ್ಯಾಕ್ಟರಿ, ₹55 ಕೋಟಿ ಮೌಲ್ಯದ ಮಾದಕ ಪತ್ತೆ
ಹೊಸ ವರ್ಷದ ಹೊಸ್ತಿಲಲ್ಲಿರುವ ಬೆಂಗಳೂರಿನಲ್ಲಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಡ್ರಗ್ಸ್ ಪತ್ತೆಯಾಗಿದೆ. ಮಹಾರಾಷ್ಟ್ರ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ (ಎಎನ್‌ಟಿಎಫ್) ಬೆಂಗಳೂರಿನಲ್ಲಿರುವ ಮೂರು ರಹಸ್ಯ ಮೆಫೆಡ್ರೋನ್ (ಎಂಡಿ) ತಯಾರಿಕಾ ಘಟಕಗಳನ್ನು ಭೇದಿಸಿದ್ದು, ₹55.88 ಕೋಟಿ ರೂಪಾಯಿ ಮೌಲ್ಯದ ಮಾದಕ ದ್ರವ್ಯಗಳೊಂದಿಗೆ ನಾಲ್ವರನ್ನು ಬಂಧಿಸಿದೆ. ಈ ಅಂತರರಾಜ್ಯ ಕಾರ್ಯಾಚರಣೆಯಲ್ಲಿ ಮಾದಕ ದ್ರವ್ಯ ಮತ್ತು ಕಚ್ಚಾ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇಬ್ಬರು ಪ್ರಮುಖ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಡಿಸೆಂಬರ್ 21ರಂದು ಮುಂಬೈನಲ್ಲಿ ನಡೆದ ದಾಳಿಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಅಲ್ಲಿನ ಎಎನ್‌ಟಿಎಫ್ ಕೊಂಕಣ ಘಟಕವು ವಾಶಿ ಗ್ರಾಮದ ಬಸ್ ಡಿಪೋದಲ್ಲಿ ಆರೋಪಿ ಅಬ್ದುಲ್ ಖಾದರ್ ರಶೀದ್ ಶೇಖ್‌ನಿಂದ ₹1.48 ಕೋಟಿ ಮೌಲ್ಯದ 1.48 ಕೆಜಿ ಎಂಡಿ ಡ್ರಗ್ಸ್ ಅನ್ನು ವಶಪಡಿಸಿಕೊಂಡಿತ್ತು. ಬಳಿಕ ಆತ ಬೆಂಗಳೂರಿನೊಂದಿಗೆ ನಂಟು ಹೊಂದಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದರು. ಬೆಳಗಾವಿ ಮೂಲದ ವ್ಯಕ್ತಿ ಇದರ ಹಿಂದಿನ ಕಿಂಗ್‌ಪಿನ್ ಎಂದು ಆರೋಪಿಸಲಾಗಿದೆ.

