Breaking: ಪಣತ್ತೂರು ವಿದ್ಯುತ್ ಚಿತಾಗಾರ 4 ದಿನ ಸ್ಥಗಿತ
ಬೆಂಗಳೂರು, ಸೆಪ್ಟಂಬರ್ 05: ಬೆಂಗಳೂರಿನಲ್ಲಿ ಮಹಾಮಳೆ ನಡುವೆ ವಿದ್ಯುತ್ ವ್ಯತ್ಯಯ ಸಾಮಾನ್ಯ ಸಂಗತಿಯಾಗಿದೆ. ಜೊತೆಗೆ ಬಿಬಿಎಂಪಿ ಸ್ವಾಮ್ಯದ ವಿದ್ಯುತ್ ಚಿತಾಗಾರಗಳಿಗೂ ಮಳೆ ಸಮಸ್ಯೆ ತಂದೊಡ್ಡಿದೆ. ಮಹದೇವಪುರ ವಲಯ ವ್ಯಾಪ್ತಿಯಲ್ಲಿರುವ ಪಣತ್ತೂರು ವಿದ್ಯುತ್ ಚಿತಾಗಾರದಲ್ಲಿ ತುರ್ತು ನಿರ್ವಹಣಾ ಕೆಲಸ ಸಂಬಂಧ ತಾತ್ಕಾಲಿಕವಾಗಿ ಬಂದ್ ಆಗಲಿದೆ. ಸೆಪ್ಟಂಬರ್ 6 ರಿಂದ 9 ರವರೆಗೆ ಚಿತಾಗಾರ ಸ್ಥಗಿತಗೊಳ್ಳಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಸಾರ್ವಜನಿಕ ಪ್ರಕಟಣೆ ಹೊರಡಿಸಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಹಾದೇವಪುರ ವಲಯದ ಕಾರ್ಯಪಾಲಕ ಎಂಜಿನಿಯರ್(ವಿದ್ಯುತ್) ತಾತ್ಕಾಲಿಕ ಸ್ಥಗಿತ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಪಣತ್ತೂರು ಚಿತಾಗಾರಕ್ಕೆ ಮೃತ ದೇಹಗಳನ್ನು ದಹನ ಕ್ರಿಯೆಗಾಗಿ ತರುವ ಸಾರ್ವಜನಿಕರು ಸಮೀಪದಲ್ಲಿರುವ ಬೇರೆ ವಿದ್ಯುತ್ ಚಿತಾಗಾರವನ್ನು ಉಪಯೋಗಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಪಣತ್ತೂರು ಚಿತಾಗಾರಕ್ಕೆ ಸದ್ಯ ನಿತ್ಯ ಸರಾಸರಿ 4 ರಿಂದ 15 ಶವಗಳು ಬರುತ್ತಿವೆ. ಈ ಚಿತಾಗಾರದಲ್ಲಿ ಈ ಹಿಂದೆ ನಿರಂತರವಾಗಿ ಬಿಡುವಿಲ್ಲದೆ ಕಾರ್ಯ ನಿರ್ವಹಿಸಲಾಗಿತ್ತು. ಈ ಕಾರಣದಿಂದಾಗಿ ಚಿತಾಗಾರದ ಚಿಮ್ನಿ ಪೈಪ್‌ಲೈನ್ ಹಾಳಾಗಿದೆ. ಸಾರ್ವಜನಿಕ ಬಳಕೆಗಾಗಿ ಈ ಚಿತಾಗಾರವನ್ನು ಸುಸ್ಥಿತಿಯಲ್ಲಿ ಇಡಬೇಕಾದ ಹಿನ್ನೆಲೆಯಲ್ಲಿ ತುರ್ತು ಕೆಲಸ ಕೈಗೊಳ್ಳಲಾಗಿದೆ. ಹೀಗಾಗಿಯೇ ಕೆಲವು ದಿನ ಚಿತಾಗಾರ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಮಳೆ ಕಾರಣದಿಂದ ದುರಸ್ತಿ ಕಾರ್ಯವೂ ತುರ್ತಾಗಿ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ.

ಪಣತ್ತೂರು ಚಿತಾಗಾರದಲ್ಲಿ ಕುಲುಮೆಯ ಸ್ಕ್ರಬ್ಬರ್‌ಗೆ ಎಕ್ಸಾಸ್ಟ್ ಟ್ರೆಂಚ್ ಅಳವಡಿಕೆ, ದುರಸ್ಥಿ ಹಾಗೂ ಚಿಮಿನಿ ಮತ್ತು ಪೈಪ್‌ಲೈನ್‌ಗಳ ದುರಸ್ತಿ ಮಾಡಬೇಕಿದೆ. ವಿದ್ಯುತ್ ಚಿತಾಗಾರದ ಫರ್ನೇಸ್‌ಗಳು 600 ಡಿಗ್ರಿ ಸಿ-ಉಷ್ಣಾಂಶದಲ್ಲಿ ಕಾರ್ಯ ನಿರ್ವಹಿಸುತ್ತಿವೆ.
ಫರ್ನೇಸ್ ಒಳಗೆ ದುರಸ್ಥಿ ಕಾರ್ಯಗಳನ್ನು ಕೈಗೊಳ್ಳಲು ಕನಿಷ್ಟ ಉಷ್ಣಾಂಶ 50 ಡಿಗ್ರಿ ಸಿ-ಗಿಂತ ಕಡಿಮೆ ಇರಬೇಕಾಗುತ್ತದೆ. ಉಷ್ಣಾಂಶವು 50 ಡಿಗ್ರಿ ಸಿ-ಗೆ ಬರಲು 2 ರಿಂದ 3 ದಿನಗಳ ಕಾಲಾವಕಾಶ ಅಗತ್ಯವಿದೆ. ಅಲ್ಲದೇ ದುರಸ್ತಿ ಕೆಲಸಗಳು ಮುಕ್ತಾಯದ ನಂತರ ಫರ್ನೇಸ್ ಉಷ್ಣಾಂಶ 600 ಡಿಗ್ರಿಗೆ ಏರಲು ಮತ್ತೆ 2 ರಿಂದ 3 ದಿನಗಳ ಕಾಲಾವಧಿ ತೆಗೆದುಕೊಳ್ಳುತ್ತದೆ ಎಂದು ಅವರು ವಿವರಿಸಿದ್ದಾರೆ.
ಈ ದುರಸ್ತಿ ಕಾರಣದಿಂದ ನಾಲ್ಕು ದಿನಗಳವರೆಗೆ ಚಿತಾಗಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ಉದ್ದೇಶಿಸಲಾಗಿದೆ. ಈ ಅವಧಿಯಲ್ಲಿ ಬರುವ ಶವಗಳನ್ನು ಕಲ್ಲಹಳ್ಳಿ ಮತ್ತು ಹೆಬ್ಬಾಳ ಚಿತಾಗಾರಗಳಲ್ಲಿ ಅಂತ್ಯಸಂಸ್ಕಾರ ಮಾಡಲು ಬಿಬಿಎಂಪಿ ಸಿಬ್ಬಂದಿ ಅವಕಾಶ ನೀಡಿದೆ ಎಂದು ಹೇಳಿದರು.












Click it and Unblock the Notifications