ದೇವನಹಳ್ಳಿ ಕ್ಷೇತ್ರದಲ್ಲಿ ಮಾದಿಗ ಸಮುದಾಯದ ಸಂಧಾನ ವಿಫಲ!
ದೇವನಹಳ್ಳಿ, ಏಪ್ರಿಲ್ 29 : ದೇವನಹಳ್ಳಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳಿಂದ ಒಟ್ಟು 23 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ನಾಮಪತ್ರ ಪರಿಶೀಲನೆಯ ದಿನ ಹಾಲಿ ಶಾಸಕ ಪಿಳ್ಳಮುನಿಶಾಮಪ್ಪ, ಮಾಜಿ ಶಾಸಕ ವೆಂಕಟಸ್ವಾಮಿ ಅವರ 3 ನಾಮಪತ್ರಗಳಲ್ಲಿ 2 ನಾಮಪತ್ರಗಳು ತಿರಸ್ಕೃತಗೊಂಡಿದ್ದವು. ಇನ್ನುಳಿದ 16 ಅಭ್ಯರ್ಥಿಗಳ 20 ನಾಮಪತ್ರಗಳು ಸಿಂಧುಗೊಂಡಿದ್ದವು.
ಶುಕ್ರವಾರ ನಾಮಪತ್ರ ಹಿಂಪಡೆಯುವ ದಿನ 5 ಅಭ್ಯರ್ಥಿಗಳು ಉಮೇದಾರಿಕೆ ಹಿಂಪಡೆದಿದ್ದು, 11 ಅಭ್ಯರ್ಥಿಗಳು ಚುನಾವಣೆ ಎದುರಿಸಲು ಸಿದ್ಧರಾಗಿದ್ದಾರೆ. ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳಾಗಿ ಪಕ್ಷೇತರವಾಗಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದ ಡಿ.ಸಿ ದೊಡ್ಡಚಿಕ್ಕಣ್ಣ, ಎ.ಚಿನ್ನಪ್ಪ, ಎಂ.ನಾರಾಯಣಸ್ವಾಮಿ, ಎಂ.ಮುನಿಯಪ್ಪ ಅವರು ನಾಮಪತ್ರ ಹಿಂಪಡೆದಿದ್ದಾರೆ. ಜೆಡಿಎಸ್ ನ ಬಂಡಾಯ ಅಭ್ಯರ್ಥಿಯಾಗಿದ್ದ ಬಿ.ಕೆ ಶಿವಪ್ಪ ಸಹ ನಾಮಪತ್ರ ವಾಪಸ್ ಪಡೆದಿದ್ದಾರೆ.
ಕಾಂಗ್ರೆಸ್ ನಿಂದ ಮಾಜಿ ಶಾಸಕ ವೆಂಕಟಸ್ವಾಮಿಗೆ ಟಿಕೆಟ್ ನೀಡಿದ್ದರಿಂದ ಕಾಂಗ್ರೆಸ್‌ನಲ್ಲಿ ಅಸಮಾಧಾನಗೊಂಡ ಕೆಲ ಕಾಂಗ್ರೆಸ್ ಮುಖಂಡರು ಬಂಡಾಯವಾಗಿ ಪಕ್ಷೇತರ ಅಭ್ಯರ್ಥಿಗಳಾಗಿ ಸ್ಪರ್ಧೆ ನಡೆಸಲು 4 ನಾಮಪತ್ರಗಳನ್ನು ಸಲ್ಲಿಸಿದ್ದರು. ಇದರಿಂದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮತಗಳು ಚದುರುತ್ತವೆ ಎಂಬ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವೆಂಕಟಸ್ವಾಮಿ ನಾಮಪತ್ರಗಳನ್ನು ಸಲ್ಲಿಸಿದ್ದ ಮುಖಂಡರ ಮನವೊಲಿಸಿ ನಾಮಪತ್ರ ಹಿಂಪಡೆಸುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಜೆಡಿಎಸ್ ನಲ್ಲಿ ಜೆಡಿಎಸ್ ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ ಶಿವಪ್ಪ ಅವರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಅವರು ಸಹ ಇದೀಗ ಜೆಡಿಎಸ್ ತಾಲೂಕು ಅಧ್ಯಕ್ಷ ಶ್ರೀನಿವಾಸ್ ಸಮ್ಮುಖದಲ್ಲಿ ಉಮೇದಾರಿಕೆ ವಾಪಸ್ ಪಡೆದಿದ್ದಾರೆ.
ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಎಸ್ಸಿ ಜಾತಿಯ ಎಡ ಜನಾಂಗದ ಅಭ್ಯರ್ಥಿಗಳಾದ ಜೆಡಿಎಸ್ ಅಭ್ಯರ್ಥಿ ಹಾಲಿ ಶಾಸಕ ಪಿಳ್ಳಮುನಿಶಾಮಪ್ಪ ಮತ್ತು ಬಿಜೆಪಿ ಟಿಕೆಟ್ ಆಕಾಂಕ್ಷಿ ಡಿ.ಆರ್ ನಾರಾಯಣಸ್ವಾಮಿ ಅವರಿಗೆ ಅಭ್ಯರ್ಥಿ ಸ್ಥಾನ ಕೈ ತಪ್ಪಿದ್ದರಿಂದ ಕ್ಷೇತ್ರದ ಎಸ್ಸಿ ಸಮುದಾಯ ಒಗ್ಗಟ್ಟು ಪ್ರದರ್ಶನ ಮಾಡಬೇಕೆಂದು ನಿರ್ಧರಿಸಿದ್ದರು.ಇನ್ನು ಕಾಂಗ್ರೆಸ್ ಪಕ್ಷದಲ್ಲಿ ಸಹ ಮಾದಿಗ ಸಮುದಾಯಕ್ಕೆ ಟಿಕೆಟ್ ಕೈ ತಪ್ಪಿತ್ತು.
ಕಾಂಗ್ರೆಸ್, ಜೆಡಿಎಸ್, ಬಿಜೆಪಿಯಿಂದ ಬಂಡಾಯವಾಗಿ ಪಕ್ಷೇತರ ಅಭ್ಯರ್ಥಿಗಳಾಗಿ ಸಲ್ಲಿಸಿದ್ದ ಎಲ್ಲ ಅಭ್ಯರ್ಥಿಗಳು ನಾಮಪತ್ರ ಹಿಂಪಡೆದು ಯಾರನ್ನಾದರೂ ಒಬ್ಬರನ್ನು ಆಯ್ಕೆ ಮಾಡಿ ಅಂತಿಮಗೊಳಿಸಿ, ಮಾದಿಗ ಸಮಾಜದ ಒಗ್ಗಟ್ಟು ಪ್ರದರ್ಶನ ಮಾಡಲು ನಿರ್ಧರಿಸಿದ್ದರು. ಆದರೆ ಇದೀಗ ಸಂಧಾನ ವಿಫಲವಾಗಿ ಮಾದಿಗ ಸಮುದಾಯದ ಪಕ್ಷೇತರ ಅಭ್ಯರ್ಥಿಗಳು ನಾಮಪತ್ರಗಳನ್ನು ಹಿಂಪಡೆಯದೇ ಚುನಾವಣೆ ಎದುರಿಸುತ್ತಿದ್ದಾರೆ.
ಆದರೆ ಜೆಡಿಎಸ್, ಕಾಂಗ್ರೆಸ್ ನಿಂದ ಬಂಡಾಯವಾಗಿ ನಾಮಪತ್ರ ಸಲ್ಲಿಸಿದ್ದ ಮಾದಿಗ ಜನಾಂಗದ ಅಭ್ಯರ್ಥಿಗಳು ರಾಜಕೀಯ ಒತ್ತಡಕ್ಕೆ ಮಣಿದು ನಾಮಪತ್ರ ಹಿಂಪಡೆದಿದ್ದಾರೆ.
ಕ್ಷೇತ್ರದ ಅಧಿಕೃತ ಅಭ್ಯರ್ಥಿಗಳು
ಎ.ಕೆ.ಪಿ ನಾಗೇಶ್ (ಬಿಜೆಪಿ), ನಿಸರ್ಗ ನಾರಾಯಣಸ್ವಾಮಿ ಎಲ್.ಎನ್(ಜೆಡಿಎಸ್), ವೆಂಕಟಸ್ವಾಮಿ(ಕಾಂಗ್ರೆಸ್), ಇಂದಿರಮ್ಮ ಬಿ.ವಿ(ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ), ಬಿಜ್ಜವಾರ ನಾಗರಾಜ(ಅಂಬೇಡ್ಕರ್ ಪಾರ್ಟಿ ಆಫ್ ಇಂಡಿಯಾ), ನಾಗರಾಜು.ಎಂ(ರಿಪಬ್ಲಿಕನ್ ಸೇನಾ), ಕೆ.ರಾಮಚಂದ್ರಪ್ಪ(ಆಲ್ ಇಂಡಿಯಾ ಮಹಿಳಾ ಎಂಪವರ್ ಮೆಂಟ್ ಪಾರ್ಟಿ), ಡಿ.ಆರ್ ನಾರಾಯಣಸ್ವಾಮಿ(ಪಕ್ಷೇತರ), ಬಿ.ರಾಮಚಂದ್ರಪ್ಪ(ಪಕ್ಷೇತರ), ಶ್ರೀನಿವಾಸ್.ಎಂ ಸನ್ನಿದ್ಧಿ(ಪಕ್ಷೇತರ) ಒಟ್ಟು 11ಜನ ಅಭ್ಯರ್ಥಿಗಳು ದೇವನಹಳ್ಳಿ ವಿಧಾನಸಭಾ ಕ್ಷೇತ್ರದಿಂದ 2018ರ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಎದುರಿಸಲು ಸಿದ್ಧರಾಗಿದ್ದಾರೆ.












Click it and Unblock the Notifications