ಗುಪ್ತಚರ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಎಎನ್‌ಟಿಎಫ್ ತಂಡಗಳು ರಾಜಸ್ಥಾನದ ಸೂರಜ್ ರಮೇಶ್ ಯಾದವ್ ಮತ್ತು ಮಲ್ಖಾನ್ ರಾಮಲಾಲ್ ಬಿಷ್ಣೋಯ್ ಅವರನ್ನು ಬಂಧಿಸಿದ್ದು, ಅವರು ಅಕ್ರಮ ಕಾರ್ಖಾನೆಗಳ ಸ್ಥಳಗಳನ್ನು ಬಹಿರಂಗಪಡಿಸಿದ್ದಾರೆ. ಈ ಪೈಕಿ ಬೆಂಗಳೂರಿನಲ್ಲಿ ಸ್ಪಂದನ ಲೇಔಟ್, ಎನ್‌ಜಿ ಗೊಲ್ಲಹಳ್ಳಿಯಲ್ಲಿ ಆರ್‌ಜೆ ಈವೆಂಟ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇನ್ನೊಂದು ಯರಪ್ಪನಹಳ್ಳಿ-ಕಣ್ಣೂರು ಪ್ರದೇಶದ ಆರ್‌ಸಿಸಿ ಕಟ್ಟಡದಲ್ಲಿದೆ.
ಮೂರು ಸ್ಥಳಗಳಲ್ಲೂ ನಡೆದ ದಾಳಿಗಳಲ್ಲಿ 4.1 ಕೆ.ಜಿ ಎಂಡಿ ಮತ್ತು 17 ಕೆ.ಜಿ ದ್ರವ ಎಂಡಿ ಜೊತೆಗೆ ಮಾದಕ ದ್ರವ್ಯ ತಯಾರಿಸುವ ಯಂತ್ರೋಪಕರಣಗಳು ಮತ್ತು ರಾಸಾಯನಿಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು 21.4 ಕೆ.ಜಿ ವಶಪಡಿಸಿಕೊಂಡಿದ್ದು, ಮೂರು ಕಾರ್ಖಾನೆಗಳು ಸ್ಥಳದಲ್ಲೇ ನಾಶವಾಗಿವೆ. ಪ್ರಾಥಮಿಕ ಸಂಶೋಧನೆಗಳ ಪ್ರಕಾರ ಇವುಗಳನ್ನು ಬೆಂಗಳೂರಿನಿಂದ ಇತರ ರಾಜ್ಯಗಳಿಗೆ ಸರಬರಾಜು ಮಾಡಲಾಗುತ್ತಿತ್ತು, ಇದರ ಆದಾಯವನ್ನು ಸ್ಥಿರ ಆಸ್ತಿಯಲ್ಲಿ ಹೂಡಿಕೆ ಮಾಡಲಾಗುತ್ತಿತ್ತು ಎಂದು ಪತ್ತೆ ಹಚ್ಚಿದ್ದಾರೆ.
ಕರ್ನಾಟಕ ಪೊಲೀಸರಿಗೆ ಇದು ತಿಳಿಯಲಿಲ್ವಾ?
ಸದ್ಯ ಇದು ರಾಜಕೀಯ ತಿರುವು ಪಡೆದುಕೊಂಡಿದ್ದು, ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನು ಬಿಜೆಪಿ ನಾಯಕರು ಟೀಕಿಸುತ್ತಿದ್ದಾರೆ. ಕರ್ನಾಟಕ ಪೊಲೀಸರಿಗೆ ತಿಳಿಯದೆ ಮಹಾರಾಷ್ಟ್ರ ಪೊಲೀಸರು ಬೆಂಗಳೂರಿನಲ್ಲಿ ಮಾದಕ ದ್ರವ್ಯ ಕಾರ್ಖಾನೆಗಳನ್ನು ಹೇಗೆ ಪತ್ತೆಹಚ್ಚಬಹುದು? ಎಂದು ಪ್ರಶ್ನಿಸುತ್ತಿದ್ದಾರೆ. ನೈತಿಕ ಆಧಾರದ ಮೇಲೆ ಮುಖ್ಯಮಂತ್ರಿ ಮತ್ತು ಗೃಹ ಸಚಿವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಡ್ರಗ್ಸ್ ದಂಧೆಗೆ ಕಡಿವಾಣ ಹಾಕುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ನಮ್ಮ ಯುವಕರ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕೂಡ ಆರೋಪಿಸಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ಇದರ ಬಗ್ಗೆ ಪ್ರಸ್ತಾಪ ಮಾಡಿದ ಸಂದರ್ಭದಲ್ಲಿ "ಡ್ರಗ್ಸ್ ದಂಧೆ ಎಲ್ಲ ರಾಜ್ಯಗಳಲ್ಲಿಯೂ ಇದೆ" ಎಂದು ಇದರ ಗಂಭೀರತೆ ಅರಿಯದೆ ಗೃಹ ಸಚಿವ ಜಿ.ಪರಮೇಶ್ವರ್ ಅವರು ಉಡಾಫೆ ಉತ್ತರ ಕೊಟ್ಟಿದ್ದರು.

ಶೌರ್ಯ, ಸಾಹಸ, ದಕ್ಷತೆಗೆ ಹೆಸರುವಾಸಿಯಾಗಿದ್ದ ಕರ್ನಾಟಕ ಪೊಲೀಸ್ ಇಲಾಖೆ, ಕಾಂಗ್ರೆಸ್ ಸರ್ಕಾರದ ಅಸಮರ್ಥತೆಯಿಂದ ನಿತ್ರಾಣವಾಗಿದೆ. ಕರ್ನಾಟಕದಲ್ಲಿ ನಡೆಯುತ್ತಿರುವ ಡ್ರಗ್ಸ್ ದಂಧೆ ಪತ್ತೆ ಹಚ್ಚಲು, ಡ್ರಗ್ಸ್ ದಂಧೆಕೋರರನ್ನು ಹಾಕಲು ಮಹಾರಾಷ್ಟ ಪೊಲೀಸರು ಬರಬೇಕಾದರೆ ಕರ್ನಾಟಕದ ಪೊಲೀಸ್ ಇಲಾಖೆ ಏನು ಮಾಡುತ್ತಿದೆ? ರಾಜ್ಯದ ಗುಪ್ತಚರ ಇಲಾಖೆ ಏನು ಮಾಡುತ್ತಿದೆ? ಎಂದು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಯುವ ಜನಾಂಗದ ಭವಿಷ್ಯಕ್ಕೆ ಮಾರವಾಗಿರುವ ಈ ಡ್ರಗ್ಸ್ ದಂಧೆಯನ್ನ ಅತ್ಯಂತ ಗಂಭೀರವಾಗಿ ಪರಿಗಣಿಸಿ ಇದಕ್ಕೆ ಕಡಿವಾಣ ಹಾಕಲು ಕೂಡಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿದ್ದರೆ, ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮಹಾರಾಷ್ಟ್ರ ಪೊಲೀಸ್ ಹೇಳಿದ್ದು ಸುಳ್ಳು
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ. ನಗರದಲ್ಲಿ 55 ಕೋಟಿ ಮೌಲ್ಯದ ಡ್ರಗ್ಸ್ ಸಿಕ್ಕಿದೆ ಎಂದು ಮಹಾರಾಷ್ಟ್ರ ಪೊಲೀಸರು ಸುಳ್ಳು ಹೇಳಿದ್ದಾರೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ನಿರಾಕರಿಸಿದ್ದಾರೆ.












Click it and Unblock the Notifications